ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ: ‘ರೈತರಿಗೆ ಹೆಣ್ಣು ಕೊಡುತ್ತಿಲ್ಲ: ಯುವ ರೈತರ ಅಳಲು’

ಕುಂದಗೋಳ: ತಹಶೀಲ್ದಾರ್‌ಗೆ ಯುವ ರೈತರ ಮನವಿ
Last Updated 20 ನವೆಂಬರ್ 2022, 5:23 IST
ಅಕ್ಷರ ಗಾತ್ರ

ಕುಂದಗೋಳ: ‘ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಅನ್ನದಾತನ ಮಹತ್ವ ಏನು ಎಂಬುದರ ಬಗ್ಗೆ ಜಾಗೃತಿ ಮೂಡಿಸಿ’ ಎಂದು ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಯುವ ರೈತರು ತಹಶೀಲ್ದಾರ್‌
ಅಶೋಕ ಶಿಗ್ಗಾಂವ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌, ‘ಕಲಾತಂಡಗಳ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ’ ಎಂದರು.

ಪಶು ಇಲಾಖೆ ತಾಲ್ಲೂಕು ವೈದ್ಯಾಧಿಕಾರಿ ಬಿ.ಬಿ. ಅವಾರಿ ಅವರು ತಮ್ಮ ಇಲಾಖೆ ವರದಿ ಮಂಡಿಸುವಾಗ ರೈತರು ಮಾತನಾಡಿ, ‘ಗೋಪೂಜೆ ಮಾಡಬೇಕೆಂದು ಹೇಳುತ್ತಾರೆ. ಇಲ್ಲಿ ಚರ್ಮಗಂಟು ರೋಗದಿಂದ ದನಗಳು ನರಳುತ್ತಿದ್ದರೂ ಸರಿಯಾಗಿ ಚಿಕಿತ್ಸೆ ನೀಡಲು ಸಂಶಿಯ ಪಶು ಆಸ್ಪತ್ರೆಯವರು ಸ್ಪಂದಿಸುವುದಿಲ್ಲ’ ಎಂದು ದೂರಿದರು. ಅದಕ್ಕೆ ಅವಾರಿ ಅವರು, ‘ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಇದರಿಂದಾಗಿ ತೊಂದರೆ ಆಗಿರಬಹುದು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಚಾಕಲಬ್ಬಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು,ವಾರಕ್ಕೊಮ್ಮೆ ನಳದ ನೀರು ಬರುತ್ತಿದೆ. ಕೆರೆ ನೀರು ಹಾಳಾಗುತ್ತಿದ್ದು, ಆ ನೀರನ್ನು ಬಾಟಲಿಗಳಲ್ಲಿ ತಂದು ತಹಶೀಲ್ದಾರ್‌ ಮುಂದೆ ಇಟ್ಟು ತಮ್ಮ ಸಮಸ್ಯೆ ಹೇಳಿಕೊಂಡರು.

ಹೊಸಳ್ಳಿ-ಚಾಕಲಬ್ಬಿ ರಸ್ತೆ ಕಾಮಗಾರಿಯಾಗಿ ಕೇವಲ ಎರಡು ವರ್ಷವಾಗಿದ್ದು ಅದು ಪೂರ್ಣ ಹಾಳಾಗಿದೆ ಎಂದು ದೂರಿದರು. ಈ ಬಗ್ಗೆ ವರದಿ ಸಲ್ಲಿಸುವಂತೆ ಹಾಗೂ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಸೂಚನೆ ನೀಡಿದರು.

ಆರೋಗ್ಯ ಇಲಾಖೆ ಅಧಿಕಾರಿ ಭಾಗೀರತಿ ಮಡ್ಲೇರಿ, ಶಿಕ್ಷಣ ಇಲಾಖೆಯ ಬಿ.ಇ.ಒ ವಿದ್ಯಾ ಕುಂದರಗಿ, ಕೃಷಿ ಇಲಾಖಾಧಿಕಾರಿ ಭಾರತಿ ಮೆಣಸಿನಕಾಯಿ, ಭೂಮಾಪನ ಇಲಾಖೆ ಅಧಿಕಾರಿ ಕುಲಕರ್ಣಿ ಇಲಾಖೆ ವರದಿ ಮಂಡಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ಯಲ್ಲಪ್ಪ ಬಾರಕೇರ, ವಿಠ್ಠಲ ಘಾಟಗೆ, ಗುರುನಾಥ ಹೊನ್ನಿಹಳ್ಳಿ, ದೇವಪ್ಪ ಕಾಳಿ, ಇಬ್ರಾಹಿಂ ನದಾಫ, ಮುತ್ತಪ್ಪ ಕಟಗಿ, ಹನಂತಪ್ಪ ಗರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT