ಗೈರಾಗುವ ಗುತ್ತಿಗೆ ಪೌರಕಾರ್ಮಿಕರನ್ನು ಕೈಬಿಡಿ

7
ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಣ್ಣವರ ನಿರ್ದೇಶನ

ಗೈರಾಗುವ ಗುತ್ತಿಗೆ ಪೌರಕಾರ್ಮಿಕರನ್ನು ಕೈಬಿಡಿ

Published:
Updated:
Deccan Herald

ಹುಬ್ಬಳ್ಳಿ: ಅವಳಿ ನಗರದಲ್ಲಿ ಇನ್ನು ಮುಂದೆ ಸ್ವಚ್ಛತಾ ಕೆಲಸಕ್ಕೆ ಗೈರಾಗುವ ಗುತ್ತಿಗೆ ಪೌರಕಾರ್ಮಿಕರನ್ನು ಕೈಬಿಟ್ಟು, ಬೇರೆಯವನ್ನು ನೇಮಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ನಡೆಸುವಂತೆ ಗುತ್ತಿಗೆದಾರರಿಗೆ ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ನಿರ್ದೇಶಿಸಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಗುತ್ತಿಗೆದಾರರು, ವಲಯಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಗೈರಾದವರನ್ನು ಕೆಲಸದಿಂದ ತೆಗೆದುಹಾಕಿ. ಈ ಬಗ್ಗೆ ಯಾರಾದರೂ ತಕರಾರು ಮಾಡಿದರೆ ಅಂತವರ ವಿರುದ್ಧ ಪೊಲೀಸ್‌ ದೂರು ದಾಖಲಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಕೆಲವರಿಂದಾಗಿ ನಗರದ ಸ್ವಚ್ಛತೆ ಹದಗೆಡಬಾರದು. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದರು.

ಮೂರ್ನಾಲ್ಕು ದಿನಗಳಿಂದ ಕೆಲಸಕ್ಕೆ ಬಾರದ ಗುತ್ತಿಗೆ ಪೌರಕಾರ್ಮಿಕರ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ? ಯಾವ ರೀತಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೀರಿ? ಎಂದು ಅವರು ಗುತ್ತಿಗೆದಾರರನ್ನು ಅವರು ಪ್ರಶ್ನಿಸಿದರು.

ಅವಳಿ ನಗರದಲ್ಲಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳದೇ ಇರುವ ಗುತ್ತಿಗೆದಾರರಿಗೆ ನೋಟಿಸ್‌ ನೀಡುವಂತೆ ವಲಯಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ದಿನ ಬೆಳಿಗ್ಗೆ ಗುತ್ತಿಗೆದಾರರು, ಆರೋಗ್ಯಾಧಿಕಾರಿಗಳು, ವಲಯಾಧಿಕಾರಿಗಳು ಸ್ಥಳಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕು. ಸ್ಥಳದಲ್ಲಿ ನಿಂತು ಕೆಲಸ ಮಾಡಿಸಬೇಕು. ಬೆಳಿಗ್ಗೆ 6.30ರ ಒಳಗಾಗಿ ಪೌರಕಾರ್ಮಿಕರ ಹಾಜರಾತಿ ತೆಗೆದುಕೊಂಡು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಂಟ್ರೋಲ್‌ ರೂಂಗೆ ಫೋಟೊ ಸಹಿತ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಅರ್ಧದಷ್ಟು ಗೈರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಗುತ್ತಿಗೆ  ನಡೆಸುತ್ತಿರುವ ಧರಣಿಯಲ್ಲಿ ಶೇ 50ರಷ್ಟು ಗುತ್ತಿಗೆ ಪೌರಕಾರ್ಮಿಕರು ಪಾಲ್ಗೊಂಡಿರುವುದಾಗಿ ಗುತ್ತಿಗೆದಾರರು ಸಭೆಗೆ ಮಾಹಿತಿ ನೀಡಿದರು.

ಸಹಾಯಕತೆ: ‘ಗೈರಾಗುವ ಗುತ್ತಿಗೆ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದರೆ ಮೇಯರ್‌, ಆಯುಕ್ತರು ಮತ್ತು ಸದಸ್ಯರನ್ನು ಭೇಟಿ ಮಾಡಿ, ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ನಮ್ಮ ಮೇಲೆ ಒತ್ತಡ ಹಾಕಿಸುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಲು ಆಗುತ್ತಿಲ್ಲ’ ಎಂದು ಕೆಲವು ಗುತ್ತಿಗೆದಾರರು ಅಸಹಾಯಕತೆ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ, ಆರೋಗ್ಯಾಧಿಕಾರಿ ಡಾ.ಪಿ.ಎನ್‌.ಬಿರಾದಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಕುಮಾರ್‌ ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !