ಮಂಗಳವಾರ, ಅಕ್ಟೋಬರ್ 27, 2020
28 °C
ಸಂಘಟನೆಗಳ ಮುಖಂಡರಲ್ಲಿ ಕಾಣದ ಒಗ್ಗಟ್ಟು, ಆಗದ ಯೋಜಿತ ಕಾರ್ಯಕ್ರಮ

ಬಾರದ ಹೋರಾಟಗಾರರು, ನಡೆಯದ ಹೆದ್ದಾರಿ ತಡೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ:‌ ಸುಗ್ರೀವಾಜ್ಞೆ ಹಾಗೂ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎನ್ನುವ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಹೋರಾಟ ಸಂಪೂರ್ಣವಾಗಿ ವಿಫಲವಾಯಿತು. ಈ ಸಭೆಯ ರೂಪುರೇಷೆ ನಿರ್ಧರಿಸಲು ಒಂದು ದಿನದ ಹಿಂದೆ ನಡೆದಿದ್ದ ಪೂರ್ವಭಾವಿ ಸಭೆಗೆ ಬಂದಿದ್ದ ಸದಸ್ಯರಲ್ಲಿ ಅರ್ಧದಷ್ಟು ಜನ ಕೂಡ ಹೋರಾಟದಲ್ಲಿ ಭಾಗಿಯಾಗಲಿಲ್ಲ!

ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐದಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ಗಬ್ಬೂರು ಬೈಪಾಸ್‌ನಲ್ಲಿ ಹೆದ್ದಾರಿ ಬಂದ್ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಶುಕ್ರವಾರ ಇದ್ಯಾವುದೂ ನಡೆಯಲಿಲ್ಲ.

ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮತ್ತು ಹಸಿರು ಕ್ರಾಂತಿ ಟ್ರಸ್ಟ್‌ ಸಂಘಟನೆಯವರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಸರ್ಕಾರಗಳು ಅನ್ನದಾತರನ್ನು ಕಷ್ಟಕ್ಕೆ ದೂಡುತ್ತಿವೆ. ರೈತರ ಸಂಕಷ್ಟಕ್ಕೆ ನೆರವಾಗುವ ಬದಲು ಅವರ ಭೂಮಿಯನ್ನು ಕಾರ್ಪೊರೇಟ್‌ ಕಂಪನಿಗಳಿಗೆ ವಹಿಸಿಕೊಡುತ್ತಿವೆ ಎಂದು ದೂರಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್‌ ಲಷ್ಕರ, ಇರ್ಷಾದ್ ಅತ್ತಾರ್‌, ಹಮೀದ್‌ ಬೆಂಗಾಲಿ, ಇರ್ಷಾದ್‌ ಅಹ್ಮದ್‌ ರೀತ್ತಿ, ರಫೀಕ್‌ ಬಿಸ್ತಿ, ಅಬ್ದುಲ್‌ ಕುಂಬಳೂರ, ಹಸಿರು ಕ್ರಾಂತಿಯ ಸಿದ್ದು ತೇಜಿ, ಬಾಬಾಜಾನ್‌ ಮುಧೋಳ ಸೇರಿದಂತೆ ಕೆಲವು ನಾಯಕರಷ್ಟೇ ಪಾಲ್ಗೊಂಡಿದ್ದರು.

ಮಧ್ಯಾಹ್ನದ ವೇಳೆಗೆ ಹಸಿರು ಕ್ರಾಂತಿಯ ಎಂಟರಿಂದ ಹತ್ತು ಸದಸ್ಯರಷ್ಟೇ ಗಬ್ಬೂರು ಬೈ ಪಾಸ್‌ನ ಟೋಲ್‌ ಸಮೀಪ ಬಂದು ಹೆದ್ದಾರಿ ತಡೆಗೆ ಮುಂದಾದರು. ಸಭೆಯಲ್ಲಿ ನಿರ್ಧಾರವಾದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಗಾರರು ಬಾರದ ಕಾರಣ ಇದ್ದವರಷ್ಟೇ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ತಡೆಯ ‘ಶಾಸ್ತ್ರ’ ಮುಗಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಿದ್ದು ತೇಜು ‘ಸಭೆಯಲ್ಲಿ ಭರವಸೆ ನೀಡಿದ ಬಹಳಷ್ಟು ಜನ ಬರಲೇ ಇಲ್ಲ. ಬಹುತೇಕ ಹೋರಾಟಗಾರರು ಫೋನ್‌ ಸ್ವಿಚ್‌ ಆಫ್‌ ಮಾಡಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಂಗ್ರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಂಜೀವ ಧುಮಕ್ಕನಾಳ ಸೇರಿದಂತೆ ಈ ಸಂಘದ ಕೆಲವರು ಹೆದ್ದಾರಿ ಬಳಿ ಬಂದರೂ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ಇದರ ಬಗ್ಗೆ ಪ್ರತಿಕ್ರಿಯಿಸಿದ ಸಂಜೀವ ‘ಸಿದ್ದು ತೇಜಿ ಹಾಗೂ ಇನ್ನಷ್ಟು ಹೋರಾಟಗಾರರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷಾತೀತವಾಗಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಹಸಿರು ಕ್ರಾಂತಿ ಫಲಕದಲ್ಲಿ ಜೆಡಿಎಸ್‌ ನಾಯಕರೇ ಇದ್ದರು. ಆದ್ದರಿಂದ ನಾವು ಬೆಂಬಲ ನೀಡಲಿಲ್ಲ. ಸಭೆಯಲ್ಲಿ ತಿರ್ಮಾನಿಸಿದಂತೆ ಯಾರೂ ನಡೆದುಕೊಳ್ಳಲಿಲ್ಲ’ ಎಂದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.