ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂಬೈ ಕರ್ನಾಟಕದಲ್ಲಿ ಆರೋಗ್ಯ ಸ್ಥಿತಿ ಶೋಚನೀಯ’

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ರಾಜ್ಯ ಸಮ್ಮೇಳನ
Last Updated 23 ಸೆಪ್ಟೆಂಬರ್ 2022, 16:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಂಬೈ ಮತ್ತು ಹೈದರಾಬಾದ್‌ ಕರ್ನಾಟಕದ ಭಾಗಗಳಲ್ಲಿನ ಜನರ ಆರೋಗ್ಯ ಸ್ಥಿತಿ ಶೋಚನೀಯವಾಗಿದೆ. ಆ ಭಾಗದ ಒಂದು ಅಥವಾ ಎರಡು ಜಿಲ್ಲೆಗಳನ್ನು ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಂಘ ದತ್ತು ತೆಗೆದುಕೊಳ್ಳಲು ಮುಂದಾಗಬೇಕು’ ಎಂದು ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಂಘಗಳ ಒಕ್ಕೂಟದ ಅಧ್ಯಕ್ಷೆ ಪ್ರೊ. ಎಸ್‌. ಶಾಂತಾಕುಮಾರಿ ಹೇಳಿದರು.

ನಗರದ ಕಿಮ್ಸ್ ಆಸ್ಪತ್ರೆಯ ರಾಣಿ ಚನ್ನಮ್ಮ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ 32ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಆರ್ಥಿಕವಾಗಿಯೂ ಸದೃಢವಾಗಿದ್ದು, ಸಾಕಷ್ಟು ತಜ್ಞ ವೈದ್ಯರು ಸಹ ಇದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಬೆಂಗಳೂರು ಭಾಗ ಅಭಿವೃದ್ಧಿಯಾದಷ್ಟು, ಈ ಭಾಗ ಆಗಿಲ್ಲ. ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಸಹ ಆಸಕ್ತಿ ವಹಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಭಾಗದ ಸಾಕಷ್ಟು ಮಹಿಳೆಯರು, ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ವೈದ್ಯರಾದವರು ತಮ್ಮ ಕರ್ತವ್ಯ ನಿರ್ವಹಿಸುವಂತಾಗಬೇಕು. ಸಾಮಾನ್ಯ ಜನರ ಆರೋಗ್ಯದ ಹಿತದೃಷ್ಟಿಯಿಂದ, ಆ ಭಾಗದ ಒಂದು ಅಥವಾ ಎರಡು ಜಿಲ್ಲೆಗಳನ್ನು ಸಂಘ ದತ್ತು ತೆಗೆದುಕೊಳ್ಳಬೇಕು. ಅದಕ್ಕೆ ಒಕ್ಕೂಟ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

ಹುಬ್ಬಳ್ಳಿ ಕೆಎಲ್ಇ ಆಸ್ಪತ್ರೆ ಪ್ರಾಚಾರ್ಯ ಡಾ. ಎಂ. ಹಿರೇಮಠ ಮಾತನಾಡಿದರು. ಇದೇ ವೇಳೆ ಪ್ರೊ. ಎಸ್‌. ಶಾಂತಾಕುಮಾರಿ ಮತ್ತು ಡಾ. ಕಾಮಿನಿ ರಾವ್‌ ಅವರನ್ನು ಸನ್ಮಾನಿಸಲಾಯಿತು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ಈಶ್ವರ ಹೊಸಮನಿ, ಡಾ. ಅರುಣಕುಮಾರ ಸಿ.ಎಸ್. ಡಾ. ಬಸವರಾಜ ಸಜ್ಜನ, ಡಾ. ನಾಗರಾಜ ಎಚ್., ಡಾ. ರತ್ನಮಾಲಾ‌ ದೇಸಾಯಿ, ಡಾ. ವಿದ್ಯಾ ಸವಡಿ, ಡಾ. ಭಾರತಿ ರಾಜಶೇಖರ, ಡಾ. ದುರ್ಗಾದಾಸ, ಡಾ. ಹೇಮಲತಾ ಇದ್ದರು. ಇದಕ್ಕೂ ಪೂರ್ವ ತಜ್ಞ ವೈದ್ಯರಿಂದ ಸ್ತ್ರೀರೋಗಗಳ ಕುರಿತು ಗೋಷ್ಠಿಗಳು ನಡೆದವು.

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ: ಡಾ. ಕಾಮಿನಿ: ‘ವೈದ್ಯಕೀಯ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಪ್ರಸ್ತುತ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿವೆ. ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಯಾವುದೇ ವಯಸ್ಸಿನಲ್ಲಿಯೂ ಯಾವುದೇ ವೃತ್ತಿ ಶಿಕ್ಷಣ ಪಡೆಯಬಹುದು. ಕಲಿಕೆಗೆ ಆನ್‌ಲೈನ್‌ನಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಯುವ ಸಮುದಾಯ ಸದುಪಯೋಗ ಪಡೆದುಕೊಂಡು, ಆರೋಗ್ಯ ಕ್ಷೇತ್ರದ ಪ್ರಗತಿಗೆ ಮುಂದಾಗಬೇಕು. ನಮ್ಮ ಆಸ್ಪತ್ರೆಯಲ್ಲೂ ವಿವಿಧ ಕೋರ್ಸ್‌ಗಳಿದ್ದು, ಆಸಕ್ತಿಯಿದ್ದವರು ಪ್ರವೇಶ ಪಡೆಯಬಹುದು. ಪ್ರಸೂತಿ ಸ್ತ್ರೀರೋಗ ಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಪ್ರೋತ್ಸಾಹಿಸಲು ನಮ್ಮ ಮಿಲನ್‌ ಆರೋಗ್ಯ ಸಂಸ್ಥೆ ಫಿಲೋಷಿಪ್‌ ನೀಡುತ್ತಿದೆ’ ಎಂದು ಪದ್ಮಶ್ರೀ ಪುರಸ್ಕೃತೆ ಹಾಗೂ ಮಿಲನ ಆಸ್ಪತ್ರೆಯ ಮುಖ್ಯ ಮಾರ್ಗದರ್ಶಕಿ ಹಾಗೂ ಹಿರಿಯ ಸಮಾಲೋಚಕಿ ಡಾ. ಕಾಮಿನಿ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT