ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ತಾಸು ಹ್ಯಾಕಥಾನ್ ಇಂದಿನಿಂದ

‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ –2019’ 3ನೇ ಆವೃತ್ತಿಯ ಅಂತಿಮ ಸ್ಫರ್ಧೆಗೆ ಚಾಲನೆ
Last Updated 2 ಮಾರ್ಚ್ 2019, 13:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಆ ವಿದ್ಯಾರ್ಥಿಗಳ ಮೊಗದಲ್ಲಿ ಸಾಧಿಸಬೇಕೆಂಬ ತುಡಿತ ಎದ್ದು ಕಾಣುತ್ತಿತ್ತು. ‘ಬೆಳೆಯುವ ಸಿರಿ ಮೊಳಕೆಯಲ್ಲೇ...’ ಎಂಬ ಮಾತಿಗೆ ಅನ್ವರ್ಥದಂತಿದ್ದ ಅವರೆಲ್ಲರೂ, ಗೊತ್ತುಪಡಿಸಿದ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರಕ್ಕಾಗಿ ಸತತ 36 ತಾಸು ಕೆಲಸ ಮಾಡಲು ಅಣಿಯಾಗಿದ್ದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ –2019’ (ಸಾಫ್ಟ್‌ವೇರ್ ಎಡಿಷನ್) 3ನೇ ಆವೃತ್ತಿಯ ಅಂತಿಮ ಸ್ಫರ್ಧೆಯಲ್ಲಿ ವಿದ್ಯಾರ್ಥಿ ಸಂಶೋಧಕರಿಗೆ ಈ ಅವಕಾಶ ಲಭಿಸಿದೆ.

ವಿವಿಧಸಚಿವಾಲಯಗಳು ಮತ್ತು ಕಂಪನಿಗಳು ಗುರುತಿಸಿರುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರಗಳನ್ನು ಪ್ರದರ್ಶಿಸಲಿದ್ದಾರೆ. ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಅಭಿವೃದ್ಧಿಪಡಿಸುವಲ್ಲಿ ವಿದ್ಯಾರ್ಥಿಗಳು ಪ್ರಯತ್ನ ನಡೆಸಲಿದ್ದು, ಇಲ್ಲಿನ ಬಿವಿಬಿ ಕಾಲೇಜು ಈ ಭಾಗದ ನೋಡಲ್ ಕೇಂದ್ರವಾಗಿದೆ.

ಬೆಳಿಗ್ಗೆ 8.30ಕ್ಕೆ ಆರಂಭಗೊಂಡ ‘ಹ್ಯಾಕಥಾನ್‌’ನಲ್ಲಿ 22 ತಂಡಗಳ 250 ನವ ಸಂಶೋಧಕರು, 6 ಸಮಸ್ಯೆಗಳಿಗೆ ಮಾರ್ಚ್ 3ರಂದು ರಾತ್ರಿ 9.30ರವರೆಗೆ (36 ತಾಸಿನೊಳಗೆ) ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಲಿದ್ದಾರೆ. ಪ್ರತಿ ತಂಡದಲ್ಲಿ ಸಮಸ್ಯೆ ಸೂಚಿಸಿರುವ ಕಂಪನಿ ಅಥವಾ ಶಿಕ್ಷಣ ಸಂಸ್ಥೆಯ ಇಬ್ಬರು ಮಾರ್ಗದರ್ಶಕರಿರುತ್ತಾರೆ. ದೇಶದ 48 ಕಡೆ ನಡೆಯುತ್ತಿರುವ ಫೈನಲ್‌ನಲ್ಲಿ ಒಟ್ಟು 11 ಸಾವಿರ ಮಂದಿ ಪಾಲ್ಗೊಂಡಿದ್ದಾರೆ.

ಶುಭ ಕೋರಿದ ಸಚಿವ:

ಜೈಪುರದಲ್ಲಿ ಹ್ಯಾಕಥಾನ್‌ಗೆ ಚಾಲನೆ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌, ವಿದ್ಯಾರ್ಥಿ ಸಂಶೋಧಕರಿಗೆ ಲೈವ್‌ ಮೂಲಕ ಶುಭಾಶಯ ಕೋರಿದರು.

‘ವಿಶ್ವದಲ್ಲಿ ನಡೆಯುವ ಯಾವುದೇ ಸಂಶೋಧನೆ ಅಥವಾ ಆವಿಷ್ಕಾರದಲ್ಲಿ ಭಾರತದ ಮೆದುಳು ಕೆಲಸ ಮಾಡಿರುತ್ತದೆ. ಸಂಶೋಧಕರನ್ನು ಕೊಡುವ ಕೆಲಸವನ್ನು ಮಾಡುತ್ತಿರುವ ದೇಶ, ಮುಂದೆ ಅಂತಹ ಸಂಶೋಧನೆ ಅಥವಾ ಆವಿಷ್ಕಾರಗಳ ಮಾಲೀಕನಾಗಬೇಕಿದೆ. ಅದಕ್ಕಾಗಿ ಈ ಹ್ಯಾಕಥಾನ್‌ ಆಯೋಜಿಸಲಾಗಿದೆ. ‌ಹ್ಯಾಕಥಾನ್‌ನ ಹಿಂದಿನ ಆವೃತ್ತಿಯಲ್ಲಿ ವಿದ್ಯಾರ್ಥಿಗಳು ನೀಡಿದ 19 ಪರಿಹಾರಗಳನ್ನು ಖಾಸಗಿ ಮತ್ತು ಸರ್ಕಾರದ ವಿವಿಧ ಹಂತಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ’ ಎಂದರು.

ಸ್ಯಾಮ್‌ಸಂಗ್ ‘ಆರ್‌’ ಅಂಡ್ ‘ಡಿ’ಯನಿರ್ದೇಶಕ ಡಾ. ಲೋಕೇಶ ಬೋರೇಗೌಡ, ‘ಸಮಸ್ಯೆಯನ್ನು ಬಹು ಆಯಾಮದಿಂದ ನೋಡಿ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಎಸ್. ಶೆಟ್ಟರ ಹಾಗೂ ಸ್ಯಾಮ್‌ಸಂಗ್ ‘ಆರ್‌’ ಅಂಡ್ ‘ಡಿ’ಯ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಬಾಲಾಜಿ ಹೊಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT