ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಆಚರಣೆಯ ಸಡಗರದ ಚಿತ್ತಾರ

ಕೋವಿಡ್ ನಿರ್ಬಂಧವಿಲ್ಲದೆ ಸ್ವಚ್ಚಂದವಾಗಿ ಬಣ್ಣದೋಕುಳಿ ಆಡಿದ ಧಾರಾನಗರಿ
Last Updated 19 ಮಾರ್ಚ್ 2022, 15:29 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್‌–19 ಸೋಂಕು ಹಿಂದಕ್ಕೆ ಸರಿಯುತ್ತಿದ್ದಂತೆ ಸಂಭ್ರಮ ಮುನ್ನೆಲೆಗೆ ಬಂದಿದೆ. ಅದರಲ್ಲೂ ಹೋಳಿ ಹಬ್ಬದ ಬಣ್ಣದೋಕುಳಿಯ ಸಂಭ್ರಮ ಶನಿವಾರ ನಗರದಾದ್ಯಂತ ಬಗೆಬೆಗೆಯ ಚಿತ್ತಾರಗಳನ್ನು ಮೂಡಿಸಿತ್ತು.

ಕೆಂಪು, ಗುಲಾಬಿ, ಹಸಿರು, ನೀಲಿ ಸೇರಿದಂತೆ ಬಗೆಬಗೆಯ ಬಣ್ಣಗಳ ಲೋಕದಲ್ಲಿ ನಗರ ಮಿಂದೆದ್ದಿತು. ಕೋವಿಡ್ ಭೀತಿ ಇಲ್ಲದೆ ಬಣ್ಣದ ಮೇಲಾಟವೇ ಹೆಚ್ಚಾಗಿತ್ತು.

ಯುವಕ, ಯುವತಿಯರು, ಚಿಣ್ಣರು, ಮಹಿಳೆಯರು, ಹಿರಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. 2ನೇ ಅಲೆಯಲ್ಲಿ ಕೇವಲ ಬಡಾವಣೆ ಹಾಗೂ ಮನೆಗಳಿಗಷ್ಟೇ ಸೀಮಿತವಾಗಿದ್ದ ಹೋಳಿ, ಈ ಬಾರಿ ಮುಖ್ಯ ರಸ್ತೆಗೆ ವಿಸ್ತರಿಸುವಷ್ಟರ ಮಟ್ಟಿಗೆ ಸ್ವಾತಂತ್ರ್ಯ ಪಡೆದಿತ್ತು.

‌ನಗರದಮಟ್ಟಿಪ್ಲಾಟ್, ಜಯನಗರ, ಸಪ್ತಾಪುರ, ಗಾಂಧಿನಗರ, ರಜತಗಿರಿಯ ಮುಖ್ಯ ರಸ್ತೆಗಳೂ ಹೋಳಿ ಆಟದ ಅಂಗಳವಾಗಿ ಪರಿವರ್ತನೆಯಾಗಿದ್ದವು. ಬಣ್ಣಗಳ ಜತೆ, ಪೀಪಿ ಹಾಗೂ ಹಲಗೆಯ ಸದ್ಧು, ತರಹೇವಾರಿ ಮುಖವಾಡಗಳ ಆಕಾರ, ಪಿಚಕಾರಿಗಳಿಂದ ಹೊರಟ ಬಣ್ಣದ ನೀರುಗಳ ಚಿತ್ತಾರ ಹೋಳಿಯ ಸಂಭ್ರಮವನ್ನು ಸಾಕ್ಷೀಕರಿಸಿತ್ತು.

ಕೆಲವೆಡೆ ರಾಸಾಯನಿಕ ಬಣ್ಣಗಳನ್ನು ತ್ಯಜಿಸಿ, ನೈಸರ್ಗಿಕ ಬಣ್ಣಗಳನ್ನೇ ಬಳಸಿದ್ದು ಕಂಡುಬಂತು. ಶುದ್ಧ ಅರಿಸಿನ ಪುಡಿ ಬಳಸಿ ಬಣ್ಣದ ಹಬ್ಬವನ್ನು ಸಂಭ್ರಮಿಸಿದರು.ಸಂಗೀತದ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬೂಸಪ್ಪ ಓಣಿ, ರಾಮನಗೌಡರ ಓಣಿ ಮುಂತಾದ ಕಡೆ ಕಾಮದಹನದ ನಂತರ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಯುವಕರು ಸೇರಿ ಬಣ್ಣ ಎರಚಾಡಿ ಸಂಭ್ರಮಿಸಿದರು. ಗುಲಗಂಜಿಕೊಪ್ಪ, ಟಿಕಾರೆ ರಸ್ತೆ, ಲೈನ್‌ ಬಜಾರ್‌, ಭೋವಿಗಲ್ಲಿ, ಸಪ್ತಾಪುರ, ಜಯನಗರ, ವಿವೇಕಾನಂದ ನಗರ, ರೋಟ್ಸನ್ ಅಪಾರ್ಟ್‌ಮೆಂಟ್‌ ಮುಂತಾದ ಕಡೆಗಳಲ್ಲಿ ನಾಗರಿಕರು ಹೋಳಿಯ ಸಡಗರದಲ್ಲಿ ಪಾಲ್ಗೊಂಡಿದ್ದರು. ಪಿಚಕಾರಿಗಳಲ್ಲಿ ಬಣ್ಣ ತುಂಬಿ ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಮತ್ತು ಜನರ ಮೇಲೆ ಬಣ್ಣ ಎರಚಿ ಮಕ್ಕಳು ಖುಷಿಪಟ್ಟರು.

ಅಲ್ಲಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಗಡಿಗೆ ಒಡೆಯುವ ಸ್ಪರ್ಧೆಗೆ ನಿಷೇಧ ಹೇರಲಾಗಿತ್ತು.ಹೋಳಿ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮದ್ಯ ಮಾರಾಟ ಇಲ್ಲದಿದ್ದರೂ, ಮದ್ಯ ಸೇವನೆ ಅವ್ಯಾಹತವಾಗಿ ನಡೆಯಿತು. ಇದರ ನಡುವೆಯೂ ಬಣ್ಣದ ಓಕುಳಿಯ ಜತೆಗೆ ಮದ್ಯದ ಅಮಲಿನಲ್ಲಿ ಕೆಲವರು ತೇಲಾಡಿದರು.

ಪೊಲೀಸರು ವಿನಾಯಿತಿ ನೀಡಿದವರಂತೆಯೇ ಹೆಲ್ಮೆಟ್ ಧರಿಸದೆ, ಇಬ್ಬರಿಗಿಂತ ಹೆಚ್ಚು ಜನರು ಬೈಕಿನಲ್ಲಿ ಕೂತು ಮುಕ್ತವಾಗಿ ಯುವಕ, ಯುವತಿಯರು ಸಂಚರಿಸಿದರು. ಕರ್ಕಷ ಶಬ್ದಗಳ ಬೈಕುಗಳು ರಸ್ತೆಗಳಲ್ಲಿ ಅಬ್ಬರಿಸಿದವು.ನಗರದ ಹೊರ ವಲಯದ ಮಾವಿನ ತೋಟಗಳಲ್ಲಿನ ಮರಗಳ ನೆರಳಿನಲ್ಲಿ ಬಣ್ಣ ಆಡಿ ಗುಂಡು–ತುಂಡಿನ ಔತಣ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT