ಆರೋಗ್ಯ ಕ್ಷೇತ್ರಕ್ಕೆ ಬೇವು–ಬೆಲ್ಲವಾದ ಜಿಎಸ್‌ಟಿ

7
ಆಸ್ಪತ್ರೆ ಶುಲ್ಕದಲ್ಲಿ ಯಥಾಸ್ಥಿತಿ; ವೈದ್ಯಕೀಯ ಪರಿಕರ ಕಂಪನಿಗಳಿಗೆ ಅಲ್ಪ ಬಿಸಿ

ಆರೋಗ್ಯ ಕ್ಷೇತ್ರಕ್ಕೆ ಬೇವು–ಬೆಲ್ಲವಾದ ಜಿಎಸ್‌ಟಿ

Published:
Updated:
Deccan Herald

ಹುಬ್ಬಳ್ಳಿ: ವೈದ್ಯಕೀಯ ಸೇವೆಯನ್ನು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಹಾಗಾಗಿ ರೋಗಿಗಳು, ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳ ಮೇಲೆ ಜಿಎಸ್‌ಟಿ ಪರಿಣಾಮವಿಲ್ಲ. ಆದರೆ, ವೈದ್ಯಕೀಯ ಪರಿಕರ ಮತ್ತು ಔಷಧ ತಯಾರಿಕಾ ಕಂಪನಿಗಳ ಮೇಲೆ ಜಿಎಸ್‌ಟಿ ಬಿಸಿ ಸ್ಪಲ್ಪ ತಟ್ಟಿರುವುದರಿಂದ, ಈ ಕ್ಷೇತ್ರಕ್ಕೆ ಬೇವು ಬೆಲ್ಲದಂತಾಗಿದೆ.

ಪರೋಕ್ಷ ಹೊರೆ:

‘ಔಷಧಗಳಿಗಿಂತ ವೈದ್ಯಕೀಯ ಪರಿಕರಗಳಾದ ವೆಂಟಿಲೇಟರ್, ಎಂಆರ್‌ಐ, ಸಿಟಿ ಸ್ಕ್ಯಾನ್, ಗಾಮಾ ಮಷಿನ್‌ಗಳ ಖರೀದಿ ಮೇಲೆ ಜಿಎಸ್‌ಟಿ ಪರಿಣಾಮ ಬೀರಿದೆ. ಉದಾಹರಣೆಗೆ ಅತ್ಯುನ್ನತ ಮಾದರಿಯ ವೆಂಟಿಲೇಟರ್‌ ಕನಿಷ್ಠ ₹ 50 ಲಕ್ಷ ಇದೆ. ಇದರ ಬಳಕೆಯ ಅವಧಿ 5ರಿಂದ 10 ವರ್ಷ ಮಾತ್ರ. ದುಬಾರಿ ಬೆಲೆ ತೆತ್ತು ಖರೀದಿಸುವ ಆಸ್ಪತ್ರೆಗಳು ಅನಿವಾರ್ಯವಾಗಿ, ಅದನ್ನು ಗ್ರಾಹಕರ ಮೇಲೆ ಹೇರುತ್ತವೆ. ಇದು ಪರೋಕ್ಷವಾಗಿ ಗ್ರಾಹಕನಾದ ರೋಗಿಗೆ ತಟ್ಟಲಿದೆ’ ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಂಘದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಡಾ.ಜಿ.ಬಿ. ಸತ್ತೂರ.

‘ಸರ್ಕಾರ ವೈದ್ಯಕೀಯ ಪರಿಕರಗಳ ಮೇಲಿನ ಜಿಎಸ್‌ಟಿಯನ್ನು ಆದಷ್ಟು ಕಡಿತಗೊಳಿಸಬೇಕು. ಆಮದು ಪರಿಕರಗಳ ಮೇಲಿನ ಸುಂಕ ತಗ್ಗಿಸಬೇಕು. ಆಗ ಸರ್ಕಾರ ಹೇಳಿದ ರಿಯಾಯ್ತಿ ಶುಲ್ಕದಲ್ಲಿ ಆಸ್ಪತ್ರೆಗಳು ಬಡವರಿಗೆ ಸೇವೆ ಒದಗಿಸಬಲ್ಲವು’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಪಾರದರ್ಶಕತೆಗೆ ಒತ್ತು:

‘ಜಿಎಸ್‌ಟಿ ಜಾರಿ ಬಳಿಕ ಪಾರದರ್ಶಕತೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ರೋಗಿಗಳಿಗೆ ನೀಡುವ ಬಿಲ್‌ ಜಿಎಸ್‌ಟಿಯಿಂದ ಹೊರತಾಗಿದೆ. ನಾವು ಬಳಸುವ ಔಷಧ ಮತ್ತು ಪರಿಕರಗಳ ಮೇಲೆ ಮಾತ್ರ ಜಿಎಸ್‌ಟಿ ಇರುತ್ತದೆ’ ಎನ್ನುತ್ತಾರೆ ಸಿಂಧೂರ ಆಸ್ಪತ್ರೆಯ ಡಾ. ಎಂ.ಸಿ. ಸಿಂಧೂರ.

‘ವೈದ್ಯಕೀಯ ಪರಿಕರಗಳ ದರದಲ್ಲಿ ವ್ಯತ್ಯಾಸವಾಗಿದೆ. ಇದೀಗ ಭಾರತದಾದ್ಯಂತ ಎಲ್ಲೇ ಖರೀದಿಸಿದರೂ ಒಂದೇ ರೀತಿಯ ಬೆಲೆ ಇದೆ. ಮುಂಚೆ ನಾವು ಡೀಲರ್‌ಗಳ ಮೂಲಕ, ಖರೀದಿಸುತ್ತಿದ್ದರಿಂದ ದರ ವ್ಯತ್ಯಾಸ ಇರುತ್ತಿತ್ತು. ಅದೀಗ ಬದಲಾಗಿದೆ’ ಎಂದು ಹೇಳುತ್ತಾರೆ.

ತಗ್ಗಿದ ತೆರಿಗೆ:

‘ಜಿಎಸ್‌ಟಿ ಜಾರಿ ಬಳಿಕ, ಕಾರ್ಪೊರೇಟ್ ತೆರಿಗೆ ಶೇ 30ರಿಂದ ಶೇ 28ಕ್ಕೆ ತಗ್ಗಿರುವುದು ಆಸ್ಪತ್ರೆಗಳಿಗೆ ಅನುಕೂಲವಾಗಿದೆ. ಬಹುತೇಕ ಖಾಸಗಿ ಆಸ್ಪತ್ರೆಗಳು ಸಣ್ಣ ಕಂಪನಿಯಡಿ ಕೆಲಸ ಮಾಡುತ್ತವೆ. ಜಿಎಸ್‌ಟಿ ಬಂದ ಬಳಿಕ, ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏನೇ ಖರೀದಿಸಿದರೂ, ಬಿಲ್ ಕೊಡಲೇಬೇಕಿದೆ. ಎಲ್ಲವೂ ಪಾರದರ್ಶಕವಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ನರರೋಗ ವಿಜ್ಞಾನ ಆಸ್ಪತ್ರೆಯ ಡಾ. ಕ್ರಾಂತಿ ಕಿರಣ್.

‘ತಗ್ಗಿದ ಔಷಧಗಳ ಬೆಲೆ’

‘ಜಿಎಸ್‌ಟಿ ಜಾರಿಯಿಂದ ಔಷಧ ಮಾರಾಟದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ.  ಕೆಲ ಮಾತ್ರೆ ಹಾಗೂ ಔಷಧಗಳ ಬೆಲೆಯೂ ತಗ್ಗಿದೆ. ಆದರೆ, ಗ್ರಾಹಕರಿಗೆ ಜಿಎಸ್‌ಟಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ, ಕೆಲವೊಮ್ಮೆ ಔಷಧ ಅಂಗಡಿಯವರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅವರನ್ನು ಸಂಭಾಳಿಸುವುದು ಕೆಲವೊಮ್ಮೆ ಸವಾಲಾಗಿ ಪರಿಣಮಿಸುತ್ತದೆ’ ಎಂದು ಚನ್ನಮ್ಮ ವೃತ್ತದಲ್ಲಿರುವ ಭಾವಿಕಟ್ಟಿ ಮೆಡಿಕಲ್ಸ್‌ನ ಮಾರಾಟ ಪ್ರತಿನಿಧಿ ಹನುಮಂತಗೌಡ ಹೊಳಲಗೌಡ್ರ ಹೇಳುತ್ತಾರೆ.

‘ಬಿಪಿ ಸೇರಿದಂತೆ ಕೆಲ ಮಾತ್ರೆಗಳ ಬೆಲೆ ತಗ್ಗಿದೆ. ಜತೆಗೆ, ಜನೌಷಧ ಮಳಿಗೆಗಳಲ್ಲಿ ಶೇ 40ರಿಂದ 50ರಷ್ಟು ಕಡಿಮೆ ಬೆಲೆಗೆ ಮಾತ್ರೆಗಳು ಸಿಗುತ್ತವೆ. ಇದರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ’ ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಂಘದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಡಾ.ಜಿ.ಬಿ. ಸತ್ತೂರ.

ಚಿಕಿತ್ಸೆ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹಾಗಾಗಿ, ಜಿಎಸ್‌ಟಿ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ ಎನಿಸುತ್ತದೆ
ಆಸಿಫ್ ಧಾರವಾಡಕರ್
– ಸಂಗಮ್ ಕಾಲೊನಿ, ಹುಬ್ಬಳ್ಳಿ

ವೈದ್ಯರು ಮುಂಚೆ ಎಷ್ಟು ಶುಲ್ಕ ತೆಗೆದುಕೊಳ್ಳುತ್ತಿದ್ದರೋ, ಈಗಲೂ ಅಷ್ಟೇ ಪಡೆಯುತ್ತಿದ್ದಾರೆ. ಸಾಮಾನ್ಯ ಜನರಿಗೆ ಜಿಎಸ್‌ಟಿಯಿಂದ ಯಾವುದೇ ತೊಂದರೆಯಾಗಿಲ್ಲ
– ಕಾಶಿನಾಥ ಗಣಿ, ಉಣಕಲ್, ಹುಬ್ಬಳ್ಳಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !