ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಗೃಹ ನಿರ್ಮಾಣಕ್ಕೆ ಕೋವಿಡ್‌ ಪೆಟ್ಟು

ಕಾಲಮಿತಿಯಲ್ಲಿ ಮುಗಿಯದ ಕಾಮಗಾರಿ: ಏರುತ್ತಿದೆ ವೆಚ್ಚ
Last Updated 6 ಜೂನ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊಸ ಮನೆ ನಿರ್ಮಾಣದ ಕನಸು ಹೊತ್ತವರಿಗೆ ಕೋವಿಡ್ ಲಾಕ್‌ಡೌನ್‌ ಭಾರಿ ಪೆಟ್ಟು ನೀಡಿದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಯದ ತಲೆಬಿಸಿ ಒಂದು ಕಡೆಯಾದರೆ, ನಿರ್ಮಾಣ ವೆಚ್ಚ ಏರಿಕೆಯಾಗುತ್ತಿರುವುದು ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿದೆ.

ಕಾಮಗಾರಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ, ಕೆಲಸ ಮುಂದುವರಿಸಲು ಹಲವು ಸಮಸ್ಯೆಗಳು ಎದುರಾಗಿವೆ. ಕಾರ್ಮಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸಾರ್ವಜನಿಕ ಸಾರಿಗೆ ಇಲ್ಲ. ನಿರ್ದಿಷ್ಟ ಸ್ಥಳ ತಲುಪಲು ಖಾಸಗಿ ವಾಹನವನ್ನೇ ಬಳಸಬೇಕಾಗಿದೆ. ವಾಹನ ಇಲ್ಲದವರು ಕೈಕಟ್ಟಿ ಕುಳಿತಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಕಾರ್ಮಿಕರು ಇಲ್ಲದೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.

ಆರ್‌ಸಿಸಿ ಹಂತ ಮುಗಿದಿರುವ ಮನೆಗಳಲ್ಲಿ ಕಾರ್ಮಿಕರು ಮೊಕ್ಕಾಂ ಹೂಡಿರುವ ಹಲವು ಉದಾಹರಣೆಗಳಿವೆ. ಇಲ್ಲಿ ಕಾರ್ಮಿಕರಿದ್ದರೂ ನಿರ್ಮಾಣ ಮುಂದುವರಿಸಲು ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಎಲ್ಲ ಕೆಲಸಗಳು ನಡೆಯುತ್ತಿಲ್ಲ, ಇರುವ ಕಚ್ಚಾ ವಸ್ತುಗಳನ್ನು ಮಾತ್ರ ಬಳಸಿ ಕೆಲಸ ಮಾಡಲಾಗುತ್ತಿದೆ.

ಕೆಲವೆಡೆ ಮರಳು, ಸಿಮೆಂಟ್, ಕಬ್ಬಿಣ ಹಾಗೂ ಹಾರ್ಡ್‌ವೇರ್‌ ವಸ್ತುಗಳು ಲಭ್ಯವಾಗುತ್ತಿವೆ. ಆದರೆ, ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆ (ಆನ್‌) ನೀಡಿ ಖರೀದಿಸಬೇಕಾಗಿದೆ. ಇದು ಸಹ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅಲ್ಲದೆ, ಮನೆ ನಿರ್ಮಾಣದ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚುವರಿ ಅವಧಿಗೆ ಭರಿಸಬೇಕಾಗಿದೆ.

ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋದರೆ ಉಳಿಯುವ ಬಾಡಿಗೆ ಹಣವನ್ನು ಸಾಲದ ಕಂತಿಗೆ ಹೊಂದಿಸಬಹುದು ಎಂಬ ಮಧ್ಯವ ವರ್ಗದವರ ಲೆಕ್ಕಾಚಾರ ತಲೆಕೆಳಗಾಗಿದೆ. ಬಾಡಿಗೆ– ಸಾಲದ ಕಂತು ಎರಡೂ ಹೆಚ್ಚುವರಿ ಅವಧಿಗೆ ಕಟ್ಟುವುದು ಅನಿವಾರ್ಯವಾಗಿದೆ.

‘2020ರಲ್ಲಿ ಮನೆ ನಿರ್ಮಾಣ ಮಾಡಲು ಆರಂಭಿಸಿದೆ. 18 ತಿಂಗಳಲ್ಲಿ ಕಾಮಗಾರಿ ಮುಗಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದರು. ಆಗಲೇ ಮೊದಲ ಲಾಕ್‌ಡೌನ್ ಘೋಷಣೆಯಾಗಿ ಕೆಲಸ ಹಿಂದೆ ಬಿತ್ತು. ಈಗ ಮತ್ತೊಂದು ಲಾಕ್‌ಡೌನ್ ಇರುವುದರಿಂದ ಕಾಮಗಾರಿ ವೇಗ ತಗ್ಗಿದೆ. ಒಂದೂವರೆ ವರ್ಷದಲ್ಲಿ ಮುಗಿಯಬೇಕಾದ ಮನೆ ಎರಡೂವರೆ ಮೂರು ವರ್ಷದ ವರೆಗೂ ಎಳೆಯುವ ಲಕ್ಷಣವಿದೆ’ ಎನ್ನುತ್ತಾರೆ ರಾಜನಗರದಲ್ಲಿ ಮನೆ ನಿರ್ಮಿಸುತ್ತಿರುವ ಗಜಾನನ ಹಬೀಬ್‌.

’ನಮ್ಮ ಬಳಿ ಕಾರು ಅಥವಾ ಇನ್ಯಾವುದೇ ದೊಡ್ಡ ವಾಹನ ಇಲ್ಲ. ಇರುವ ದ್ವಿಚಕ್ರ ವಾಹನದಲ್ಲೇ ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ಬಿಡಬೇಕಾಗಿದೆ. ನಾಲ್ಕೈದು ಮಂದಿಯಷ್ಟೇ ಕೆಲಸ ಮಾಡಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಮೇಸ್ತ್ರಿ ದಶರಥ.

’ನಾಲ್ಕು ಕಡೆ ಕೆಲಸ ಒಪ್ಪಿಕೊಂಡಿದ್ದೆ. ಆದರೆ ಲಾಕ್‌ಡೌನ್ ಪರಿಣಾಮ ಕಾರ್ಮಿಕರ ಸಮಸ್ಯೆ ಎದುರಾದ ಕಾರಣ ಒಂದನ್ನು ಮಾತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮೇಸ್ತ್ರಿ ಎ.ಕೆ. ಹುಬ್ಬಳ್ಳಿ.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪಾಸ್‌ ಏನೋ ನೀಡಿದ್ದಾರೆ. ಆದರೆ, ಎಷ್ಟೋ ಬಾರಿ ಅದನ್ನು ತೋರಿಸುವ ಮೊದಲೇ ಒದೆ ಬಿದ್ದಿದೆ ಎನ್ನುತ್ತಾರೆ ಕಾರ್ಮಿಕ ಅಶೋಕ್.

ಮನೆ ನಿರ್ಮಾಣ ಮಾಡುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಹಲವು ತೊಂದರೆ ಎದುರಿಸಬೇಕಾಗಿದೆ. ಮರಳು ಸೇರಿದಂತೆ ಕಚ್ಚಾ ವಸ್ತುಗಳನ್ನು ಹೆಚ್ಚುವರಿ ಬೆಲೆ ನೀಡಿ ಖರೀದಿಸಲಾಗುತ್ತಿದೆ.

– ಎಚ್‌.ಎಲ್‌. ನದಾಫ್, ಶಕ್ತಿ ಕಾಲೊನಿ

150 ಚೀಲ ಸಿಮೆಂಟ್ ಅನ್ನು ತರಿಸಲಾಗಿತ್ತು, ಈಗ ಅದು ಖಾಲಿಯಾಗಿದ್ದು ಅನಿವಾರ್ಯವಾಗಿ ಕೆಲಸ ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಕಾಮಗಾರಿ ಬಹಳ ತಡವಾಗುತ್ತಿದೆ.

– ಗಜಾನನ ಹಬೀಬ್‌, ರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT