ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಮೇಲೆ ಹಾಸ್ಟೆಲ್ ವಾರ್ಡನ್ ಕ್ರೌರ್ಯ

ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಹೊಟ್ಟೆಗೆ ಒದ್ದ; ಬಾಲಕನ ಸ್ಥಿತಿ ಗಂಭೀರ
Last Updated 2 ಅಕ್ಟೋಬರ್ 2019, 13:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಾಸಿಗೆಯಲ್ಲಿ ಮೂತ್ರ ಮಾಡಿದ ಎಂಬ ಕಾರಣಕ್ಕಾಗಿ 4ನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಹಾಸ್ಟೆಲ್ ವಾರ್ಡನ್ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಹೊಟ್ಟೆಗೆ ಬಲವಾಗಿ ಒದ್ದಿರುವುದರಿಂದ ಒಳಗೆ ಬಾವು ಆಗಿ ಊದಿಕೊಂಡಿದ್ದು, ವಿದ್ಯಾರ್ಥಿ ಗಂಭೀರ ಸ್ಥಿತಿಗೆ ತಲುಪಿದ್ದಾನೆ.

ನೇಕಾರನಗರದ ವಿಜಯ ಮೃತ್ಯುಂಜಯ ಹಿರೇಮಠ ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ 23 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್‌ನ ಛಾತ್ರಾಲಯ ಖಾಸಗಿ ಹಾಸ್ಟೆಲ್‌ನ ವಾರ್ಡನ್ ಶ್ರವಣಕುಮಾರ ಹಲ್ಲೆ ನಡೆಸಿದಾತ.

ಹೊಟ್ಟೆಗೆ ಒದ್ದ:‘ಪೆನ್ಸಿಲ್ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮಗ ಹಾಗೂ ಮತ್ತೊಬ್ಬ ವಿದ್ಯಾರ್ಥಿ ಜತೆ ಜಗಳವಾಗಿತ್ತು. ಆಗ ವಾರ್ಡನ್ ಶ್ರವಣಕುಮಾರ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಹೆದರಿದ ಮಗ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಇದನ್ನು ಗಮನಿಸಿದ ವಾರ್ಡನ್, ಮಗನ ಹೊಟ್ಟೆಗೆ ಒದ್ದಿದ್ದಾರೆ. ಆಗ ಆತ ಹಾಸಿಗೆಯಲ್ಲೇ ಮಲ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ವಾರ್ಡನ್ ಮತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ’ ಎಂದು ವಿದ್ಯಾರ್ಥಿಯ ತಂದೆ ಮೃತ್ಯುಂಜಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲ್ಲೆಯಿಂದ ಮಗನಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹಾಸ್ಟೆಲ್‌ಗೆ ಕರೆ ಮಾಡಿ ಮಗನ ಕುರಿತು ವಿಚಾರಿಸಿದಾಗ, ಆತ ಚನ್ನಾಗಿಯೇ ಇದ್ದಾನೆ ಎಂದು ವಾರ್ಡನ್ ಸುಳ್ಳು ಹೇಳಿದರು. ಆದರೆ, ಮಗನ ಜತೆ ಮಾತನಾಡಿದಾಗ, ಆತನಿಗೆ ಹುಷಾರಿಲ್ಲದಿರುವುದು ಗೊತ್ತಾಯಿತು’ ಎಂದು ಹೇಳಿದರು.

‘ಮಾರನೇಯ ದಿನ ಹಾಸ್ಟೆಲ್‌ಗೆ ಹೋದಾಗ, ಮಗ ಹಾಸಿಗೆ ಹಿಡಿದಿದ್ದ. ಜ್ವರದಿಂದ ಬಳಲುತ್ತಿದ್ದ ಆತನಿಗೆ ಚಿಕಿತ್ಸೆ ಕೊಡಿಸಿರುವುದಾಗಿ ವಾರ್ಡನ್ ಹೇಳಿದರು. ಮಗನನ್ನು ಇಲ್ಲೇ ಬಿಟ್ಟರೆ ಆರೋಗ್ಯ ಮತ್ತಷ್ಟು ಹದಗೆಡುತ್ತದೆಂದು ಮನೆಗೆ ಕರೆದುಕೊಂಡು ಬಂದಾಗ, ವಾರ್ಡನ್ ಮನಬಂದಂತೆ ಹಲ್ಲೆ ನಡೆಸಿದ್ದಾಗಿ ಹೇಳಿದ. ಬಳಿಕ, ಕಿಮ್ಸ್ ಆಸ್ಪತ್ರೆಗೆ ತಂದು ದಾಖಲಿಸಿದೆವು’ ಎಂದು ತಿಳಿಸಿದರು.

ದಿಕ್ಕು ತೋಚುತ್ತಿಲ್ಲ:‘ಪೌರೋಹಿತ್ಯ ಮಾಡಿಯೇ ಕುಟುಂಬವನ್ನು ನೋಡಿಕೊಳ್ಳಬೇಕು. ದಿನದ ದುಡಿಮೆಯೇ ಬದುಕಿಗೆ ಆಧಾರ. ಪತ್ನಿಗೆ ಕಣ್ಣು ಹಾಣುವುದಿಲ್ಲ. ಮೂವರು ಮಕ್ಕಳ ಪೈಕಿ, ಕಡೆಯನ ಸ್ಥಿತಿ ನೋಡಿದರೆ, ಕರಳು ಕಿತ್ತು ಬರುತ್ತದೆ. ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ಮಗನನ್ನು ಆಸ್ಪತ್ರೆಗೆ ದಾಖಲಿಸಿ 23 ದಿನವಾದರೂ, ಹಾಸ್ಟೆಲ್‌ನವರು ಇದುವರೆಗೆ ನಮ್ಮತ್ತ ತಿರುಗಿ ನೋಡಿಲ್ಲ’ ಎಂದು ಮೃತ್ಯುಂಜಯ ಅವರು ಕಣ್ಣೀರು ಹಾಕಿದರು.

ಮುಂದಿನ ವಾರ ಶಸ್ತ್ರಚಿಕಿತ್ಸೆ:‘ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಜೀರ್ಣಾಂಗದಲ್ಲಿ ಬಾವು ಕಾಣಿಸಿಕೊಂಡು, ಜೀರ್ಣ ಕ್ರಿಯೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯ ಆತನಿಗೆ ಪೈಪಿನ ಮೂಲಕ ಪೌಷ್ಠಿಕ ಆಹಾರ ನೀಡಲಾಗುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಮುಂದಿನ ವಾರ ಪಾನ್‌ಕ್ರಿಯಾಸ್ಟಿಕ್ ಜೆಜಾಸ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಬಳಿಕ, ಆತ ಗುಣಮುಖವಾಗಲಿದ್ದಾನೆ’ ಎಂದು ಕಿಮ್ಸ್ ವೈದ್ಯ ಡಾ. ಪ್ರಕಾಶ ವಾರಿ ತಿಳಿಸಿದರು.

ದಾಖಲಾಗದ ದೂರು

ವಿದ್ಯಾರ್ಥಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ, ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.

‘ಮಗನ ಮೇಲಿನ ಹಲ್ಲೆ ಸಂಬಂಧ, ಕಿಮ್ಸ್‌ನಲ್ಲಿರುವ ಪೊಲೀಸ್ ಹೊರಠಾಣೆಯಲ್ಲಿ ಎಂಎಲ್‌ಸಿ ಮಾಡಿಸಿದ್ದೆವು. ಪೊಲೀಸರು, ಹಾನಗಲ್ ಠಾಣೆಗೆ ಮಾಹಿತಿ ನೀಡಿರುವುದಾಗಿ ಹೇಳಿದರು. ಅಲ್ಲಿಂದ ಬಂದಿದ್ದ ಇಬ್ಬರು, ತಾವು ಪೊಲೀಸರು ಎಂದು ಹೇಳಿಕೊಂಡು ನನ್ನ ಹಾಗೂ ಮಗನ ಹೇಳಿಕೆ ಪಡೆದರು. ಬಿಳಿ ಹಾಳೆ ಮೇಲೆ ನನ್ನ ಸಹಿ ಪಡೆದುಕೊಂಡು ದೂರು ದಾಖಲಿಸಿಕೊಳ್ಳುವುದಾಗಿ ಹೇಳಿದರು. ಬಳಿಕ, ಇದುವರೆಗೆ ಯಾರೂ ಆಸ್ಪತ್ರೆಗೆ ಬಂದಿಲ್ಲ. ನನ್ನನ್ನೂ ಸಂಪರ್ಕಿಸಿಲ್ಲ’ ಎಂದು ವಿದ್ಯಾರ್ಥಿ ತಂದೆ ಮೃತ್ಯುಂಜಯ ಹಿರೇಮಠ ಹೇಳಿದರು.

ಕಿಮ್ಸ್‌ಗೆ ಸಿಬ್ಬಂದಿ ಕಳಿಸುವೆ:‘ವಿಷಯ ಗೊತ್ತಾದ ಬಳಿಕ, ಇಬ್ಬರು ಸಿಬ್ಬಂದಿಯನ್ನು ಕಿಮ್ಸ್‌ಗೆ ಕಳಿಸಿ ವಿದ್ಯಾರ್ಥಿ ಮತ್ತು ಆತನ ತಂದೆಯ ಹೇಳಿಕೆ ಪಡೆದಿದ್ದರು. ಈ ವೇಳೆ, ಹಾನಗಲ್‌ಗೆ ಬಂದು ದೂರು ಕೊಡುವುದಾಗಿ ತಂದೆ ಹೇಳಿದ್ದರು. ಆದರೆ, ಇದುವರೆಗೆ ಬಂದಿಲ್ಲ. ಹಾಗಾಗಿ, ಮತ್ತೊಮ್ಮೆ ಕಿಮ್ಸ್‌ಗೆ ಸಿಬ್ಬಂದಿಯನ್ನು ಕಳಿಸಿ ತಂದೆ–ಮಗನ ಹೇಳಿಕೆ ಪಡೆದು, ದೂರು ಸ್ವೀಕರಿಸಲಾಗುವುದು’ ಎಂದು ಹಾನಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT