ಶನಿವಾರ, ಡಿಸೆಂಬರ್ 5, 2020
19 °C
ವಲಯ ಆಯುಕ್ತರಿಂದಿಡಿದು ಪೌರ ಕಾರ್ಮಿಕರವರೆಗೆ ಪುರಸ್ಕಾರ; ಕಾರ್ಯಕ್ಷಮತೆ ಆಧರಿಸಿ ಆಯ್ಕೆ

ಪಾಲಿಕೆ ನೌಕರರಿಗೆ 'ಮಾಸಿಕ ಪುರಸ್ಕಾರ’ದ ಪ್ರೋತ್ಸಾಹ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮುಂದಾಗಿರುವ ಮಹಾನಗರ ಪಾಲಿಕೆ, ಅದಕ್ಕಾಗಿ ಪ್ರತಿ ತಿಂಗಳು ‘ಉತ್ತಮ ಕಾರ್ಯನಿರ್ವಹಣೆ ತೋರಿದ ಸಿಬ್ಬಂದಿ’ ಎಂಬ ಪುರಸ್ಕಾರ ನೀಡಲು ಮುಂದಾಗಿದೆ.

ಪಾಲಿಕೆ ಮಟ್ಟದಲ್ಲಿ ವಲಯಗಳ ಸಹಾಯಕ ಆಯುಕ್ತರು, ಪರಿಸರ ಎಂಜಿನಿಯರ್‌ಗಳು, ಸಹಾಯಕ/ ಕಿರಿಯ ಎಂಜಿನಿಯರ್‌ಗಳು, ಪ್ರತಿ ವಿಭಾಗಕ್ಕೆ ಒಬ್ಬರಂತೆ ಹುಬ್ಬಳ್ಳಿ ಉತ್ತರ, ದಕ್ಷಿಣ ಹಾಗೂ ಧಾರವಾಡದಲ್ಲಿ ಆರೋಗ್ಯ ನಿರೀಕ್ಷಕರು ಮತ್ತು ಮೇಲ್ವಿಚಾರಕರು (ಜಮಾದಾರರು), ಪ್ರತಿ ವಲಯ ಕಚೇರಿಗೆ ಒಬ್ಬರಂತೆ 4 ವಿಭಾಗಗಳಲ್ಲಿ ಪೌರ ಕಾರ್ಮಿಕರು ಹಾಗೂ ಪ್ರತಿ ವಲಯ ಕಚೇರಿಗೆ ಒಬ್ಬರಂತೆ ಆಟೊ ಟಿಪ್ಪರ್ ಚಾಲಕ ಸೇರಿದಂತೆ, ಒಟ್ಟು ಏಳು ವಿಭಾಗಗಳಲ್ಲಿ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.

ಅಳೆಯಲು ಅಂಕ

‘ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವೈಖರಿ ಆಧರಿಸಿ ಅಂಕಗಳನ್ನು ನೀಡುವ ಮೂಲಕ, ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತದೆ. ಒಟ್ಟು 100 ಅಂಕಗಳ ಪೈಕಿ, ಯಾರು ಹೆಚ್ಚು ಅಂಕ ಪಡೆಯುತ್ತಾರೊ ಅವರಿಗೆ ಪುರಸ್ಕಾರ ನೀಡಲಾಗುವುದು. ಆಯಾ ವಿಭಾಗದ ಮೇಲಧಿಕಾರಿಗಳು ಅಂಕಗಳನ್ನು ನೀಡಲಿದ್ದಾರೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಕೆ.ಎಸ್. ನಯನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆಯಲ್ಲಿರುವ 2,272 ಪೌರ ಕಾರ್ಮಿಕರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಕಸ ಗುಡಿಸುವವರು, ಮನೆ ಮನೆಗೆ ಹೋಗಿ ಕಸ ಸಂಗ್ರಹಿಸಿ ವಿಂಗಡಣೆ ಮಾಡುವವರು, ಲೋಡರ್ಸ್ ಹಾಗೂ ಇತರರು (ಔಷಧ ಸಿಂಪಡಿಸುವವರು, ಸಾರ್ವಜನಿಕ ಸ್ಥಳ ಸ್ವಚ್ಛಗೊಳಿಸುವವರು, ಸತ್ತ ಪ್ರಾಣಿಗಳನ್ನು ತೆರವುಗೊಳಿಸುವವರು, ತುರ್ತು ಕೆಲಸ ನಿರ್ವಹಣೆಗಾರರು). ಕಾರ್ಮಿಕರ ಕಾರ್ಯವೈಖರಿ ಮೇರೆಗೆ, ಆರೋಗ್ಯ ನಿರೀಕ್ಷಕರು ಹಾಗೂ ವಲಯ ಆಯುಕ್ತರು ಅಂಕಗಳನ್ನು ನೀಡುತ್ತಾರೆ’ ಎಂದು ಹೇಳಿದರು.

ಈ ತಿಂಗಳು ಪೌರ ಕಾರ್ಮಿಕರಿಗಷ್ಟೇ

‘ಅಕ್ಟೋಬರ್ ತಿಂಗಳಲ್ಲಿ ಪೌರ ಕಾರ್ಮಿಕರನ್ನು ಮಾತ್ರ ಮಾಸಿಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಎರಡ್ಮೂರು ದಿನದೊಳಗೆ ಅವರ ಹೆಸರನ್ನು ಘೋಷಿಸಲಾಗುವುದು. ಚುನಾವಣೆ ಕಾರ್ಯಗಳಿಗೆ ಅಧಿಕಾರಿಗಳು ನಿಯೋಜನೆಗೊಂಡಿದ್ದರಿಂದ ಅವರ ಕಾರ್ಯಕ್ಷಮತೆ ಅಳೆಯುವ ಕೆಲಸಗಳು ನಡೆದಿಲ್ಲ. ಮುಂದಿನ ತಿಂಗಳಿಂದ ಅದು ಕಾರ್ಯಗತವಾಗಲಿದೆ’ ಎಂದು ತಿಳಿಸಿದರು.

***

ಸ್ವಚ್ಛ ಸರ್ವೇಕ್ಷಣ–2021 ಅಂಗವಾಗಿ, ಕೇಂದ್ರ ವಸತಿ ಹಾಗೂ ನಗರ ನೈರ್ಮಲ್ಯ ಸಚಿವಾಲಯದ ನಿರ್ದೇಶನದಂತೆ, ಉತ್ತಮ ಕಾರ್ಯನಿರ್ವಹಣೆ ತೋರುವ ಅಧಿಕಾರಿಗಳಿವರಿಗೆ ಪ್ರಶಂಸಾ ಪತ್ರ ಹಾಗೂ ಪೌರ ಕಾರ್ಮಿಕರಿಗೆ ಬಹುಮಾನ ನೀಡಲಾಗುವುದು

– ಸುರೇಶ ಇಟ್ನಾಳ, ಆಯುಕ್ತ, ಮಹಾನಗರ ಪಾಲಿಕೆ

***

ಅಂಕಕ್ಕೆ ಹಲವು ಮಾನದಂಡ

ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಷಮತೆಗೆ ಅಂಕಗಳನ್ನು ನೀಡಲು ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಏಳು ವಿಭಾಗಗಳಿಗೂ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

‘ಪೌರ ಕಾರ್ಮಿಕರ ವಿಭಾಗದಲ್ಲಿ ಹಾಜರಾತಿ, ಸಮಯ ಪಾಲನೆ, ಮನೆಯಿಂದ ಕಸ ಸಂಗ್ರಹ, ವಿಂಗಡಣೆ, ಸಾರ್ವಜನಿಕರ ದೂರಿಗೆ ಸ್ಪಂದನೆ, ಜನರೊಂದಿಗೆ ಒಡನಾಟ, ಕರ್ತವ್ಯದ ಸಂದರ್ಭದಲ್ಲಿ ಸುರಕ್ಷಾ ಸಾಧನಗಳ ಬಳಕೆ, ಕಾರ್ಯವ್ಯಾಪ್ತಿ ಪ್ರದೇಶದ ಸ್ವಚ್ಛತೆ, ಕಾರ್ಮಿಕರ ವಿರುದ್ಧ ಸಾರ್ವಜನಿಕರ ದೂರು ಹಾಗೂ ಕರ್ತವ್ಯದಲ್ಲಿ ಹೊಸತನದ ಮಾನದಂಡಗಳನ್ನು ಆಧರಿಸಿ ಅಂಕ ನೀಡಲಾಗುತ್ತದೆ’ ಎಂದು ಕೆ.ಎಸ್. ನಯನಾ ಹೇಳಿದರು.

‘ಪೌರ ಕಾರ್ಮಿಕರ ವಿಭಾಗದಲ್ಲಿ ಹಾಜರಾತಿ, ಸಮಯ ಪಾಲನೆ, ಮನೆಯಿಂದ ಕಸ ಸಂಗ್ರಹ, ವಿಂಗಡಣೆ, ಸಾರ್ವಜನಿಕರ ದೂರಿಗೆ ಸ್ಪಂದನೆ, ಜನರೊಂದಿಗೆ ಒಡನಾಟ, ಕರ್ತವ್ಯದ ಸಂದರ್ಭದಲ್ಲಿ ಸುರಕ್ಷಾ ಸಾಧನಗಳ ಬಳಕೆ, ಕಾರ್ಯವ್ಯಾಪ್ತಿ ಪ್ರದೇಶದ ಸ್ವಚ್ಛತೆ, ಕಾರ್ಮಿಕರ ವಿರುದ್ಧ ಸಾರ್ವಜನಿಕರ ದೂರು ಹಾಗೂ ಕರ್ತವ್ಯದಲ್ಲಿ ಹೊಸತನದ ಮಾನದಂಡಗಳನ್ನು ಆಧರಿಸಿ ಅಂಕ ನೀಡಲಾಗುತ್ತದೆ’ ಎಂದು ಕೆ.ಎಸ್. ನಯನಾ ಹೇಳಿದರು.

‘ಮೇಲ್ವಿಚಾರಕರಿಗೂ ಹಾಜರಾತಿ, ಸಮಯಪಾಲನೆ ಜತೆಗೆ ಪೌರ ಕಾರ್ಮಿಕರು ಸುರಕ್ಷಾ ಸಾಧನ ಬಳಕೆಯ ಖಚಿತತೆ, ಕಸ ಸಂಗ್ರಹದ ಸರಿಯಾದ ಮೇಲ್ವಿಚಾರಣೆ, ದೂರುಗಳಿಗೆ ಸ್ಪಂದನೆ. ಸಹಾಯಕ/ಜೂನಿಯರ್ ಎಂಜಿನಿಯರ್‌ಗಳಿಗೆ ನಾಲೆ ಹೂಳು ತೆರವು ಹಾಗೂ ನಿರ್ವಹಣೆ, ಯುಜಿಡಿ ಜಾಲದ ಸಂಪರ್ಕ, ದತ್ತಾಂಶ ನಿರ್ವಹಣೆ, ಪೈಪ್‌ಲೈನ್ ದುರಸ್ತಿ, ನಿರ್ವಹಣೆ, ಮ್ಯಾನ್‌ ಹೋಲ್/ಚೇಂಬರ್ ಬದಲಾವಣೆ, ಎಸ್‌ಬಿಎಂ ಇ–ಸೋರ್ಸ್‌, ಸ್ವಚ್ಛತಾ ಮತ್ತು ಸ್ವಚ್ ನಗರ ಆ್ಯಪ್ ಕುರಿತು ಜಾಗೃತಿ. ಪರಿಸರ ಎಂಜಿನಿಯರ್‌ಗಳಿಗೆ ತ್ಯಾಜ್ಯ ಸಂಗ್ರಹಣೆಯ ಉಸ್ತುವಾರಿ, ತಾಜ್ಯ ವಿಂಗಡಣೆ ಪ್ರಗತಿ ಪರಿಶೀಲನೆ, ಕಾಂಪೋಸ್ಟಿಂಗ್, ಸ್ವಚ್ಛತಾ ಆ್ಯಪ್‌ಗೆ ಬರುವ ದೂರಗಳಿಗೆ ಸ್ಪಂದನೆ, ಇ–ತ್ಯಾಜ್ಯ ಮತ್ತು ಕಟ್ಟಡ ನಿರ್ಮಾಣ– ತೆರವು ತ್ಯಾಜ್ಯ ನಿರ್ವಹಣೆ. ವಲಯ ಸಹಾಯಕ ಆಯುಕ್ತರಿಗೆ ಕಸ ಸಂಗ್ರಹ ಮತ್ತು ಎಸ್‌ಡಬ್ಲ್ಯೂಎಂ ಸಿಬ್ಬಂದಿ ಉಸ್ತುವಾರಿ, ಮಾಸಿಕ ಪ್ರಗತಿ ಪರಿಶೀಲನೆ, ಸಕಾಲದಲ್ಲಿ ವೇತನ ಪಾವತಿ ಸೇರಿದಂತೆ ಪೌರ ಕಾರ್ಮಿಕರ ಕಲ್ಯಾಣ ಹಾಗೂ ಇತರ ಮಾನದಂಡಗಳನ್ನು ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು