ಮಂಗಳವಾರ, ಆಗಸ್ಟ್ 3, 2021
27 °C
ಸ್ವಯಂ ಪ್ರೇರಣೆಯಿಂದ ಮುಂದೆ ಬಂದ ವಿದ್ಯಾವಂತರು, ವೈದ್ಯರಲ್ಲಿ ಹೊಸ ಆಶಾಭಾವ

ಪ್ಲಾಸ್ಮಾ ನೀಡಲು ಕೋವಿಡ್‌ ಗುಣಮುಖರ ಒಲವು: ವೈದ್ಯರಲ್ಲಿ ಆಶಾಭಾವ

ಪ್ರಮೋದ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ ರಾಜ್ಯದ ಮೊದಲ ಪ‍್ರಕರಣ ಕಿಮ್ಸ್‌ನಲ್ಲಿ ದಾಖಲಾಗಿತ್ತು. ಈಗ ಇನ್ನಷ್ಟು ಸೋಂಕಿತರಾಗಿ ಗುಣಮುಖರಾದವರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಮಾ ನೀಡಲು ಮುಂದೆ ಬಂದಿರುವುದು ವೈದ್ಯರಲ್ಲಿ ಹೊಸ ಆಶಾಭಾವ ಮೂಡಿಸಿದೆ.

ಮೇ ಕೊನೆಯ ವಾರದಲ್ಲಿ ಮಹಾರಾಷ್ಟ್ರದಿಂದ ಮರಳಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಉಸಿರಾಟದ ತೀವ್ರ ತೊಂದರೆಯಿಂದ ಆ ವ್ಯಕ್ತಿಯ ಆರೋಗ್ಯ ಗಂಭೀರವಾಗಿತ್ತು. ಆದ್ದರಿಂದ ವೈದ್ಯರು ಸೋಂಕಿನಿಂದ ಚೇತರಿಸಿಕೊಂಡಿದ್ದ ಖಬರಸ್ತಾನದ ಕಾವಲುಗಾರ 64 ವರ್ಷದ ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ತೆಗೆದು ಚಿಕಿತ್ಸೆ ನೀಡಿದ್ದರು. ಬಳಿಕ ಸೋಂಕಿತ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಗುಣಮುಖರಾಗಿದ್ದರು.

ಇದೇ ಉತ್ಸಾಹದಲ್ಲಿ ಕಿಮ್ಸ್‌ ವೈದ್ಯರು, ಸೋಂಕಿನಿಂದ ಗುಣಮುಖರಾದವರಿಗೆ ಪ್ಲಾಸ್ಮಾ ನೀಡುವಂತೆ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದಕ್ಕೆ ಈಗ ಉತ್ತಮ ಸ್ಪಂದನೆ ಸಿಗುತ್ತಿದೆ. ಹುಬ್ಬಳ್ಳಿಯ ಒಬ್ಬ ವ್ಯಕ್ತಿ ಮತ್ತು ಧಾರವಾಡದ ಹೊಸ ಯಲ್ಲಾಪುರದ ವ್ಯಕ್ತಿಯಿಂದ ಈಗಾಗಲೇ ಪ್ಲಾಸ್ಮಾ ಪಡೆಯಲಾಗಿದೆ. ಈಗ ಇನ್ನೂ ಮೂವರು ವ್ಯಕ್ತಿಗಳು ನೀಡಿದ ಪ್ಲಾಸ್ಮಾವನ್ನು ಸೋಂಕಿತರಿಗೆ ಕೊಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಇನ್ನಷ್ಟು ಗುಣಮಖರು ಪ್ಲಾಸ್ಮಾ ನೀಡುವುದನ್ನು ಕಿಮ್ಸ್‌ ವೈದ್ಯರು ಎದುರು ನೋಡುತ್ತಿದ್ದಾರೆ.

ಕೊರೊನಾದಿಂದ ಗುಣಮುಖವಾದ ವ್ಯಕ್ತಿಯ ದೇಹದ ರಕ್ತದಲ್ಲಿನ 400 ಎಂ.ಎಲ್‌. ನೀರಿನ ಅಂಶವನ್ನು (ಪ್ಲಾಸ್ಮಾ) ತೆಗೆದುಕೊಂಡು ರೆಫ್ರಿಜರೇಟರ್‌ನಲ್ಲಿ –40 ಡಿಗ್ರಿಯಲ್ಲಿ ಸಂರಕ್ಷಿಸಿ ಇಡಬೇಕಾಗುತ್ತದೆ. ಒಂದು ವರ್ಷದ ತನಕ ಉಪಯೋಗಿಸಬಹುದು. ಪ್ಲಾಸ್ಮಾವನ್ನು ಸಂಗ್ರಹಿಸಿಡಲು ಉಪಯೋಗಿಸುವ ಬ್ಯಾಗ್‌ನ ಬೆಲೆ ₹10 ಸಾವಿರ ಇದೆ.

ಸೋಂಕಿನಿಂದ ಚೇತರಿಸಿಕೊಂಡವರು ಮೊದಲು ಪ್ಲಾಸ್ಮಾ ನೀಡಲು ಮುಂದೆ ಬಂದಿರಲಿಲ್ಲ. ಬಳಿಕ ಕಿಮ್ಸ್‌ ವೈದ್ಯರು ಗುಣಮುಖ ವ್ಯಕ್ತಿ ಹಾಗೂ ಕುಟುಂಬದವರ ಮನವೊಲಿಸಿ, ಆಯಾ ಸಮಾಜಗಳ ಮುಖಂಡರಿಂದ ಹೇಳಿಸಿ ಪ್ಲಾಸ್ಮಾ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಇದು ಆಗ ಫಲ ಕೊಟ್ಟಿರಲಿಲ್ಲ. ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾದ ಬಳಿಕ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ನೀಡಲು ಒಲವು ತೋರಿಸುತ್ತಿದ್ದಾರೆ.

ಈ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ ಪ್ಲಾಸ್ಮಾ ಚಿಕಿತ್ಸೆ ನೀಡಿದ ವೈದ್ಯರ ತಂಡದಲ್ಲಿದ್ದ ಕಿಮ್ಸ್‌ ಔಷಧ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಮ್‌ ಕೌಲಗುಡ್ ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಟ್ರಯಲ್ಸ್‌ ಆಧಾರದ ಮೇಲೆ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ಇನ್ನೊಂದು ವಾರದಲ್ಲಿ ಟ್ರಯಲ್ಸ್‌ ಅವಧಿ ಪೂರ್ಣಗೊಳ್ಳಲಿದೆ. ಈಗ ವಿದ್ಯಾವಂತರು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ಇದರಿಂದ ಇನ್ನಷ್ಟು ಪ್ಲಾಸ್ಮಾ ಚಿಕಿತ್ಸೆ ನೀಡಲು  ಅನುಕೂಲವಾಗುತ್ತದೆ’ ಎಂದರು.

ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ನಿತ್ಯ ಹೆಚ್ಚುತ್ತಿರುವ ಕಾರಣ ಪ್ಲಾಸ್ಮಾ ನೀಡಲು ಆಸಕ್ತಿ ತೋರಿಸುತ್ತಿದ್ದಾರೆ.
– ಡಾ. ರಾಮ್‌ ಕೌಲಗುಡ್, ಕಿಮ್ಸ್‌ ಔಷಧ ವಿಭಾಗದ ಸಹ ಪ್ರಾಧ್ಯಾಪಕ

ಪ್ಲಾಸ್ಮಾ ನೀಡಿದರೆ ಆರೋಗ್ಯಕ್ಕೆ ಏನೂ ತೊಂದರೆಯಾಗುವುದಿಲ್ಲ. ಕೊರೊನಾದಿಂದ ನಾನು ಬದುಕಿದ್ದೇನೆ, ಬೇರೆಯವರೂ ಬದುಕಬೇಕಾದರೆ ಭಯ ಬಿಟ್ಟು ಪ್ಲಾಸ್ಮಾ ಕೊಡಬೇಕು.
– ಪ್ಲಾಸ್ಮಾ ನೀಡಿದ ಖಬರಸ್ತಾನದ ಕಾವಲುಗಾರ

ಪ್ಲಾಸ್ಮಾ ನೀಡಲು ವಿದ್ಯಾವಂತ ಯುವಕರು ಒಲವು ತೋರುತ್ತಿದ್ದಾರೆ. ಅವರ ಸಂಖ್ಯೆ ಹೆಚ್ಚಾದರೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಅನುಕೂಲವಾಗುತ್ತದೆ
– ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್‌ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು