ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಅನುಷ್ಠಾನ: ಶ್ವೇತಪತ್ರ ಹೊರಡಿಸಿ- ಎಚ್.ಕೆ. ಪಾಟೀಲ ಆಗ್ರಹ

Last Updated 15 ಫೆಬ್ರುವರಿ 2023, 8:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹದಾಯಿ ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಇದುವರೆಗಿನ ಬೆಳವಣಿಗೆಗಳ‌ ಕುರಿತು, ರಾಜ್ಯ ಸರ್ಕಾರ ಪ್ರಸಕ್ತ ಅಧಿವೇಶನದಲ್ಲೇ ಶ್ವೇತಪತ್ರ ಹೊರಡಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಯ ಅಗತ್ಯವಿರುವ ಅರಣ್ಯ ಬಳಕೆಗೆ ಪ್ರಾದೇಶಿಕ ಅರಣ್ಯ ಸಮಿತಿ ಅನುಮತಿ ನೀಡಿಲ್ಲ. ಹುಲಿ ಕಾರಿಡಾರ್‌ ಹಾಗೂ ಪರಿಹಾರಾತ್ಮಕ ಹಸಿರು ಬೆಳೆಸುವ ಕುರಿತು ಪ್ರಸ್ತಾಪ ಮಾಡಿದೆ. ಇದರ ಬೆನ್ನಲ್ಲೇ, ಎಲ್ಲಾ ರೀತಿಯ ಶಾಸನಬದ್ಧ ಅನುಮತಿಗಳನ್ನು ಪಡೆದುಕೊಂಡೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಪುನರುಚ್ಚರಿಸಿದೆ’ ಎಂದು ತಿಳಿಸಿದರು.

‘ಡಿಪಿಆರ್‌ಗೆ ಅನುಮೋದನೆ ಸಿಕ್ಕ 72 ತಾಸಿನೊಳಗೆ ಅರಣ್ಯ ಇಲಾಖೆ ಅನುಮತಿ ಪಡೆದು, ಚುನಾವಣೆ ಘೋಷಣೆಗೂ ಮುಂಚೆಯೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದರು. ವಿಜಯೋತ್ಸವ ಆಚರಿಸುವಾಗ ಇದ್ದ ಉತ್ಸಾಹ ಯೋಜನೆಯ ಹಾದಿ ಸುಗಮಗೊಳಿಸಲು ಯಾಕಿಲ್ಲ’ ಎಂದು ಪ್ರಶ್ನಿಸಿದರು.

‘ರಾಜ್ಯದವರೇ, ಅದರಲ್ಲೂ ಬಿಜೆಪಿಯವರೇ ಇರುವ ಪ್ರಾದೇಶಿಕ ಅರಣ್ಯ ಸಮಿತಿಯು ವಿಶೇಷ ಸಭೆ ನಡೆಸಿ ಗಣಿಗಾರಿಕೆಗೆ ಪರವಾನಗಿ ನೀಡಲು ಮುಂದಾಗಿದೆ. ಆದರೆ, ಮಹದಾಯಿ ವಿಷಯದಲ್ಲಿ ವಿಶೇಷ ಸಭೆ‌‌ಗೆ ಮೀನಮೇಷ ಎಣಿಸುತ್ತಿದೆ. ಬಂಡೂರಿ ವಿಷಯದಲ್ಲಿ ಬಾರದ ವನ್ಯಜೀವಿ ಕಾಯ್ದೆಗೆ ಸಂಬಂಧಿಸಿದ ವಿವರಣೆಯು ಕಳಸಾ ವಿಷಯದಲ್ಲಿ ಯಾಕೆ ಬಂತು. ಇದೆಲ್ಲಾ ಬಿಜೆಪಿ ಕೃಪಾಪೋಷಿತ ರಾಜಕೀಯ ನಾಟಕ’ ಎಂದು ವಾಗ್ದಾಳಿ ನಡೆಸಿದರು.

‘ಅನುಮತಿಗಾಗಿ ಪ್ರತ್ಯೇಕ ಸಭೆಗೆ ಒತ್ತಡ ಹೇರಿ’

‘ಮಹದಾಯಿ ತೀರ್ಪಿನ ಗೆಜೆಟ್ ನೋಟಿಫಿಕೇಷನ್ ಆಗಿ ಮೂರು ವರ್ಷವಾಗಿದೆ. ಯೋಜನೆ ಜಾರಿಗೆ ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಗೆ ಇದುವರೆಗೆ ಯಾವುದೇ ಅರ್ಜಿ ಕೊಟ್ಟಿಲ್ಲ. ಇದನ್ನು ಪ್ರಶ್ನಿಸಿದ ನಮ್ಮನ್ನೇ ಬಿಜೆಪಿಯವರು ಮೂರ್ಖರು ಎನ್ನುತ್ತಾರೆ. ರಾಜ್ಯ ಸರ್ಕಾರ‌ಕ್ಕೆ ನಿಜವಾಗಿಯೂ ಕಾಳಜಿ‌ ಇದ್ದರೆ, ಮಹದಾಯಿಗಾಗಿ ‌ಪ್ರಾದೇಶಿಕ ಅರಣ್ಯ ಸಮಿತಿ ಪ್ರತ್ಯೇಕ ಸಭೆ ಕರೆಯುವಂತೆ ಒತ್ತಡ ಹೇರಲಿ. ಯೋಜನೆಗೆ ಅಗತ್ಯ ಅನುಮತಿ ಪಡೆದುಕೊಳ್ಳಲಿ’ ಎಂದು ಎಚ್‌.ಕೆ. ಪಾಟೀಲ ಒತ್ತಾಯಿಸಿದರು.

‘ಮಹದಾಯಿ ನಮ್ಮ‌ ಕೊಡುಗೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಾರೆ. ಯೋಜನೆ ಹುಟ್ಟು ಹಾಕಿದ್ದು ನಾನೇ. ಕಾಂಗ್ರೆಸ್ ಪಕ್ಷದ ಕೊಡುಗೆ ಇದು. ಯೋಜನೆಗೆ ಅಗತ್ಯ ಅರಣ್ಯ ಭೂಮಿ ಕೊಡಲು ಬಿಜೆಪಿಯೇ ಈಗ ಅಡ್ಡಗಾಲು ಹಾಕುತ್ತಿದೆ. ಸುಳ್ಳುಗಳ ಮೇಲೆ ಸವಾರಿ ಮಾಡುವ ಬಿಜೆಪಿಗೆ ಉತ್ತರ ಕರ್ನಾಟಕದಲ್ಲಿ‌ ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲವಾಗಿದೆ. ಅವರ ಸುಳ್ಳಿನ ಮುಖವಾಡವನ್ನು ನಾವು ಬಯಲು ಮಾಡುತ್ತೇವೆ’ ಎಂದರು.

‘ಕಾಂಗ್ರೆಸ್ ಅಭ್ಯರ್ಥಿಗಳ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಈ ತಿಂಗಳಾಂತ್ಯದ ಹೊತ್ತಿಗೆ ಮುಗಿಸಲಾಗುವುದು. ಮಾರ್ಚ್ ಮೊದಲ ವಾರದಲ್ಲಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT