ಮಂಗಳವಾರ, ಮಾರ್ಚ್ 28, 2023
33 °C
ನೆಹರೂ ಕ್ರೀಡಾಂಗಣದಲ್ಲಿ ಹೊಸ ಕ್ರೀಡಾ ಸೌಲಭ್ಯ

ಹುಬ್ಬಳ್ಳಿ: ಮೈದಾನ ನವೀಕರಣ ಕಾಮಗಾರಿ ವಿಳಂಬ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿರುವ ನೆಹರೂ ಕ್ರೀಡಾ ಮೈದಾನದಲ್ಲಿ ಕೈಗೊಂಡಿರುವ ನವೀಕರಣ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಕ್ರೀಡಾಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಮೈದಾನ ಹುಬ್ಬಳ್ಳಿಗರ ಕ್ರೀಡಾ ಚಟುವಟಿಕೆಗಳ ಹಾಗೂ ವಾಕಿಂಗ್‌ ಪ್ರಿಯರ ಪ್ರಮುಖ ತಾಣವಾಗಿದೆ. ಮೊದಲು ಇಲ್ಲಿ ಒಳಾಂಗಣ ಮೈದಾನದಲ್ಲಿ ಬ್ಯಾಡ್ಮಿಂಟನ್‌ ಅಂಕಣವಿತ್ತು. ಹೊರಾಂಗಣದಲ್ಲಿ ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ಗಳಿದ್ದರೂ ದುರಸ್ತಿಗೆ ಕಾದಿದ್ದವು. ರಾತ್ರಿ ವೇಳೆ ಮೈದಾನ ಅನ್ಯ ಚಟುವಟಿಕೆಗಳ ತಾಣವಾಗುತ್ತಿತ್ತು.

ರಾಜನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣ ಹೊರತುಪಡಿಸಿ ಕ್ರಿಕೆಟ್‌ ಚಟುವಟಿಕೆಗೆ ನೆಹರೂ ಮೈದಾನ ಪ್ರಮುಖ ವೇದಿಕೆಯಾಗಿತ್ತು. ವಿವಿಧ ಸಮಾಜಗಳ ಹಾಗೂ ಸಂಸ್ಥೆಗಳ ಟೂರ್ನಿಗಳು ಇದೇ ಮೈದಾನದಲ್ಲಿ ನಡೆಯುತ್ತಿದ್ದವು. ನೀರಿನ ಕೊಳವೆ ಒಡೆದು ಮೈದಾನದಲ್ಲೆಲ್ಲ ನೀರು ಹರಿಯುತ್ತಿತ್ತು. ಜೋರಾಗಿ ಮಳೆ ಬಂದರಂತೂ ಕಾಲಿಡಲೂ ಸಾಧ್ಯವಾಗುತ್ತಿರಲಿಲ್ಲ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹19 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಒಂದೂವರೆ ವರ್ಷದ ಹಿಂದೆಯೇ ಟೆಂಡರ್ ಆಗಿದೆ. ಮೊದಲಿನ ಯೋಜನೆ ಪ್ರಕಾರ ಈಗಿರುವ ಮೈದಾನದ ವಾಣಿಜ್ಯ ಸಂಕೀರ್ಣಗಳನ್ನು ಕೆಡವಿ ಹೊಸದಾಗಿ ಕಟ್ಟಲು ಉದ್ದೇಶಿಸಲಾಗಿತ್ತು. ಬಳಿಕ ಯೋಜನೆ ಬದಲಿಸಿ ಕ್ರೀಡಾಂಗಣ ನವೀಕರಣ ಮಾತ್ರ ಮಾಡಲು ತೀರ್ಮಾನಿಸಲಾಯಿತು. ಹೀಗೆ ಹಲವು ಬಾರಿ ವಿನ್ಯಾಸದಲ್ಲಿ ಬದಲಾವಣೆ ಮಾಡಿದ್ದರಿಂದ ಕಾಮಗಾರಿ ನಿಗದಿತ ಸಮಯದಲ್ಲಿ ಆರಂಭವಾಗಲಿಲ್ಲ.

ಕಾಮಗಾರಿ ಚುರುಕುಗೊಳಿಸಬೇಕು ಎಂದು ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌, ಗುತ್ತಿಗೆ ಪಡೆದ ಕಂಪನಿಗೆ ನೋಟಿಸ್‌ ಜಾರಿ ಮಾಡಿದೆ. ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ‘ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣದಿಂದ ಕಾರ್ಮಿಕರ ಕೊರತೆ ಎದುರಾಯಿತು. ಕೆಲಸ ಚುರುಕುಗೊಳಿಸಿ ಡಿಸೆಂಬರ್‌ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಕಾಮಗಾರಿ ಹೇಗೆ ವೇಗವಾಗಿ ಮಾಡುತ್ತಾರೆ ಎನ್ನುವುದನ್ನು ಎರಡು ತಿಂಗಳು ಕಾದು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಹೊಸ ಮೈದಾನ: ನವೀಕರಣದಲ್ಲಿ ಒಟ್ಟು 6.4 ಎಕರೆ ಜಾಗದಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌, ಕಬಡ್ಡಿ, ಕುಸ್ತಿ ಅಂಕಣ, ಕರಾಟೆ, ಟೇಬಲ್‌ ಟೆನಿಸ್‌, ಜಿಮ್ನಾಸ್ಟಿಕ್‌ ಅಂಕಣ, ಲಾಂಗ್‌ ಜಂಪ್‌, ಕ್ರಿಕೆಟ್‌ ಅಭ್ಯಾಸಕ್ಕೆ ನೆಟ್ಸ್‌ ಸೌಲಭ್ಯಗಳು ನಿರ್ಮಾಣವಾಗಲಿವೆ. ಆದರೆ, ಜಿಲ್ಲೆಯ ಕ್ರೀಡಾಪ್ರೇಮಿಗಳ ಬಹುವರ್ಷಗಳ ಬೇಡಿಕೆಯಾಗಿರುವ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ ಈ ಯೋಜನೆಯಲ್ಲಿಲ್ಲ.

‘ವಾಕಿಂಗ್‌ ಮಾಡುವವರು, ಕ್ರಿಕೆಟ್‌ ಆಡುವವರು ಬರುತ್ತಾರೆ. ಕೆಲ ಬಾರಿ ಸರ್ಕಾರಿ ಕಾರ್ಯಕ್ರಮಗಳೂ ನಡೆಯುತ್ತವೆ. ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಿದರೆ ಕೆಲ ದಿನಗಳಲ್ಲಿಯೇ ಹಾಳಾಗಿ ಹೋಗುತ್ತದೆ. ಆದ್ದರಿಂದ ತಾರಿಹಾಳದಲ್ಲಿ ನಿರ್ಮಾಣವಾಗಲಿರುವ ಇನ್ನೊಂದು ಮೈದಾನದಲ್ಲಿ ಎಂಟು ಲೇನ್‌ಗಳ ಟ್ರ್ಯಾಕ್‌ ನಿರ್ಮಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಫುಟ್‌ಬಾಲ್‌ ಪಂದ್ಯವನ್ನಾಡಲು ನೆಹರೂ ಮೈದಾನ ಬಳಸುತ್ತಿದ್ದೆವು. ಈಗ ಮೈದಾನವಿಲ್ಲದ ಕಾರಣ ಅಭ್ಯಾಸ ನಿಂತುಹೋಗಿದೆ. ನವೀಕರಣ ಕಾರ್ಯ ಚುರುಕುಗೊಳಿಸಬೇಕು. ಸ್ವಪ್ನಿಲ್‌ ಕುಮಾಟಕರ, ಸ್ಪೋರ್ಟಿಂಗ್‌ ಹುಬ್ಬಳ್ಳಿ ಫುಟ್‌ಬಾಲ್‌ ಅಕಾಡೆಮಿ ಅಧ್ಯಕ್ಷ

* ಟ್ರ್ಯಾಕ್‌ನಲ್ಲಿ ಓಡಲು ನೆಹರೂ ಮೈದಾನ ಪ್ರಶಸ್ತ ಸ್ಥಳವಾಗಿತ್ತು. ಅಲ್ಲಿ ಬೇಗನೆ ಕೆಲಸ ಮುಗಿಯದ ಕಾರಣ ರಸ್ತೆ ಮೇಲೆ ಓಡಿ ಅಭ್ಯಾಸ ಮಾಡುವಂತಾಗಿದೆ.

- ವಿನಾಯಕ ಎನ್‌.ಎಸ್‌., ಅಥ್ಲೀಟ್‌, ಹುಬ್ಬಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು