ಗುರುವಾರ , ಜೂನ್ 30, 2022
25 °C
ಧಾರವಾಡ ಜಿಲ್ಲೆಯ ಗ್ರಾಮಗಳಲ್ಲಿ ವ್ಯಾಪಿಸಿದ ಕೋವಿಡ್–19 ವೈರಾಣು

ಗ್ರಾಮಾರೋಗ್ಯ | ಧಾರವಾಡ: ವೈದ್ಯರ ಕೊರತೆ; ಕಾಳಜಿ ಕೇಂದ್ರಗಳತ್ತ ನಿರಾಸಕ್ತಿ

ಇ.ಎಸ್. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಗ್ರಾಮ ಮಟ್ಟದಲ್ಲಿ ಕೆಲಸ ಮಾಡಲು ಆಹ್ವಾನಿಸಿದರೆ ಅರ್ಜಿಯನ್ನೇ ಹಾಕದ ಎಂಬಿಬಿಎಸ್ ಪದವೀಧರರು, ಕೆಲಸಕ್ಕೆ ಸೇರಿದ ಒಂದೇ ದಿನಕ್ಕೆ ರಾಜೀನಾಮೆ ನೀಡಿದ ವೈದ್ಯ, ಆಸ್ಪತ್ರೆ ಕೆಲಸದ ಜತೆಗೆ, ಊರು, ಕೇರಿಗಳನ್ನು ಸುತ್ತುವ ಹೆಚ್ಚುವರಿ ಹೊಣೆಯಲ್ಲಿ ಹೈರಾಣಾದ ಶುಶ್ರೂಷಕರು–ಇದು ಜಿಲ್ಲೆಯ ಗ್ರಾಮೀಣ ಭಾಗದ ಆರೋಗ್ಯದ ಚಿತ್ರಣ.

ಹುಬ್ಬಳ್ಳಿ ಕಿಮ್ಸ್‌ ಉತ್ತರ ಕರ್ನಾಟಕ ಭಾಗದ ಅತಿ ದೊಡ್ಡ ಹೆಸರು. ಬಾಗಲಕೋಟೆ, ವಿಜಯಪುರದಿಂದಲೇ ಏಕೆ, ಸದ್ಯ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತುಮಕೂರು, ಶಿವಮೊಗ್ಗದ ಸೋಂಕಿತರೂ ಇಲ್ಲಿಗೇ ಬಂದು ದಾಖಲಾಗುತ್ತಿರುವಷ್ಟು ಪ್ರಸಿದ್ಧಿ ಪಡೆದಿದೆ. ಇದೇ ಆವರಣದಲ್ಲಿ ಸಿಎಸ್ಆರ್ ನಿಧಿಯಲ್ಲಿ ಮೇಕ್‌ಶಿಫ್ಟ್ ಆಸ್ಪತ್ರೆಯೂ ಸಿದ್ಧಗೊಳ್ಳುತ್ತಿದೆ. ಆದರೆ ಕೋವಿಡ್ ಸೋಂಕಿನ 2ನೇ ಅಲೆಯು ಗ್ರಾಮೀಣ ಭಾಗದಲ್ಲಿ ವ್ಯಾಪಿಸಿರುವ ಸಂದರ್ಭದಲ್ಲಿ ಅಲ್ಲಿನ ಆಸ್ಪತ್ರೆಗಳು ಮಾತ್ರ ವೈದ್ಯರಿಲ್ಲದ, ಹೆಚ್ಚು ಸೌಕರ್ಯಗಳಿಲ್ಲದ ಕೇಂದ್ರಗಳಂತೆ ಕಂಡುಬರುತ್ತಿವೆ.

ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತುರ್ತಾಗಿ 9 ಎಂಬಿಬಿಎಸ್ ವೈದ್ಯರು ಬೇಕಾಗಿದ್ದಾರೆ. ಆದರೆ ಈವರೆಗೂ ಅದು ಭರ್ತಿಯಾಗಿಲ್ಲ. ಇರುವ ಆಯುಷ್ ವೈದ್ಯರಿಂದಲೇ ಹೊರೆಯನ್ನು ನಿರ್ವಹಿಸಲಾಗುತ್ತಿದೆ. ಗಡಿ ಭಾಗದ ಸೋಂಕಿತರು ಗದಗ, ಬಾಗಲಕೋಟೆ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆ ಇರುವವರು ಕಿಮ್ಸ್‌ ಬಾಗಿಲಿಗೆ ಎಡತಾಕುತ್ತಿದ್ದಾರೆ.

ಸೋಂಕು ಉಲ್ಬಣಿಸಿದಾಗ ಜಿಲ್ಲೆಯ 144 ಗ್ರಾಮ ಪಂಚಾಯ್ತಿಗಳಿರುವ ಜಿಲ್ಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳು ಸ್ವಯಂ ಲಾಕ್‌ಡೌನ್ ಹೇರಿವೆ. ಹೊರಗಿನಿಂದ ಬಂದವರಿಂದಲೇ ಸೋಂಕು ಹರಡಿದೆ ಎಂಬ ಆರೋಪ ಇದೆ. ಸುಮಾರು 400 ಜನ ಗ್ರಾಮೀಣ ಭಾಗಕ್ಕೆ ಬಂದಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ದಾಖಲೆ ಹೇಳುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಆದರೆ ಜನರು ಆಮ್ಲಜನಕ, ವೆಂಟಿಲೇಟರ್‌ ಸೌಕರ್ಯಗಳುಳ್ಳ ಆಸ್ಪತ್ರೆ ಅಗತ್ಯ ಎನ್ನುತ್ತಿದ್ದಾರೆ.

ಧಾರವಾಡ ತಾಲ್ಲೂಕಿನ ನವಲೂರು, ನರೇಂದ್ರ ಗ್ರಾಮಗಳಲ್ಲಿ ಕಳೆದ 15 ದಿನಗಳಲ್ಲಿ 30ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇವರಲ್ಲಿ ಕೊರೊನಾದಿಂದ ಮೃತಪಟ್ಟವರು ಎಂದು ದಾಖಲಾಗಿರುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕನಿಷ್ಠ ದಿನಕ್ಕೊಂದು ಸಾವು ಕಾಣುತ್ತಿರುವ ಗ್ರಾಮಸ್ಥರಲ್ಲಿ ಭಯ ಮನೆ ಮಾಡಿದೆ. 

ನವಲಗುಂದ ತಾಲ್ಲೂಕಿನ ಮೊರಬ, ತಿರ್ಲಾಪುರ, ಯಮನೂರು ಸೇರಿದಂತೆ ವಿವಿಧ ಗ್ರಾಮಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮೊರಬದಲ್ಲಿ 22 ಸಾವಿರ ಜನಸಂಖ್ಯೆಯಲಿ ಕಾರ್ಮಿಕರೇ ಹೆಚ್ಚು. ಗ್ರಾಮದಲ್ಲಿರುವ 6 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಮಧ್ಯಾಹ್ನದವರೆಗೂ ವೈದ್ಯರಿಗಾಗಿ ಜನರು ಕಾದು ನಿಂತಿದ್ದರು. ವೈದ್ಯರು ಬರುವವರೆಗೂ ಕಾಯುವಂತೆ ಜನರಿಗೆ ಶುಶ್ರೂಷಕರು ಮನವಿ ಮಾಡಿಕೊಳ್ಳುತ್ತಿದ್ದರು. ಇಲ್ಲಿದ್ದ ಆಂಬುಲೆನ್ಸ್‌ ಅನ್ನು ಬೇರೆಡೆ ಸ್ಥಳಾಂತರಿಸಿರುವುದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.

ಅಣ್ಣಿಗೇರಿ ತಾಲ್ಲೂಕಿನ ಶೆಲವಡಿ, ಬಸಾಪುರ, ಕುಂದಗೋಳ ತಾಲ್ಲೂಕಿನ ಯಲಿವಾಳ ಹಾಗೂ ತರ್ಲಘಟ್ಟ ಗ್ರಾಮಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ನವಲಗುಂದ ಬಾಲಕಿಯರ ವಸತಿ ಗೃಹದಲ್ಲಿ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ಮೂರು ಪಾಳಿಯಲ್ಲಿ ತಲಾ ಒಬ್ಬರು ಶುಶ್ರೂಷಕರನ್ನು ನೇಮಿಸಲಾಗಿದೆ. ವೈದ್ಯರು ಇರಲಿಲ್ಲ. ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಿದ್ದಲ್ಲಿ ಮಾತ್ರ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಅಲ್ಲಿ ಮೇಲ್ವಿಚಾರಕರು ತಿಳಿಸಿದರು.

ಉಳಿದಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರೈಕೆ ಕೇಂದ್ರ ತೆರೆಯಲು ಸಿದ್ಧತೆಗಳು ನಡೆದಿದ್ದು, ನಾವಳ್ಳಿ, ಭದ್ರಾಪುರ ಹಾಗೂ ಕುರಹಟ್ಟಿಯಲ್ಲಿ ಕೇಂದ್ರಗಳು ಆರಂಭವಾಗಿವೆ. ಅಳಗವಾಡಿ, ಬೆಳಾರ, ಅಣ್ಣಿಗೇರಿಯಲ್ಲಿ ವೈದ್ಯರ ಕೊರತೆ ಇದೆ. ಇವುಗಳನ್ನು ಆಯುಷ್ ವೈದ್ಯರೇ ನಿಭಾಯಿಸುತ್ತಿದ್ದಾರೆ.

ಅಳ್ನಾವರ ತಾಲ್ಲೂಕು ಸ್ಥಾನಮಾನ ಪಡೆದರೂ ಇರುವುದೊಂದೇ ಪ್ರಾಥಮಿಕ ಆರೋಗ್ಯ ಕೇಂದ್ರ. ಅಲ್ಲಿ ಎಂಬಿಬಿಎಸ್‌ ವೈದ್ಯರು ಒಬ್ಬರೇ ಇದ್ದು, ಅವರು ಕಲಘಟಗಿ ಮತ್ತು ಅಳ್ನಾವರ ಎರಡೂ ತಾಲ್ಲೂಕುಗಳನ್ನು ನಿಭಾಯಿಸಬೇಕು. ಮತ್ತೊಬ್ಬರು ಆಯುಷ್ ವೈದ್ಯರು. ತಾಲ್ಲೂಕಿಗಾಗಿಯೇ ಎಂಬಿಬಿಎಸ್‌ ವೈದ್ಯರೊಬ್ಬರು ನೇಮಕಗೊಂಡಿದ್ದರು. ಒಂದೇ ದಿನಕ್ಕೆ ರಾಜೀನಾಮೆ ಸಲ್ಲಿಸಿದರು ಎಂದು ಇಲ್ಲಿನ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಇನ್ನು ಕಲಘಟಗಿ ಗ್ರಾಮದ ಮಿಶ್ರಿಕೋಟಿ, ಹೊನ್ನಾಪುರ ಗ್ರಾಮಗಳಲ್ಲಿ ಕಳೆದ ಬಾರಿಯಂತೆ ಈ ಬಾರಿ ನಿಯಂತ್ರಣ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ‘ಕಳೆದ ಬಾರಿ ಪರ ಊರಿನಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಸೋಂಕಿತರ ಮನೆಗೆ ಬೇಲಿ ಕಟ್ಟಿ ಪ್ರತ್ಯೇಕಿಸಲಾಗುತ್ತಿತ್ತು’ ಎಂದರು ನಾಗರಾಜ ಗಂಜಿಗಟ್ಟಿ.

ತಾಲ್ಲೂಕಿನ ಬಮ್ಮಿಗಟ್ಟಿ, ಮುಕ್ಕಲ, ತಾವರಗೇರಿ, ಬೆಲವಂತರ ಸೇರಿದಂತೆ ಒಟ್ಟು 14 ಕೋವಿಡ್ ಕಾಳಜಿ ಕೇಂದ್ರ ತೆರೆಯಲಾಗಿದೆ. ಇವುಗಳನ್ನು ಶುಶ್ರೂಷಕರು ನಿರ್ವಹಿಸುತ್ತಿದ್ದು, ತುರ್ತು ಇದ್ದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾಹಿತಿ ಕೊಡುತ್ತೇವೆ ಎಂದರು.

ಸಿಎಸ್‌ಆರ್ ನಿಧಿಯಲ್ಲಿ ಹಲವು ಕಂಪೆನಿಗಳು ಆಮ್ಲಜನಕ ಸಾಂದ್ರಕಗಳನ್ನು ದೇಣಿಗೆಯಾಗಿ ಜಿಲ್ಲಾಡಳಿತಕ್ಕೆ ನೀಡುತ್ತಿವೆ. ಅವುಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ಕೊರೊನಾ ಕಾಳಜಿ ಕೇಂದ್ರಕ್ಕೆ ನೀಡಲಾಗಿದೆ. ಆದರೆ ಜನರನ್ನು ಈ ಕೇಂದ್ರದತ್ತ ತರುವುದು ಮತ್ತೊಂದು ದೊಡ್ಡ ಸವಾಲಾಗಿದೆ. 

ಮಹಿಳೆಯರಿಗೆ ಅಸುರಕ್ಷತೆ ಭಾವ

ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಇರುವ ಶಾಲೆ, ಕಾಲೇಜು ಕಟ್ಟಡಗಳನ್ನೇ ಕೋವಿಡ್ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಪುರುಷ ಹಾಗೂ ಮಹಿಳೆಯರಿಗೆ ಇಲ್ಲಿ ಪ್ರತ್ಯೇಕ ವಾರ್ಡ್‌ಗಳಿವೆ. ಆದರೂ, ಅಸುರಕ್ಷೆಯ ಭಾವ ಕಾಡುವುದರಿಂದ ಮಹಿಳೆಯರು ಮನೆಯಲ್ಲೇ ಕಾಳಜಿ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಎಂದು ಕಲಘಟಗಿಯ ಕಾಳಜಿ ಕೇಂದ್ರದ ಶುಶ್ರೂಷಕಿಯೊಬ್ಬರು ತಿಳಿಸಿದರು.

ಮತ್ತೊಂದೆಡೆ ಪುರುಷರು ತಮಗೆ ಮನರಂಜನೆಗೆ ಟಿ.ವಿ. ಇಲ್ಲ, ಪತ್ರಿಕೆಗಳು ತರಿಸುತ್ತಿಲ್ಲ. ನಮಗೆ ಇಸ್ಪೀಟ್ ಎಲೆಗಳನ್ನಾದರೂ ಕೊಡಿ ಎಂದು ಪಿಡಿಒಗಳಿಗೆ ದುಂಬಾಲು ಬಿದಿದ್ದಾರೆ. ಇವರ ಬೇಡಿಕೆ ಈಡೇರಿಸುವಂತೆ ಹಿರಿಯ ಅಧಿಕಾರಿಗಳಿಂದಲೂ ಆದೇಶವಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಸಮನ್ವಯ ಕೊರತೆ

ಕೋವಿಡ್ ಆರೈಕೆ ಕೇಂದ್ರ ನಿರ್ವಹಣೆಯಲ್ಲಿ ಪಂಚಾಯ್ತಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ನೌಕರರದ್ದು ಸಮಪಾಲು. ಕೇಂದ್ರದ ನಿರ್ವಹಣೆ, ಅಲ್ಲಿರುವವರಿಗೆ ಊಟೋಪಚಾರಗಳನ್ನು ಪಂಚಾಯ್ತಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಊಟದ ವೆಚ್ಚ ಕಂದಾಯ ಇಲಾಖೆ ಪಾವತಿಸಬೇಕು. ಆದರೆ ಪಂಚಾಯ್ತಿಯವರೇ ನಿರ್ವಹಿಸುತ್ತಿರುವುದು ಹೊರೆಯಾಗಿದೆ ಎಂದನ್ನೆಲಾಗುತ್ತಿದೆ.

ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡಲು ಜಿಲ್ಲಾಡಳಿತ ಸೂಚಿಸಿದೆ. ಆದರೆ ಗ್ರಾಮಗಳಲ್ಲಿ ಇರುವ ಚಹಾ ಅಂಗಡಿಗಳೇ ಅಲ್ಲಿ ಊಟೋಪಚಾರ ನೀಡುವ ಪ್ರಮುಖ ಕೇಂದ್ರ. ಹಣ್ಣಿನ ರಸ, ಒಣ ಹಣ್ಣುಗಳು ಇತ್ಯಾದಿಗಳನ್ನು ತರುವುದಾದರೂ ಎಲ್ಲಿಂದ? ಇಸ್ಕಾನ್‌ ಸಂಸ್ಥೆಗೆ ಊಟ ನೀಡುವಂತೆ ಮಾಡಿದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಪಂಚಾಯ್ತಿಯ ಅಧಿಕಾರಿಗಳು ಹೇಳಿದರು.

ಶುಶ್ರೂಷಕಿಯರಿಗೆ ಹೊರೆ ಹೆಚ್ಚು

ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶುಶ್ರೂಷಕಿಯರೇ ನಿಭಾಯಿಸುತ್ತಿದ್ದಾರೆ. ಒಬ್ಬರು ಶುಶ್ರೂಷಕಿಯರಿಗೆ 2ರಿಂದ 3 ಹೆಚ್ಚುವರಿ ಹೊಣೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಳ್ಳಬೇಕು. ಬಯಲು ಸೀಮೆಯಲ್ಲಿ 4ರಿಂದ 5 ಸಾವಿರ ಜನಸಂಖ್ಯೆ ಇರುವ 8ರಿಂದ 10 ಓಣಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯಾದರೆ, ಮಲೆನಾಡು ಪ್ರದೇಶಗಳಲ್ಲಿ 10ರಿಂದ 12 ಹಳ್ಳಿಗಳನ್ನು ಇವರೇ ನಿಭಾಯಿಸಬೇಕಾಗಿದೆ ಎಂದು ಶುಶ್ರೂಷಕರು ತಮ್ಮ ಅಳಲು ತೋಡಿಕೊಂಡರು.

* ಕೋವಿಡ್ ಶಂಕಿತರು ಮತ್ತು ಬಾಣಂತಿಯರ ಆರೈಕೆ ಒಂದೇ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಇದು ಆತಂಕಕಾರಿ ವಿಷಯವಾಗಿದೆ.

– ಎಂ.ಎಂ. ಮುಲ್ಲಾ, ನಿವಾಸಿ, ಮೊರಬ

* ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದೇವೆ. ಸೋಂಕಿತರಿಗೆ ಮತ್ತು ಶಂಕಿತರಿಗೆ ಇಲಾಖೆ ನೀಡಿರುವ ಮಾತ್ರೆಗಳ ಪೊಟ್ಟಣಗಳನ್ನು ನೀಡಿ, ನಿಗಾ ವಹಿಸಲಾಗುತ್ತಿದೆ.

– ಮಂಜುಳಾ ಕುಂಬಾರ, ಶುಶ್ರೂಷಕಿ, ನವಲಗುಂದ

* ಒಂಬತ್ತು ವೈದ್ಯರ ನೇಮಕಾತಿಗಾಗಿ ಅರ್ಜಿ ಕರೆಯಲಾಗಿತ್ತು. ಒಬ್ಬರೂ ಅರ್ಜಿ ಹಾಕಲಿಲ್ಲ. ಶುಶ್ರೂಷಕಿಯರಲ್ಲಿ ಹಲವರು ಪದೋನ್ನತಿ ಹೊಂದಿದ್ದು, ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಇರುವ ಸಿಬ್ಬಂದಿಯಲ್ಲಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ.

– ಡಾ. ಯಶವಂತ ಮದೀನಕರ್, ಜಿಲ್ಲಾ ಆರೋಗ್ಯಾಧಿಕಾರಿ

* 20 ಸಾವಿರ ಜನಸಂಖ್ಯೆ ಇರುವ ಹಳ್ಳಿಯಲ್ಲಿ ಈವರೆಗೂ 150 ಜನರ ಕೋವಿಡ್ ಪರೀಕ್ಷೆ ಆಗಿದೆ. ಆದರೆ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮರಣಗಳಾಗಿವೆ. ಗ್ರಾಮಸ್ಥರ ಪರಿಸ್ಥಿತಿ ಕೇಳುವವರು ಯಾರೂ ಇಲ್ಲದಾಗಿದೆ.

– ಮಹಾವೀರ ಜೈನ್, ಹಿರಿಯ, ನವಲೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು