ಗುರುವಾರ , ಫೆಬ್ರವರಿ 27, 2020
19 °C
ವಿವಾಹಕ್ಕೆ ವಿಭಿನ್ನವಾಗಿ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ ಹೂಲಿ ಪರಿವಾರ

ಮದುವೆಯಲ್ಲಿ ಸಿಗಲಿದೆ ‘ಕನ್ನಡ ನುಡಿಯ ತಾಂಬೂಲ’

ಪ್ರಮೋದ್ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮದುವೆಗೆ ಬಂದವರಿಗೆ ತಾಂಬೂಲ ನೀಡುವುದು ಸಾಮಾನ್ಯ. ಆದರೆ, ನಗರದ ಕನ್ನಡ ಪ್ರೇಮಿಯೊಬ್ಬರು ತಮ್ಮ ಮಗನ ಮದುವೆಗೆ ಬಂದವರಿಗೆ ಕನ್ನಡದ ಹೆಸರಾಂತ ಕವಿಗಳ, ಕಲಾವಿದರ, ಸಂಗೀತ ದಿಗ್ಗಜರ ಮಾಹಿತಿ ಒಳಗೊಂಡ ‘ಕನ್ನಡ ನುಡಿಯ ತಾಂಬೂಲ’ ಕಿರು ಪುಸ್ತಕ ನೀಡಲು ಮುಂದಾಗಿದ್ದಾರೆ. ಇದೇ ಪುಸ್ತಕದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿದ್ದಾರೆ.

ನಗರದ ಸರಾಫ್‌ಗಟ್ಟಿಯ ಎಂ.ಎಂ. ಹೂಲಿ ಅಂಡ್‌ ಸನ್ಸ್‌ ಜ್ಯುವೆಲರ್ಸ್‌ ಅಂಗಡಿಯ ಮಾಲೀಕ ವೀರಭದ್ರಪ್ಪ ಮಡಿವಾಳಪ್ಪ ಹೂಲಿ ತಮ್ಮ ಮಗ ವಿನಾಯಕನ ಮದುವೆಗಾಗಿ ಈ ಆಮಂತ್ರಣ ಸಿದ್ಧಪಡಿಸಿದ್ದಾರೆ.

‘ಹೂಬಳ್ಳಿಯ ಪುಸ್ತಕಗಳು’ ಪ್ರಕಟಿಸಿರುವ ಅವರು ಮದುವೆ ಆಮಂತ್ರಣದ ಕಿರು ಹೊತ್ತಿಗೆಯಲ್ಲಿ ಸಿದ್ಧಾರೂಢ ಸ್ವಾಮೀಜಿ, ಡಾ.ಗಂಗಾಧರ ಸ್ವಾಮೀಜಿ, ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಸ್ಮರಿಸಿದ್ದಾರೆ.

ಬಳಿಕ ರೆ. ಉತ್ತಂಗಿ ಚನ್ನಪ್ಪ, ವೀರರಾಣಿ ಕಿತ್ತೂರು ಚನ್ನಮ್ಮ, ಜಿ.ಪಿ.ರಾಜರತ್ನಂ, ಚಿತ್ರ ಕಲಾವಿದ ಡಿ.ವಿ. ಹಾಲಭಾವಿ, ಫ.ಗು. ಹಳಕಟ್ಟಿ, ಕುಂಚ ಬ್ರಹ್ಮ ಡಾ.ಎಂ.ವಿ.ಮಿಣಜಗಿ, ಸರ್ವಜ್ಞ, ಶಿಂಪಿ ಲಿಂಗಣ್ಣ, ಮಲ್ಲಿಕಾರ್ಜುನ ಮನ್ಸೂರ, ಡಾ. ಡಿ.ಎಸ್‌. ಕರ್ಕಿ, ಗಂಗೂಬಾಯಿ ಹಾನಗಲ್, ಚನ್ನವೀರ ಕಣವಿ, ಸರ್‌ ಸಿದ್ದಪ್ಪ ಕಂಬಳಿ, ಹರ್ಡೇಕರ್‌ ಮಂಜಪ್ಪ, ಭೀಮಸೇನ್‌ ಜೋಶಿ, ಗಳಗನಾಥ, ಪಾಟೀಲ ಪುಟ್ಟಪ್ಪ ಹೀಗೆ ಅನೇಕರ ಮಾಹಿತಿ ಹೊತ್ತಿಗೆಯಲ್ಲಿದೆ.

ಸಾಹಿತಿಗಳು, ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಂಗೀತ ದಿಗ್ಗಜರು, ರಾಷ್ಟ್ರೀಯ ನಾಯಕರು, ಕಲಾವಿದರ ಸ್ಫೂರ್ತಿಯ ಮಾತುಗಳು ಹೊತ್ತಿಗೆಯಲ್ಲಿ ದಾಖಲಾಗಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಾಹಿತಿಯನ್ನೂ ಫೋಟೊ ಸಮೇತ ಪ್ರಕಟಿಸಿದ್ದಾರೆ.

ವೀರಭದ್ರಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ವಿನಾಯಕ ಅವರ ವಿವಾಹ ಫೆ. 14ರಂದು ಇಚಲಕರಂಜಿಯ ಸುಭಾಷ ಬಸವರಾಜ ಗುಣಕಿ ಹಾಗೂ ಭಾರತಿ ದಂಪತಿಯ ಪುತ್ರಿ ದಾನೇಶ್ವರಿ ಜೊತೆ ಚವ್ಹಾಣ ಗ್ರೀನ್‌ ಗಾರ್ಡನ್‌ನಲ್ಲಿ ಆಯೋಜನೆಯಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೀರಭದ್ರಪ್ಪ ‘ನಾನು ಮೊದಲಿನಿಂದಲೂ ಕನ್ನಡ ಪ್ರೇಮಿ. ಮದುವೆಯ ನೆಪದಲ್ಲಿ ಕನ್ನಡದ ಸಾಧಕರ ಪರಿಚಯದ ಹೊತ್ತಿಗೆ ಪ್ರಕಟಿಸಿದ್ದೇವೆ. ಆಮಂತ್ರಣ ಪತ್ರಿಕೆ ಜೊತೆ ಪ್ರಮುಖ ಸಾಧಕರ ಮಾಹಿತಿ ನೀಡಿದ್ದೇವೆ. ಮದುವೆ ದಿನ ಕಲ್ಯಾಣ ಮಂಟಪದಲ್ಲಿ ಪ್ರಮುಖ ಸಾಹಿತಿಗಳ, ಕಲಾವಿದರ ಭಾವಚಿತ್ರಗಳನ್ನು ಪ್ರದರ್ಶಿಸುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು