ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಚುನಾವಣೆ: ಬದಲಾದ ಮೀಸಲಾತಿ– ವಾರ್ಡ್‌ ಹಿಡಿತ ಬಿಡಲೊಲ್ಲದ ಮಾಜಿ ಸದಸ್ಯರು

Last Updated 25 ಆಗಸ್ಟ್ 2021, 14:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್‌ಗಳ ಮೀಸಲಾತಿ ಬದಲಾಗಿದ್ದರಿಂದ, ಮಾಜಿ ಸದಸ್ಯರು ತಮ್ಮ ಪತ್ನಿ ಅಥವಾ ಪತಿಯನ್ನು ಕಣಕ್ಕೆ ಇಳಿಸಿದ್ದಾರೆ. 67 ಇದ್ದ ವಾರ್ಡ್‌ಗಳ ಸಂಖ್ಯೆ ಪುನರ್‌ವಿಂಗಡಣೆ ಬಳಿಕ 82ಕ್ಕೆ ಏರಿಕೆಯಾಗಿದೆ. ಅದರಲ್ಲಿ 40 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿವೆ.

ತಮಗೆ ಟಿಕೆಟ್ ಸಿಗದೆ ಬೇರೆಯವರ ಪಾಲಾಗಿ, ವಾರ್ಡ್‌ನಲ್ಲಿ ಹೊಂದಿರುವ ಹಿಡಿತ ಎಲ್ಲಿ ಕೈತಪ್ಪುತ್ತದೆಯೋ ಎಂಬ ಆತಂಕ ಮಾಜಿ ಸದಸ್ಯರನ್ನು ಕಾಡುತ್ತಿದೆ. ಲಿಂಗಾಧಾರಿತ ಮೀಸಲಾತಿಯಿಂದ ತಮಗೆ ಟಿಕೆಟ್ ತಪ್ಪಿದರೂ, ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಿಸಿ ವಾರ್ಡ್‌ನಲ್ಲಿ ಹಿಡಿತ ಸಾಧಿಸಲು ತಂತ್ರ ಹೆಣೆದಿದ್ದಾರೆ.

ಕಾಂಗ್ರೆಸ್‌ನಲ್ಲೇ ಹೆಚ್ಚು

ಈ ಬಾರಿ ಕಾಂಗ್ರೆಸ್‌ನಲ್ಲೇ ಮಾಜಿ ಸದಸ್ಯರ ಪತ್ನಿಯರು ಹೆಚ್ಚಾಗಿ ಕಣದಲ್ಲಿದ್ದಾರೆ. ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ 76ನೇ ವಾರ್ಡ್‌ನಿಂದ ತಮ್ಮ ಪತ್ನಿ ಸಾಯಿರಾಬಾನು ಕಿತ್ತೂರ, 73ರಿಂದ ಮಾಜಿ ಸದಸ್ಯ ದಶರಥ ವಾಲಿ ಅವರ ಪತ್ನಿ ಶೋಭಾ ವಾಲಿ, 50ರಿಂದ ಮಾಜಿ ಸದಸ್ಯ ಮೋಹನ ಹಿರೇಮನಿ ಅವರು ಪತ್ನಿ ಮಂಗಳಾ ಹಿರೇಮನಿ ಕಣದಲ್ಲಿದ್ದಾರೆ.

39ರಿಂದ ಎಂ.ಎಸ್. ಪಾಟೀಲ ಅವರ ಪತ್ನಿ ರತ್ನಾ ಪಾಟೀಲ, 60ನೇ ವಾರ್ಡ್‌ನಿಂದ ಬಶೀರ್ ಗುಡಮಾಲ್ ಅವರ ಪತ್ನಿ ಕೌಸರಬಾನು ಗುಡಮಾಲ್ ಹಾಗೂ 61ರಿಂದ ಮಾಜಿ ಸದಸ್ಯೆ ಸುಧಾ ಮಣಿಕುಂಟಲಾ ಅವರ ಪತಿ ರಾಜಾರಾವ್ ಮಣಿಕುಂಟಲಾ ಚುನಾವಣೆಗೆ ನಿಂತಿದ್ದಾರೆ. ಅವರ ಪತ್ನಿ 59ರಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಸದಸ್ಯೆಯೂ ಆಗಿರುವ ದೀಪಾ ನಾಗರಾಜ ಗೌರಿ ಅವರ ಅತ್ತೆ ಮಂಗಳಾ ಗೌರಿ ಅವರು ಟಿಕೆಟ್ ಪಡೆದಿದ್ದಾರೆ.

ಅದೇ ರೀತಿ 63ನೇ ವಾರ್ಡ್‌ನ ಮಾಜಿ ಮಾಜಿ ಕಾಂಗ್ರೆಸ್ ಸದಸ್ಯೆ ತಬಸ್ಸುಮ್ ಇಲಿಯಾಸ್ ಮನಿಯಾರ ಅವರ ಪತಿ ಇಲಿಯಾಸ್ ಮನಿಯಾರ ಸ್ಪರ್ಧಿಸಿದ್ದಾರೆ.

ಬಿಜೆಪಿಯಲ್ಲಿ ಮಾಜಿ ಸದಸ್ಯೆಯೊಬ್ಬರ ಪತಿ ಮತ್ತೆಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 38ನೇ ವಾರ್ಡ್‌ನಿಂದ ತಮ್ಮ ಪತ್ನಿ ಅಶ್ವಿನಿ ಮಜ್ಜಗಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದ ಮಾಜಿ ಸದಸ್ಯರೂ ಆದ ತಿಪ್ಪಣ್ಣ ಮಜ್ಜಗಿ, ಮೀಸಲಾತಿ ಬದಲಾಗಿದ್ದರಿಂದ ಈ ಸಲ ತಾವೇ ಅಖಾಡದಲ್ಲಿದ್ದಾರೆ. ಉಳಿದಂತೆ, 64ನೇ ವಾರ್ಡ್‌ನಿಂದ ಸತೀಶ ಶೇಜವಾಡಕರ (ನಾಮ ನಿರ್ದೇಶಿತ ಮಾಜಿ ಸದಸ್ಯ) ಅವರು ತಮ್ಮ ಪತ್ನಿ ರುಕ್ಮಿಣಿ ಶೇಜವಾಡಕರ ಹಾಗೂ ಕಳೆದ ಸಲ ಉಪ ಮೇಯರ್ ಆಗಿದ್ದ ಲಕ್ಷ್ಮಿಬಾಯಿ ಬಿಜವಾಡ ಅವರ ಅಣ್ಣನ ಮಗ ಅನುಪಕುಮಾರ ಬಿಜವಾಡ 61ನೇ ವಾರ್ಡ್‌ನಿಂದ ಚುನಾವಣೆಗೆ ನಿಂತಿದ್ದಾರೆ.

ಪಕ್ಷದಿಂದ ತಮ್ಮ ಮನೆಯವರಿಗೆ ಟಿಕೆಟ್ ಸಿಗದಿದ್ದರಿಂದ ಕೆಲವರು, ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

54ನೇ ವಾರ್ಡ್‌ನಿಂದ ಬಿಜೆಪಿಯ ಮಾಜಿ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಅವರ ಪತ್ನಿ ಯಶೋದಾ ಗಂಡಗಾಳೇಕರ ಪಕ್ಷೇತರಾಗಿ ಸ್ಪರ್ಧಿಸಿದ್ದಾರೆ.

ಮೂವರು ಮಾಜಿಯರ ಪತ್ನಿಯರು ಕಣಕ್ಕೆ

ಸಾಮಾನ್ಯ ಮಹಿಳೆಗೆ ಮೀಸಲಾಗಿರುವ 82ನೇ ವಾರ್ಡ್‌ನಿಂದ ಕಾಂಗ್ರೆಸ್‌ನ ಮೂವರು ಮಾಜಿ ಸದಸ್ಯರ ಪತ್ನಿಯರು ಕಣಕ್ಕಿಳಿದಿದ್ದಾರೆ.

ವಿಜನಗೌಡ ಪಾಟೀಲ ಅವರ ಪತ್ನಿ ವಿದ್ಯಾ ಪಾಟೀಲ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಟಿಕೆಟ್ ಸಿಗದಿದ್ದರಿಂದ ಅದೇ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಮೋಹನ ಅಸುಂಡಿ ಅವರ ಪತ್ನಿ ಅಕ್ಷತಾ ಅಸುಂಡಿ, ಯಮನೂರು ಜಾಧವ ಅವರ ಪತ್ನಿ ಲಕ್ಷ್ಮಿಬಾಯಿ ಜಾಧವ ಅವರು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಸದಸ್ಯರಾಗಿದ್ದ ಲಕ್ಷ್ಮಿಬಾಯಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT