ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಿ.ಸಿ.ರಸ್ತೆ ನಿರ್ಮಾಣಕ್ಕೆ ಸಚಿವ ಶೆಟ್ಟರ್‌ ಚಾಲನೆ

ಅನುದಾನ ಬಾಕಿ: ಇಲಾಖೆ ಗಮನಕ್ಕೆ
Last Updated 4 ಆಗಸ್ಟ್ 2020, 13:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಭೀತಿ ಮತ್ತು ಇಲಾಖೆಯಿಂದ ಬಾಕಿ ಹಣ ಬರಬೇಕಿರುವ ಕಾರಣ ನಗರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದನ್ನು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ನ್ಯೂ ಕಾಟನ್ ಮಾರುಕಟ್ಟೆಯ ಭಗತಸಿಂಗ್ ವೃತ್ತದಿಂದ ಮಾರುತಿ ಪಾರ್ಸಲ್ ಕೊರಿಯರ್‌ ಕಚೇರಿವರೆಗೆ 325 ಮೀಟರ್ ಹಾಗೂ 130‌ ಮೀಟರ್ ಅಡ್ಡ ರಸ್ತೆಯಲ್ಲಿ ಸುಸಜ್ಜಿತ ಸಿ.ಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

’ಕಳೆದ ವರ್ಷ ಉಂಟಾದ ಪ್ರವಾಹದಿಂದ ನಗರದ ನಾಲ್ಕು ಕಡೆ ಸೇತುವೆಗಳು ಹಾಳಾಗಿದ್ದವು. ಇವುಗಳ ಪುನರ್ ನಿರ್ಮಾಣಕ್ಕೆ ರಾಜ್ಯ ಬಿಜೆಪಿ ಸರ್ಕಾರ ₹15 ಕೋಟಿ ವಿಶೇಷ ಅನುದಾನ ನೀಡಿತ್ತು. ಇದರಲ್ಲಿ ಉಳಿದ ₹1.83 ಕೋಟಿ ಹಣವನ್ನು ಭಗತಸಿಂಗ್ ವೃತ್ತದಿಂದ ನಡೆಯುವ ಕಾಮಗಾರಿಗೆ ವಿನಿಯೋಗಿಸಲಾಗುತ್ತಿದೆ. ಮಾರುಕಟ್ಟೆಯ ಉಳಿದ 455 ಮೀಟರ್ ಪ್ರಮುಖ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ₹1.83 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ’ ಎಂದರು.

‘ಮುಖ್ಯಮಂತ್ರಿಗಳು ಸೋಂಕಿಗೆ ಒಳಗಾಗಿದ್ದರಿಂದ ರಾಜ್ಯದ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನ ಕಾರ್ಯದರ್ಶಿಗೆ ನಿತ್ಯದ ವಹಿವಾಟು ನೋಡಿಕೊಳ್ಳಲು ಸೂಚಿಸಿದ್ದಾರೆ. ಆಯಾ ಇಲಾಖೆಗಳ ಸಚಿವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ’ ಎಂದರು.

ಐತಿಹಾಸಿಕ ಕ್ಷಣ: ಸುಪ್ರೀಂಕೋರ್ಟ್ ತೀರ್ಪಿನಂತೆ ಅಯೋಧ್ಯೆಯಲ್ಲಿ ಸೌಹಾರ್ದತೆ ಹಾಗೂ ಸರ್ವಾನುಮತದಿಂದ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದು ಐತಿಹಾಸಿಕ ಹಾಗೂ ಸುಂದರ ಕ್ಷಣ ಎಂದು ಶೆಟ್ಟರ್‌ ಬಣ್ಣಿಸಿದರು.

ಹೂಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಮಾಜಿ ಸದಸ್ಯ ಮಹೇಶ್ ಬುರ್ಲಿ, ಮಲ್ಲಿಕಾರ್ಜುನ ಸಾವುಕಾರ, ರವಿ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT