ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಗೋಡೆ ಬಿರುಕು: ಸ್ಥಳಾಂತರಕ್ಕೆ ಪಾಲಿಕೆ ನೋಟಿಸ್

‘ದುರಂತ ಕಟ್ಟಡ’ದ ವಿನ್ಯಾಸಗಾರ ವಿವೇಕ ಪವಾರ್ 10 ವರ್ಷದ ಹಿಂದೆ ನಿರ್ಮಿಸಿದ್ದ ಮನೆ
Last Updated 3 ಏಪ್ರಿಲ್ 2019, 1:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆ ಡುಪ್ಲೆಕ್ಸ್ ಮನೆ ಬಾಗಿಲ ಬಲ ಭಾಗದಲ್ಲಿ ಹೊರಕ್ಕೆ ಎದ್ದು ಕಾಣುವಂತೆ, ಕಿಟಕಿ ಮೂಲೆಯಿಂದ ನೆಲದವರೆಗೆ ಗೋಡೆ ಬಿರುಕು ಬಿಟ್ಟಿದೆ. ಒಳಭಾಗದ ಹಾಲ್‌ನ ಮೂಲೆ ಸೇರಿದಂತೆ, ಗೋಡೆಗಳಲ್ಲಿ ಅಲ್ಲಲ್ಲಿ ಕಾಣುವ ಬಿರುಕು, ಮಳೆ ಬಂದರೆ ನೀರು ತೊಟ್ಟಿಕ್ಕುವ ಚಾವಣಿ ಅಪಾಯದ ಮುನ್ಸೂಚನೆ ನೀಡುತ್ತಿವೆ.

ಧಾರವಾಡದ ಕುಮಾರೇಶ್ವರ ನಗರದಲ್ಲಿ ಇತ್ತೀಚೆಗೆ ಕುಸಿದ ಬಹುಮಹಡಿ ಕಟ್ಟಡದ ವಿನ್ಯಾಸ ಮಾಡಿದ್ದ ವಿವೇಕ ಪವಾರ್, ಹುಬ್ಬಳ್ಳಿಯ ಸಿಟಿ ಲೇಔಟ್‌ನಲ್ಲಿ ಹತ್ತು ವರ್ಷದ ಹಿಂದೆಯಷ್ಟೇ ವಿನ್ಯಾಸ ಮಾಡಿ, ನಿರ್ಮಿಸಿರುವ ‘ಮರಿಯಂ ಮಂಜಿಲ್’ ಮನೆಯ ಸ್ಥಿತಿ ಇದು.

ಅಮ್ಜದ್ ಇಬ್ರಾಹಿಂ ಶೇಕ್ ಎಂಬುವರಿಗೆ ಸೇರಿದ ಈ ಮನೆಗೆ ಸೋಮವಾರಷ್ಟೇ ಭೇಟಿ ನೀಡಿದ್ದ ಪಾಲಿಕೆಯ ಅಧಿಕಾರಿಗಳ ತಂಡ, ಮನೆ ಅಪಾಯದ ಅಂಚಿನಲ್ಲಿದೆ ಎಂದು ಗುರುತಿಸಿದೆ. ಅಲ್ಲದೆ, ಮಳೆಗಾಲದಲ್ಲಿ ಅನಾಹುತ ಸಂಭವಿಸುವುದಕ್ಕೂ ಮುಂಚೆ ಕುಟುಂಬ ಸಮೇತ ಬೇರೆಡೆಗೆ ಸ್ಥಳಾಂತರವಾಗುವಂತೆ ನೋಟಿಸ್ ಕೂಡ ನೀಡಿದೆ.

ಸದ್ಯ ಬಂಧನದಲ್ಲಿರುವ ಆರ್ಕಿಟೆಕ್ಟ್ ಎಂಜಿನಿಯರ್ ವಿವೇಕ ಪವಾರ್, 2007ರಲ್ಲಿ ಈ ಮನೆಯ ವಿನ್ಯಾಸದ ಜತೆಗೆ, ನಿರ್ಮಾಣದ ಹೊಣೆಯನ್ನು ವಹಿಸಿಕೊಂಡು 2009ರಲ್ಲಿ ಮಾಲೀಕ ಅಮ್ಜದ್ ಇಬ್ರಾಹಿಂ ಶೇಕ್ ಅವರಿಗೆ ಹಸ್ತಾಂತರಿಸಿದ್ದರು.

ನಿರ್ಮಾಣ ಹಂತದಲ್ಲೇ ಬಿರುಕು: ‘ಮನೆ ನಿರ್ಮಿಸುವಾಗ ಕೆಲವೆಡೆ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ಬಗ್ಗೆ ಪವಾರ್ ಅವರನ್ನು ಕೇಳಿದಾಗ, ಈ ಜಾಗದಲ್ಲಿ ಕಪ್ಪು ಮಣ್ಣಿರುವುದರಿಂದ ಹೀಗಾಗಿದೆ ಎಂದು ಸಮಜಾಯಿಷಿ ನೀಡಿದ್ದರು’ ಎಂದು ಮನೆ ಮಾಲೀಕ ಅಮ್ಜದ್ ಶೇಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗೃಹ ಪ್ರವೇಶವಾಗಿ ಎರಡೂವರೆ ವರ್ಷದ ಬಳಿಕ, ಟೈಲ್ಸ್ ಹಾಕಿರುವ ಮನೆಯಂಗಳದಲ್ಲಿ ಅಲ್ಲಲ್ಲಿ ಕುಸಿತು ಉಂಟಾ
ಯಿತು. ಹಾಲ್ ಮತ್ತು ಹೊರಭಾಗದಲ್ಲಿ ಗೋಡೆ ಬಿರುಕು ಬಿಟ್ಟಿತು. ಮಳೆ ಬಂದಾಗ ಚಾವಣಿಯಿಂದ ನೀರು ಜಿನುಗ
ತೊಡಗಿತು. ಆಗಲೂ ಪವಾರ್ ಅವರನ್ನು ಸಂಪರ್ಕಿಸಿದೆವು. ಅದಕ್ಕವರು, ಪಕ್ಕದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿರು
ವುದರಿಂದ ಹೀಗಾಗಿದೆ ಎಂದರು. ಆದರೆ, ಬೇರಾವ ಮನೆಗಳ ಗೋಡೆಗಳಲ್ಲೂ ಕಾಣಿಸಿಕೊಳ್ಳದ ಬಿರುಕು ನಮ್ಮನೆಯಲ್ಲೇ ಯಾಕೆ ಕಾಣಿಸಿಕೊಂಡಿದೆ ಎಂದು ಕೇಳಿದಾಗ, ಕರೆ ಕಟ್ ಮಾಡುತ್ತಿದ್ದರು’ ಎಂದು ಹೇಳಿದರು.

ಒಮ್ಮೆಯೂ ಬಂದಿಲ್ಲ: ‘ಇಷ್ಟೆಲ್ಲಾ ಸಮಸ್ಯೆಗಳನ್ನೂ ಹೇಳಿದರೂ ಒಮ್ಮೆಯೂ ಸ್ಥಳಕ್ಕೆ ಬಂದು ಪರಿಶೀಲಿಸದ ಪವಾರ್, ತಮ್ಮ ಸಹಾಯಕರನ್ನಷ್ಟೇ ಕಳುಹಿಸುತ್ತಿದ್ದರು. ಆದರೆ, ಸಮಸ್ಯೆ ಪರಿಹರಿಸಲು ಒಮ್ಮೆಯೂ ಮುಂದಾಗಲಿಲ್ಲ. ತೀವ್ರ ಒತ್ತಾಯ ಮಾಡಿದಾಗ, 2018ರಲ್ಲಿ ಒಮ್ಮೆ ಮನೆಗೆ ಬಂದು ಹೋದರು. ಬಳಿಕ, ನಾವು ಎಷ್ಟೇ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಅಮ್ಜದ್ ಅವರ ಪತ್ನಿ ಮುನವರ್ ಶೇಕ್ ಬೇಸರ ವ್ಯಕ್ತಪಡಿಸಿದರು.

‘ನಾವೇ ಸ್ಥಳೀಯ ಎಂಜಿನಿಯರೊಬ್ಬರ ಸಲಹೆ ಮೇರೆಗೆ ₹2 ಲಕ್ಷ ವೆಚ್ಚದಲ್ಲಿ ಬಿರುಕು ಗೋಡೆಗಳಿಗೆ ಪ್ಲಾಸ್ಟರ್ ಮಾಡಿಸಿ
ದೆವು. ಆದರೂ, ಮತ್ತೆ ಬಿರುಕು ಕಾಣಿಸಿಕೊಂಡಿದೆ. ಇದೀಗ ಪಾಲಿಕೆಯವರು ಮನೆ ಶಿಥಿಲಾವಸ್ಥೆಯಲ್ಲಿದ್ದು, ಬೇರೆಡೆಗೆ ಸ್ಥಳಾಂತರಗೊಳ್ಳಿ ಎಂದು ನೋಟಿಸ್ ಅಂಟಿಸಿ ಹೋಗಿದ್ದಾರೆ’ ಎಂದು ಕಣ್ಣೀರಿಟ್ಟರು.‌

ಕಾಲಂ ವಿಫಲ, ಬೆಂಡಾದ ಬಾರ್‌’

‘ಕ್ಯಾಂಟಿಲಿವರ್ ಸ್ಲ್ಯಾಬ್ ತೂಕದಿಂದಾಗಿ ಮನೆಯ ಒಳಭಾಗದ ಕಾಲಂ ವಿಫಲಗೊಂಡಿದೆ. ಜತೆಗೆ, ಸ್ಲ್ಯಾಬ್ ಸಿಂಕ್ ಆಗಿರುವುದರಿಂದ ಬಾರ್ ಬೆಂಡ್‌ ಆಗಿದೆ. ಅಡಿಪಾಯ ಹಾಕಿದ ಬಳಿಕ, ಮಣ್ಣಿನ ಕಾಂಪ್ಯಾಕ್ಷನ್ (ಮಣ್ಣು ಗಟ್ಟಿಯಾಗಿ ನೆಲಕ್ಕೆ ಹೊಂದಿಕೊಳ್ಳುವುದು) ಸರಿಯಾದ ರೀತಿಯಲ್ಲಿ ಆಗಿಲ್ಲ’ ಎಂದು ಮನೆಯನ್ನು ಪರಿಶೀಲಿಸಿರುವ ಆರ್ಕಿಟೆಕ್ಟ್‌ ಮತ್ತು ಸ್ಟ್ರಕ್ಚರಲ್‌ ಎಂಜಿನಿಯರ್‌ ಶಿವಪ್ರಸಾದ್‌ ಲಕಮನಹಳ್ಳಿ ಹೇಳಿದರು.

‘ಮನೆಯ ಸ್ಟ್ರಕ್ಚರಲ್ ಡಿಸೈನ್ ಸಿಕ್ಕರೆ ಮತ್ತಷ್ಟು ವಿವರ ಸಿಗಲಿದೆ. ಆದರೆ, ಮಾಲೀಕರ ಬಳಿ ಮನೆಯ ನಕ್ಷೆಯೇ ಇಲ್ಲ. ಈ ಬಗ್ಗೆ ವಿಚಾರಿಸಿದಾಗ, ತರಿಸಿಕೊಡುವುದಾಗಿ ಹೇಳಿದರು’ ಎಂದು ತಿಳಿಸಿದರು.

ಪವಾರ್ ವಿನ್ಯಾಸದ ಮನೆ ಪರಿಶೀಲನೆ

ಕಟ್ಟಡ ಕುಸಿತ ಘಟನೆಯ ಬೆನ್ನಲ್ಲೇ, ಆರ್ಕಿಟೆಕ್ಟ್ ಎಂಜಿನಿಯರ್ ವಿವೇಕ ಪವಾರ್ ಅವಳಿನಗರದಲ್ಲಿ ವಿನ್ಯಾಸಗೊಳಿಸಿರುವ ಅಂದಾಜು 15 ಕಟ್ಟಡಗಳನ್ನು ಪಾಲಿಕೆಯ ಎಂಜಿನಿಯರ್‌ಗಳ ತಂಡ ಪತ್ತೆಹಚ್ಚಿ, ಅವುಗಳ ಸ್ಥಿರತೆಯನ್ನು ಪರಿಶೀಲಿಸಿದೆ.

‘ಈ ಕಟ್ಟಡಗಳ ಪೈಕಿ, ವಲಯ –6ರಲ್ಲಿ ಪವಾರ್ ವಿನ್ಯಾಸಗೊಳಿಸಿ ನಿರ್ಮಿಸಿರುವ ಮನೆಯಲ್ಲಿ ಸ್ಥಿರತೆಯ ದೋಷ ಕಂಡುಬಂದಿದ್ದರಿಂದ, ಮಳೆಗಾಲದಲ್ಲಿ ಬೇರೆಡೆಗೆ ಸ್ಥಳಾಂತರವಾಗುವಂತೆ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ’ ಎಂದು ಪಾಲಿಕೆಯ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ಬಿ.ಕೆ. ಲಮಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪವಾರ್‌ ವಿನ್ಯಾಸ ಮಾಡಿರುವ ಕಟ್ಟಡಗಳ ಸಂಪೂರ್ಣ ಮಾಹಿತಿ ಇನ್ನೆರಡು ದಿನದಲ್ಲಿ ಕೈ ಸೇರಲಿದೆ. ಬಳಿಕ, ಅವುಗಳ ಸ್ಥಿರತೆಯನ್ನು ಎಂಜಿನಿಯರ್‌ಗಳ ತಂಡ ಪರಿಶೀಲಿಸಲಿದೆ. ಇದರ ಜತೆಗೆ, ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳ ಮಾಲೀಕರಿಗೆ ಏ.14ರೊಳಗೆ ಸ್ಥಿರತೆ ಪ್ರಮಾಣಪತ್ರ ಒದಗಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಜೈಲು ಸೇರಿದವರು

ಧಾರವಾಡ ಕಟ್ಟಡ ದುರಂತದ ಘಟನೆಗೆ ಸಂಬಂಧಿಸಿದಂತೆ ಆರ್ಕಿಟೆಕ್ಟ್ ಎಂಜಿನಿಯರ್ ವಿವೇಕ ಪವರ್, ಕಟ್ಟಡದ ಪಾಲುದಾರರಾದ ಗಂಗಣ್ಣ ಶಿಂತ್ರಿ, ಮಹಾಬಳೇಶ್ವರ ಪುರದನಗುಡಿ, ರವಿ ಸಬರದ ಹಾಗೂ ಬಸವರಾಜ ನಿಗದಿ ಅವರು ಸದ್ಯ ಜೈಲಿನಲ್ಲಿದ್ದಾರೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಆದರೆ, ಈಗಲೇ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗದು’ ಎಂದು ತನಿಖಾಧಿಕಾರಿ ಡಿಸಿಪಿ ಡಿ.ಎಲ್‌.ನಾಗೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT