ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು ಜೋರಾಗೈತ್ರಿ... ಆರೋಗ್ಯದತ್ತ ನಿಗಾ ವಹಿಸ್ರೀ...

Last Updated 15 ಮಾರ್ಚ್ 2019, 14:03 IST
ಅಕ್ಷರ ಗಾತ್ರ

‘ಸ್ವಲ್ಪ ಓಡಾಡಿದ್ರೂ ಬೆವತಂತಾಗಿ ಸುಸ್ತಾಗ್ತೈತ್ರಿ, ಏನ್‌ ಮಾಡ್ಬೇಕ್ರಿ? ಮಧುಮೇಹ ಇದ್ದವರಿಗೆ ಎಂತಹ ಹಣ್ಣುಗಳನ್ನು ತಿನ್ನಲು ಕೊಡಬೇಕ್ರಿ? ಬಿಸಿಲಿನಲ್ಲಿ ಪ್ರಜ್ಞೆ ತಪ್ಪಿದಂತಾದ್ರೆ ತಕ್ಷಣ ಏನು ಮಾಡಬೇಕ್ರಿ? ಎಸ್‌ಎಸ್‌ಎಲ್‌ಸಿ ಓದುವ ನಮ್ಮ ಮಗ ಬೆನ್ನುನೋವು ಅಂತಾನಲ್ರಿ ಏನು ಮಾಡೋದ್ರಿ? ಹಾಸ್ಟೆಲ್‌ನಲ್ಲಿದ್ದು ಓದುತ್ತಿರುವ ನನಗೆ ತಲೆಗೂದಲು ಭಾಳ ಉದುರ್ತಾವ್ರೀ ಪರಿಹಾರವೇನ್ರಿ?’

–ಹೀಗೆ ಹತ್ತು ಹಲವು ಪ್ರಶ್ನೆಗಳು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಓದುಗರಿಂದ ಕೇಳಿಬಂದಿದ್ದು ಹುಬ್ಬಳ್ಳಿ ಪ್ರಜಾವಾಣಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಫೋನ್–ಇನ್‌ ಕಾರ್ಯಕ್ರಮದಲ್ಲಿ. ಓದುಗರ ಎಲ್ಲ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಿ ಅವರ ಸಂದೇಹ, ಸಮಸ್ಯೆಗಳಿಗೆ ಪರಿಹಾರ ನೀಡಿದವರು ಕಿಮ್ಸ್ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಎಸ್‌.ಹಸಬಿ ಅವರು.

ಬಿರು ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ತಾಜಾ ತರಕಾರಿ, ಹಣ್ಣುಗಳ ಸೇವನೆ ಮಹತ್ವ, ಬೇಸಿಗೆ ಕಾಲದ ಆಹಾರ ಕ್ರಮಗಳು ಸೇರಿದಂತೆ ಹತ್ತಾರು ಆರೋಗ್ಯ ಸಂಬಂಧಿತ ವಿಷಯಗಳ ಮೇಲೆ ಅವರು ಬೆಳಕು ಚೆಲ್ಲಿದರು.

ಅವರೊಂದಿಗೆ ಕಿಮ್ಸ್‌ನ ಪೆಥಾಲಜಿಸ್ಟ್‌ ಡಾ.ವಿದ್ಯಾ ಹಸಬಿ ಉಪಸ್ಥಿತರಿದ್ದರು.

ಓದುಗರೊಂದಿಗೆ ನಡೆದ ಪ್ರಶ್ನೋತ್ತರಗಳ ವಿವರ ಇಲ್ಲಿದೆ.

*ಅನಂತ ಕುಲಕರ್ಣಿ, ಧಾರವಾಡ, ಬಾಳಪ್ಪ ಮುನವಳ್ಳಿ, ಬಾಗಲಕೋಟೆ: ಬೇಸಿಗೆಯಲ್ಲಿ ಆಹಾರ, ದಿನನಿತ್ಯದ ಚಟುವಟಿಕೆ ಹೇಗಿರಬೇಕು?

–ಜಾಸ್ತಿ ತರಕಾರಿ ಸೇವಿಸಬೇಕು. ಹಾಲು, ಹಣ್ಣು ಸೇವನೆಗೆ ಒತ್ತು ನೀಡಬೇಕು. ಮಧುಮೇಹ ಇರುವವರು ಸಪೋಟ, ಬಾಳೆ, ಮಾವಿನಹಣ್ಣನ್ನು ಹೊರತುಪಡಿಸಿ ಉಳಿದ ಹಣ್ಣುಗಳನ್ನು ಸೇವಿಸಬಹುದು. ಬಿಸಿಲಿನಲ್ಲಿ ಹೊರಗೆ ಹೋಗುವವರು ಕೋಡೆ (ಛತ್ರಿ)ಒಯ್ಯುವುದರ ಜೊತೆ ಸದಾ ಹಣ್ಣಿನ ರಸ, ಮಜ್ಜಿಗೆ ಅಥವಾ ನೀರು ಕಡ್ಡಾಯವಾಗಿ ಸೇವಿಸಲೇಬೇಕು. ಕನಿಷ್ಠ 3ರಿಂದ 4 ಲೀಟರ್ ನೀರು ಸೇವನೆ ಕಡ್ಡಾಯ

* ಅಮೃತಾ, ಬಳ್ಳಾರಿ, ಕವಿತಾ, ಹುಬ್ಬಳ್ಳಿ: ಮಗಳ ಕಣ್ಣು ಹುಬ್ಬಿನ ಮೇಲೆ ನೋವು ಹಾಗೂಕೆಲ ಬಾರಿ ಕಾಲು ನೋವು ಅನ್ನುತ್ತಾಳೆ. ಅದಕ್ಕೆ ಪರಿಹಾರವೇನು ?

–ಮಕ್ಕಳು ಬಿಸಿಲಲ್ಲೂ ಆಡುತ್ತವೆ. ಶಾಖವನ್ನು ಲೆಕ್ಕಿಸದೆ ಆಡುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದಕ್ಕೆ ‘ಸನ್ ಕ್ರೀಂ’ ಬಳಸಬಹುದು. ಇನ್ನು ಕಾಲು ನೋವಿಗೆ ಕಬ್ಬಿಣಾಂಶ ಇರುವ ಹಾಲು, ಮೊಟ್ಟೆ, ರಾಗಿ ಅಂಥ ಪದಾರ್ಥಗಳನ್ನು ಸೇವಿಸಬೇಕು. ಜೋಳದ ರೊಟ್ಟಿಯೂ ಪ್ರಯೋಜನಕಾರಿ. ಪ್ರತಿದಿನದ ಮುಂಜಾನೆಯ ತಿಂಡಿ ತಡವಾಗಬಾರದು. ಕಾರಣ ರಾತ್ರಿ ಊಟ ಹಾಗೂ ಬೆಳಿಗ್ಗೆ ಅಂತರ ಇರುತ್ತದೆ ಎಂಬುದು ನೆನಪಿರಲಿ.

* ಪಾಂಡುರಂಗ ದೊಡ್ಡಕುರುಬರ,ಬೆಳಗಾವಿ: ನನಗೆ 69 ವಯಸ್ಸು, ಯೋಗಾಸನ ಮಾಡಬಹುದೇ ?

–ನಿಮ್ಮ ಸಾಮರ್ಥ್ಯ ಅರಿತು ಆಸನಗಳನ್ನು ಆಯ್ಕೆ ಮಾಡಿಕೊಳ್ಳಿ, ಸರಳ ವ್ಯಾಯಾಮ, ನಡಿಗೆ ಸಹಕಾರಿ. ಅತಿಯಾದ ಬಿಸಿಲಿನಲ್ಲಿ ವ್ಯಾಯಾಮ ಬೇಡ. ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಿ.

* ವಿನೋದ ಬನ್ನಿಕೊಪ್ಪ, ಹಾವೇರಿ: ಬೇಸಿಗೆಯಲ್ಲಿ ನವಜಾತ ಶಿಶುಗಳ ಆರೈಕೆ ಹೇಗೆ?

–ಎಳೆ ಬಿಸಿಲು ಬಿಟ್ಟು ಯಾವುದೇ ಕಾರಣಕ್ಕೂ ಬಿಸಿಲಿಗೆ ಮಗುವನ್ನು ಹೊರಗಡೆ ತರಬೇಡಿ. ಆದಷ್ಟು ಹಿತಕರ ಜಾಗದಲ್ಲಿಯೇ ಮಗು, ತಾಯಿ ಆರೈಕೆ ನಡೆಯಲಿ. ತಾಯಿ ಊಟದಲ್ಲಿ ಪೋಷಕಾಂಶ, ನೀರಿನಾಂಶ ಇರುವ ತರಕಾರಿ ಇರಲಿ.

* ಎಸ್‌.ಬಡಿಗೇರ, ನವಲಗುಂದ, ಚನ್ನಬಸಪ್ಪ, ನೇಸರ್ಗಿ, ಬೈಲಹೊಂಗಲ: ವಯಸ್ಸು 45, ಉಸಿರಾಟ, (ಧಮ್ಮ) ಏದುಸಿರಿನತೊಂದರೆಯಿದೆ ?

–ನಿಮ್ಮ ವಯಸ್ಸಿನವರು ಕಡ್ಡಾಯವಾಗಿ ರಕ್ತ, ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಮ್ಮೆ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳಬೇಕು.

* ತೋಟಗಂಟಿ ರುದ್ರಪ್ಪ, ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): 64 ವರ್ಷ. ಬೆವರು ಜಾಸ್ತಿ ಬರುತ್ತದೆ. ಸ್ವಲ್ಪ ಓಡಾಡಿದರೂ ಬೆವತಂತೆ ಆಗಿ ಸುಸ್ತಾಗುತ್ತದೆ...

–ಬಿಸಿಲು ಹೆಚ್ಚಾಗಿರುವುದರಿಂದ ಈ ಸಮಸ್ಯೆ ಎದುರಾಗುತ್ತದೆ. ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಪ್ರಖರ ಬಿಸಿಲಿನ ವೇಳೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ದಿನಕ್ಕೆ ಎರಡು ಬಾರಿ (ಮುಂಜಾನೆ, ಸಂಜೆ) ಸ್ನಾನ ಮಾಡಿ. ನೀರನ್ನು ಜಾಸ್ತಿ ಕುಡಿಯಿರಿ. ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿರುವಂತೆ ಜಾಗ್ರತೆ ವಹಿಸಿ.

*ಸಂಗೀತಾ, ಕಾರವಾರ: ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದು ಬೆನ್ನು ನೋವು ಜಾಸ್ತಿ ಎನ್ನುತ್ತಾನೆ. ಇದರ ಪರಿಹಾರಕ್ಕೆ ಏನು ಮಾಡಬೇಕು?

–ಬೆನ್ನಿಗೆ ದಿಂಬು ಅಥವಾ ಮತ್ತಿತರ ಆಸರೆ ಇಟ್ಟುಕೊಂಡು ಓದುವ ಭಂಗಿ ರೂಢಿಸಿಕೊಳ್ಳಲಿ. ಬೇಕಾಬಿಟ್ಟಿಯಾಗಿ ಕುಳಿತು ಅಥವಾ ಮಲಗಿಕೊಂಡು ಓದುವ ಹವ್ಯಾಸ ಖಂಡಿತ ಬೇಡ. ಕುಳಿತು ಓದುವ ಕ್ರಮ ಚೆನ್ನಾಗಿರಲಿ.

* ವನಿತಾ, ಉತ್ತರ ಕನ್ನಡ: ತಾಯಿಯವರ ವಯಸ್ಸು 85 ವರ್ಷ. ಅವರಿಗೆ ಬಿ.ಪಿ, ಶುಗರ್ ಇಲ್ಲ. ಆರೋಗ್ಯವಾಗಿದ್ದಾರೆ. ಸಕ್ಕರೆ ಅಂಶ ಹೆಚ್ಚಾಗಿರುವ ಹಣ್ಣುಗಳನ್ನು ಕೊಡಬಹುದೇ?

–ಸಕ್ಕರೆ ಕಾಯಿಲೆ ಇಲ್ಲದಿದ್ದರೆ ಯಾವುದೇ ಹಣ್ಣುಗಳನ್ನು ಕೊಡಬಹುದು.

* ಸಚಿನ್, ಜಮಖಂಡಿ: 19 ವರ್ಷ. ಮುಖದ ಮೇಲಿನ ಗಡ್ಡದ ಕೂದಲುಗಳು ಹೆಚ್ಚಾಗಿ ಉದುರುತ್ತವೆ. ಈ ಹಿಂದೆ ತಲೆಯ ಕೂದಲು ಉದುರುವುದನ್ನು ತಡೆಗಟ್ಟಲು ತಲೆಗೆ ಈರುಳ್ಳಿ ರಸ ಹಚ್ಚುತ್ತಿದ್ದೆ. ಅದರಿಂದ ಕೂದಲು ಉದುರುವಿಕೆ ಕಡಿಮೆಯಾಗಿತ್ತು. ಗಡ್ಡಕ್ಕೂ ಈರುಳ್ಳಿ ರಸ ಬಳಸಬಹುದೇ?

–ಕೂದಲು ಉದುರುವಿಕೆಗೆ ನೀವು ಬಳಸುವ ಸಾಬೂನು, ಶಾಂಪೂ ಕಾರಣವಿರಬಹುದು. ಆ್ಯಂಟಿ ಹೇರ್‌ ಫಾಲ್ ಶಾಂಪೂ ಬಳಸಿ. ಹಣ್ಣು, ಒಣ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ.

* ರಾಜಶೇಖರ ಕೋಟಿ, ಚನ್ನಮ್ಮನ ಕಿತ್ತೂರು: ಬೇಸಿಗೆ ರಜೆ ಆರಂಭವಾಗಲಿದೆ. ಎಂಥ ಜಾಗಗಳಿಗೆ ಪ್ರವಾಸ ಹೋಗಬಹುದು?

–ಆದಷ್ಟು ತಂಪಾದ ಸ್ಥಳಗಳಿಗೆ ಪ್ರವಾಸ ಹೋಗಿ. ಕರಾವಳಿಯಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಈ ಹಿಂದೆ ಅಂಥ ಸ್ಥಳಗಳಿಗೆ ಹೋಗಿ ನಿಮ್ಮ ದೇಹವು ಅಂಥ ವಾತಾವರಣಕ್ಕೆ ಒಗ್ಗಿಕೊಳ್ಳುತ್ತದೆ ಎಂದಾದಲ್ಲಿ ಮಾತ್ರ ಕರಾವಳಿಯತ್ತ ಹೋಗಿ. ಅದೇ ರೀತಿ, ಕಲ್ಬುರ್ಗಿ, ರಾಯಚೂರು, ವಿಜಯಪುರಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುತ್ತದೆ. ಅಂಥ ಸ್ಥಳಗಳಿಗೆ ಹೋಗದಿರುವುದು ಒಳ್ಳೆಯದು. ಎಲ್ಲಿ ಹೋದರೂ ನಿಮ್ಮ ಬಳಿ ನೀರಿನ ಬಾಟಲಿ ಇಟ್ಟುಕೊಂಡು ಹೋಗಿ. ನೀರು ಕುಡಿಯುವ ಬಯಕೆಯಾದಲ್ಲಿ ನೀರು ಕುಡಿಯಿರಿ. ನೀರಿನ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳಿ.

ಬೇಸಿಗೆಯ ರೋಗಗಳು;ಮುನ್ನೆಚ್ಚರಿಕಾ ಕ್ರಮಗಳು

ಸಾಂಕ್ರಾಮಿಕ ರೋಗಗಳ ಹಾವಳಿ ಬೇಸಿಗೆಯಲ್ಲಿ ಹೆಚ್ಚು. ಕರಳುಬೇನೆ, ಭೇದಿ, ಜಾಂಡೀಸ್‌, ಹೆಪಟೈಟಿಸ್ ಎ ಮತ್ತು ಇ, ಚಿಕನ್ ಫಾಕ್ಸ್‌ ಇವೆಲ್ಲ ಬೇಸಿಗೆಯಲ್ಲಿ ಹೆಚ್ಚಾಗಿ ಹರಡುತ್ತವೆ. ಜತೆಗೆ ಜಾತ್ರೆ, ಸಂತೆ, ಸಾಮೂಹಿಕ ಸಮಾರಂಭಗಳಲ್ಲಿ ತೆಗೆದುಕೊಳ್ಳುವ ಆಹಾರ, ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು.

ಬಿರು ಬಿಸಿಲಿನಿಂದಾಗಿ ಸಾಮಾನ್ಯವಾಗಿ ಬೆವರುಸಾಲೆ, ಚರ್ಮದ ಮೇಲೆ ದದ್ದು, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ದ್ರವಾಂಶವಿರುವ ಆಹಾರ ಹೆಚ್ಚಾಗಿ ತೆಗೆದುಕೊಳ್ಳಬೇಕು. ದಿನಕ್ಕೆ ಕನಿಷ್ಠ 10ರಿಮದ 12 ಗ್ಲಾಸು ನೀರು (3–4 ಲೀಟರ್‌ ನೀರು) ಕುಡಿಯಲೇಬೇಕು. ಜತೆಗೆ ವಿಟಮಿನ್‌ ಸಿ ಅಂಶವಿರುವ ಹಣ್ಣಿನ ಜ್ಯೂಸ್‌ (ಕಿತ್ತಳೆ, ಮೂಸಂಬಿ, ಲಿಂಬು ಪಾನಕ) ಸೇವನೆ, ಕಲ್ಲಂಗಡಿ, ಕರಬೂಜ, ಸೇಬು ಹಣ್ಣುಗಳ ಸೇವನೆ ಮಾಡಬೇಕು.

ಹಸಿ ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು ವಿಟಮಿನ್‌ ಹಾಗೂ ನಾರಿನಅಂಶ ಸಿಗುತ್ತವೆ. ಹಣ್ಣನ್ನು ಜ್ಯೂಸ್‌ ಮಾಡಿಕೊಂಡು ಸೇವನೆ ಮಾಡುವುದಕ್ಕಿಂತ ಹಾಗೆಯೇ ಸೇವನೆ ಮಾಡುವುದರಿಂದ ಅದರಲ್ಲಿನ ಪೌಷ್ಟಿಕಾಂಶಗಳು ನಷ್ಟವಾಗುವುದಿಲ್ಲ ಎನ್ನುತ್ತಾರೆ ವೈದ್ಯರು.

ಸಡಿಲವಾದ ಹಾಗೂ ಕಾಟನ್‌ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಬೇಕು. ಗರ್ಭಿಣಿಯರು, ಮಕ್ಕಳು, ವೃದ್ಧರು ಬಿರು ಬಿಸಲಿನಲ್ಲಿ ಅಡ್ಡಾಡಬಾರದು. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಹೊರಗಡೆ ಬಿಸಿಲಿನಲ್ಲಿ ಅಡ್ಡಾಡುವುದನ್ನು ನಿಲ್ಲಿಸುವುದು ಒಳ್ಳೆಯದು. ಹೆಚ್ಚು ಹೆಚ್ಚು ನೀರು, ಮಜ್ಜಿಗೆ, ಪಾನಕ, ತರಕಾರಿ, ಹಣ್ಣುಗಳ ಸೇವನೆಯಿಂದ ಬಿಸಿಲಿನ ತಾಪದಿಂದಾಗುವ ಹಾನಿ ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ ಡಾ. ಈಶ್ವರ ಎಸ್‌.ಹಸಬಿ ಅವರು.

ಎ.ಸಿ. ಹಿತ–ಮಿತ ಇರಲಿ...

ಕಚೇರಿಯೊಳಗೆ ಕುಳಿತು ಕೆಲಸ ಮಾಡುವವರು ಸಹಜವಾಗಿ ಎ.ಸಿ.ರೂಮಿನಲ್ಲಿದ್ದೇವೆಂದು ನೀರು ಕುಡಿಯುವುದನ್ನು ಮರೆಯುತ್ತಾರೆ. ಆದರೆ ಬಿಸಿಲಿಗೆ ಬಂದಾಗ ಅವರು ತೊಂದರೆ ಪಡುವರು. ಹೀಗಾಗಿ ಎ.ಸಿ.ರೂಮಿನಲ್ಲಿದ್ದರೂ ಕಾಲ ಕಾಲಕ್ಕೆ ನೀರು ಕುಡಿಯುತ್ತಲೇ ಇರಬೇಕು. ಎ.ಸಿ.ಯನ್ನು ಕೂಡ 23–24 ಡಿಗ್ರಿ ಸೆಲ್ಷಿಯಸ್‌ಗೆ ಇಡಬೇಕು. ಹೊರಗಡೆ ಉಷ್ಣಾಂಶ ತುಂಬಾ ಹೆಚ್ಚಿರುವುದರಿಂದ ಕಚೇರಿಯಿಂದ ಹೊರಗಡೆ ಬಂದಾಗ ಆರೋಗ್ಯದ ಮೇಲೆ ತಕ್ಷಣವೇ ದುಷ್ಪರಿಣಾಮ ಉಂಟಾಗುತ್ತದೆ.

ಬೇಸಿಗೆ ಕಾಲದಲ್ಲಿ ಆಹಾರ ಕ್ರಮ

* ಹೆಚ್ಚು ಹೆಚ್ಚು ದ್ರವ ಆಹಾರ ಸೇವನೆ ಮಾಡಬೇಕು

* ಚೆನ್ನಾಗಿ ನೀರು ಕುಡಿಯಬೇಕು.

* ಹಸಿ ತರಕಾರಿ, ಹಣ್ಣುಗಳ ಸೇವನೆ ಮಾಡಬೇಕು.

* ಹಾಲು, ಮೊಸರು, ಮಜ್ಜಿಗೆ, ಜ್ಯೂಸ್‌, ಎಳನೀರಿನ ಸೇವನೆ ಇರಲಿ

* ಕಾರ್ಬೋಹೈಡ್ರೇಟ್ಸ್‌ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಬೇಕು.

* ಮಾಂಸಾಹಾರ ಕಡಿಮೆ ಸೇವನೆ ಮಾಡಬೇಕು.

* ಎಣ್ಣೆ, ತುಪ್ಪ, ಬೆಣ್ಣೆ, ಕರಿದ ಆಹಾರ ಪದಾರ್ಥ ಸೇವನೆ ಅತಿ ಕಡಿಮೆ ಮಾಡಬೇಕು.

* ಫ್ರಿಡ್ಜ್‌ನಲ್ಲಿಟ್ಟ ಆಹಾರಗಳನ್ನು ಸೇವನೆ ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.


ದಿಢೀರ್ ಸುಸ್ತಾದರೆ ಹೀಗೆ ಮಾಡಿ...

ಒಂದು ಲೀಟರ್ ನೀರಿಗೆ ಅರ್ಧ ಚಮಚ ಉಪ್ಪು ಹಾಗೂ 5 ಚಮಚ ಸಕ್ಕರೆ ಬೆರೆಸಿಕೊಂಡು ಇದನ್ನು ಮನೆಯಲ್ಲಿಯೂ ಕುಡಿಯಬಹುದು ಅಥವಾ ಹೊರಗಡೆ ಹೋಗುವಾಗಲೂ ಬಾಟಲ್‌ನಲ್ಲಿ ಒಯ್ಯಬಹುದು. ಇದು ಒಆರ್‌ಎಸ್‌ ತರಹ ಕೆಲಸ ಮಾಡಿ ನಮ್ಮ ದೇಹ ನಿರ್ಜಲೀಕರಣ ಆಗದಂತೆ ತಡೆಯುತ್ತದೆ.

ಬಿರು ಬಿಸಿಲಿನಲ್ಲಿ ಅಡ್ಡಾಡುವವರು ಹೀಟ್‌ಸ್ಟ್ರೋಕ್ ಬಗ್ಗೆ ಎಚ್ಚರ ವಹಿಸಬೇಕು. ಜತೆಯಲ್ಲಿ ನೀರು, ಹಣ್ಣು, ಒಣಹಣ್ಣುಗಳನ್ನು ಇಟ್ಟುಕೊಂಡಿರಬೇಕು. ಸರಿಯಾದ ರೀತಿಯಲ್ಲಿ ಊಟ, ತಿಂಡಿ ಮಾಡಬೇಕು. ಹೃದಯ ಸಮಸ್ಯೆ, ಸಕ್ಕರೆ ಕಾಯಿಲೆ, ಬಿ.ಪಿ., ರಕ್ತದ ಕೊರತೆ ಇತ್ಯಾದಿ ತೊಂದರೆ ಇರುವವರು ಬಿರು ಬಿಸಿಲಿನಲ್ಲಿ ಇನ್ನಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

ವಾರಗಟ್ಟಲೇ ಫ್ರಿಡ್ಜ್‌ನಲ್ಲಿಟ್ಟ ಆಹಾರ ಒಳ್ಳೆಯದಲ್ಲ

ಎಲ್ಲದಕ್ಕೂ ಫ್ರಿಡ್ಜ್ ಬಳಸುವುದು ಒಳ್ಳೆಯದಲ್ಲ. ಕೆಲವು ಗೃಹಿಣಿಯರು ದೋಸೆ ಹಿಟ್ಟನ್ನು ಒಮ್ಮೆಲೇ ಮಾಡಿ ಫ್ರಿಡ್ಜ್‌ನಲ್ಲಿಟ್ಟು ವಾರಗಟ್ಟಲೇ ಅದನ್ನು ಬಳಸುತ್ತಾರೆ. ಇದು ಸರಿಯಾದ ಮಾರ್ಗವಲ್ಲ. ಅಲ್ಲದೇ, ಫ್ರಿಡ್ಜ್‌ನಿಂದ ತೆಗೆದು ಬಹಳ ಹೊತ್ತಿನ ತನಕ ಇಡಬಾರದು. ಇದರಿಂದ ಆಹಾರ ವಿಷಪೂರಿತವಾಗುವ ಸಂಭವ ಜಾಸ್ತಿ ಆಗುತ್ತದೆ. ಅಲ್ಲದೇ, ಹೊರಗಿನ ಉಷ್ಣಾಂಶದ ಪ್ರಭಾವದಿಂದಾಗಿ ಬ್ಯಾಕ್ಟೀರಿಯಾಗಳು ಸೇರಿಸಿಕೊಂಡು ಹಲವು ರೋಗಗಳಿಗೆ ಕಾರಣವಾಗುತ್ತವೆ. ತರಕಾರಿ, ಮೊಸರು, ಮಜ್ಜಿಗೆ ಸೇರಿದಂತೆ ಬೇಗ ಕೆಡುವ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಆದರೆ, ಅಗತ್ಯಕ್ಕಿಂತ ಹೆಚ್ಚು ಅಡುಗೆ ಮಾಡಿ ಅದನ್ನು ಒಂದು ದಿನಕ್ಕಿಂತ ಹೆಚ್ಚು ಸಮಯ ಇಡಬಾರದು.

ಎಷ್ಟು ಅಗತ್ಯ ಇದೆಯೋ ಅಷ್ಟನ್ನು ಮಾತ್ರ ಅಡುಗೆ ಮಾಡಿಕೊಂಡು ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.


40ರ ಬಳಿಕ ಲಿಪಿಡ್‌ ಪ್ರೊಫೈಲ್ ಮಾಡಿಸಿ

40 ವಯಸ್ಸು ದಾಟಿದ ಬಳಿಕ ವರ್ಷಕ್ಕೊಮ್ಮೆ ಲಿಪಿಡ್‌ ಪ್ರೊಫೈಲ್‌ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಇದರಲ್ಲಿ ಹಲವು ವಿಧಗಳಿದ್ದು, ಈ ತಪಾಸಣೆಯಿಂದ ನಮ್ಮ ದೇಹದಲ್ಲಾದ ಬದಲಾವಣೆಗಳು, ಸಂಭವನೀಯ ಕಾಯಿಲೆಗಳ ಮಾಹಿತಿ ಕೊಲೆಸ್ಟ್ರಾಲ್‌ ಮಟ್ಟವನ್ನು ಅರಿಯಬಹುದು. ಈ ಪರೀಕ್ಷೆಯನ್ನು ಎಲ್ಲ ಆಸ್ಪತ್ರೆಗಳಲ್ಲಿ ಕಡಿಮೆ ದರದಲ್ಲಿ ಮಾಡಿಸಿಕೊಳ್ಳಬಹುದು.

ಶುದ್ಧೀಕರಿಸಿದ ನೀರು ಎಷ್ಟು ಶುದ್ಧ?

ಇತ್ತೀಚೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸಂಖ್ಯೆ ಹೆಚ್ಚುತ್ತಿದೆ. ನೀರನ್ನು ಸಂಸ್ಕರಿಸಿ ಕೊಡುವ ಇಂತಹ ಘಟಕಗಳು ಖಂಡಿತವಾಗಿಯೂ ಅಗತ್ಯ. ಆದರೆ, ನೀರನ್ನು ಎಲ್ಲಿಂದ ಬಳಸಿಕೊಳ್ಳುತ್ತಾರೆ ಎಂಬುದು ಕೂಡ ಅಷ್ಟೇ ಮುಖ್ಯ. ಎಷ್ಟೊ ಸಂದರ್ಭಗಳಲ್ಲಿ ಹೆಚ್ಚಾದ ಬೇಡಿಕೆಯನ್ನು ತುರ್ತಾಗಿ ಪೂರೈಸಲು ಕೊಳಚೆ ನೀರನ್ನೂ ಸಂಸ್ಕರಿಸುವ ಪ್ರಸಂಗಗಳು ನಡೆಯುತ್ತವೆ. ಹೀಗಾಗಿ, ನೀರಿನ ಮೂಲ ಎಲ್ಲಿಯದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಹುಬ್ಬಳ್ಳಿ–ಧಾರವಾಡ ಅವಳಿ ನಗರಕ್ಕೆ ಪೂರೈಕೆಯಾಗುವ ಮಲಪ್ರಭಾ ನದಿ ನೀರನ್ನು ಸಂಸ್ಕರಣೆ ಒಳಪಡಿಸಿಯೇ ಪೂರೈಸಲಾಗುತ್ತದೆ. ಹೀಗಾಗಿ, ಈ ನೀರನ್ನು ಮತ್ತೊಂದು ಬಾರಿ ಫಿಲ್ಟರ್‌ ಮಾಡದೆಯೇ ಕುಡಿಯಬಹುದು.

ನಿರಂತರ ಪ್ರಯಾಣ ಒಳ್ಳೆಯದಲ್ಲ...

ನಿರಂತರವಾಗಿ ಪ್ರಯಾಣ ಕೈಗೊಳ್ಳುವುದು ಹಾಗೂ ನಿದ್ದೆಗೆಡುವುದರಿಂದ ಮನುಷ್ಯರ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಪ್ರಯಾಣ ಅನಿವಾರ್ಯವೇ ಆಗಿದ್ದಲ್ಲಿ ಆದಷ್ಟು ಸ್ಲೀಪರ್‌ ಕ್ಲಾಸ್‌ ಸೀಟಿನಲ್ಲಿ ಸಂಚರಿಸುವುದು ಒಳ್ಳೆಯದು. ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ತಲೆ ಸುತ್ತು, ದೇಹದಲ್ಲಿ ಗುಳ್ಳೆಗಳು ಏಳುತ್ತವೆ. ಆಗ ಸಾಕಷ್ಟು ನೀರು ಕುಡಿಯಬೇಕು. ಎಳನೀರು ಹಾಗೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಪ್ರಯಾಣದ ಸಂದರ್ಭದಲ್ಲಿ ಯಾವಾಗಲೂ ನೀರನ್ನು ಕೊಂಡೊಯ್ಯುವುದು ಉತ್ತಮ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್‌ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಪ್ರಯಾಣದ ಸಂದರ್ಭದಲ್ಲಿ ಬಸ್‌ ಹಾಗೂ ರೈಲಿನ ಸೀಟುಗಳಿಗೆ ರೆಗ್ಸಿನ್‌ ಅಳವಡಿಸಿರುತ್ತಾರೆ. ಇದರಿಂದಾಗಿಯೂ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗುತ್ತದೆ. ಈ ಉಷ್ಣತೆಯನ್ನು ನಿಯಂತ್ರಿಸಲು ನಾವು ಆದಷ್ಟು ಕಾಟನ್‌ ಅಥವಾ ಸಿಂಥೆಟಿಕ್‌ ಬಟ್ಟೆಯನ್ನು ತೊಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT