ಹುಬ್ಬಳ್ಳಿ: ಬದುವಿನ ಜಾಗವನ್ನು ಸದ್ಬಳಕೆ ಮಾಡಿಕೊಂಡು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದ ರೈತ ಸುಬ್ಬಣ್ಣ ಹನುಮಂತಪ್ಪ ಸುಬ್ಬಣ್ಣವರ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಪಿಯುಸಿ ಓದಿರುವ 65 ವರ್ಷದ ಸುಬ್ಬಣ್ಣ ಅವರದ್ದು ಮೂಲತಃ ಕೃಷಿ ಕುಟುಂಬ. ತಮ್ಮ 2 ಎಕರೆ 27 ಗುಂಟೆ ಜಮೀನಿನಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ತೋಟಗಾರಿಕೆ ಹಾಗೂ ಅರಣ್ಯ ಕೃಷಿಗೂ ಒತ್ತು ನೀಡಿದ್ದಾರೆ.

10 ತೆಂಗು (ಜವಾರಿ ತಳಿ), 20 ಅಡಿಕೆ (ಸಾಗರ ತಳಿ), 100 ಬಾಳೆ (ಏಲಕ್ಕಿ), 6 ಮಾವು (ಅಲ್ಫಾನ್ಸೊ), 4 ಪೇರಲ (ಥೈವಾನ್), 4 ಚಿಕ್ಕು, 4 ದಾಲ್ಚಿನಿ ಗಿಡಗಳನ್ನು ಜಮೀನಿನ 2 ಕಡೆಯ ಬದುಗಳಲ್ಲಿ ಬೆಳೆದಿದ್ದು, ಉಳಿದ 2 ಕಡೆಯ ಬದುವಿನಲ್ಲಿ 60 ಸಾಗವಾನಿ ಗಿಡಗಳನ್ನು ಹಾಗೂ ತೊಗರಿ, ಅರಿಸಿನ ಬೆಳೆದಿದ್ದಾರೆ. ಜಮೀನಿನಲ್ಲಿ 5 ಟನ್ ಕಬ್ಬಿನ (ಸಂಕೇಶ್ವರ ತಳಿ) ಬೀಜ ಹಾಕಿದ್ದಾರೆ. ಎಕರೆಗೆ 50 ಟನ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ಮಣ್ಣಿನ ಸವಕಳಿ ತಡೆ: ‘ಜಮೀನಿನ ಉದ್ದದಷ್ಟು ಉದ್ದ, 4 ಅಡಿ ಅಗಲ ಹಾಗೂ ಮೂರರಿಂದ 4 ಅಡಿ ಆಳದ ಬದುಗಳನ್ನು ನಿರ್ಮಿಸಿಕೊಂಡಿದ್ದೇವೆ. ಜಮೀನಿಗೆ ನೀರು ಹಾಯಿಸಿದಾಗ ಹೆಚ್ಚುವರಿ ನೀರು ಹರಿದು ಹೋಗದೆ ಬದುಗಳಲ್ಲಿ ಶೇಖರಣೆಗೊಳ್ಳುತ್ತದೆ. ಇದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು ಜೊತೆಗೆ ಭೂಮಿಯಲ್ಲಿ ತೇವಾಂಶವನ್ನು ಸಹ ಕಾಪಾಡಬಹುದು. ಹಾಗಾಗಿ ಬದು ಆಧಾರಿತ ಕೃಷಿ ಪದ್ಧತಿಗೆ ಒತ್ತು ನೀಡಿದ್ದೇವೆ’ ಎಂದು ಪ್ರಗತಿಪರ ರೈತ ಸುಬ್ಬಣ್ಣ ಹನುಮಂತಪ್ಪ ಸುಬ್ಬಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ನೀರು ಸದ್ಬಳಕೆಗೆ ಒತ್ತು: ‘ಕೃಷಿ ಇಲಾಖೆಯ ಸಹಾಯಧನದಲ್ಲಿ 20 ಅಡಿ ಅಗಲ, 20 ಅಡಿ ಉದ್ದ ಹಾಗೂ 10 ಅಡಿ ಆಳದ ಕೃಷಿಹೊಂಡ ನಿರ್ಮಿಸಿಕೊಂಡಿದ್ದೇವೆ. ಇದರಿಂದ ಮಳೆಗಾಲದಲ್ಲಿ ಮಳೆಯ ನೀರು ಕೃಷಿ ಹೊಂಡಕ್ಕೆ ಬಂದು ಸೇರುತ್ತದೆ’ ಎಂದರು.

‘3 ವರ್ಷದ ಹಿಂದೆ ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಯಿಸಿಕೊಂಡಿದ್ದು, ಮೂರುವರೆ ಇಂಚು ನೀರು ಸಿಕ್ಕಿದೆ. ಫಲ ಕೃಷಿಯಿಂದ ವರ್ಷಕ್ಕೆ ಒಂದು ಲಕ್ಷ ರೂಪಾಯಿವರೆಗೂ ಆದಾಯ ಪಡೆಯಬಹುದು. ಜೊತೆಗೆ ನಮ್ಮಲ್ಲಿದ್ದ 28– 30 ವರ್ಷದ ಸಾಗುವಾನಿ ಮರಗಳಿಂದ ₹12 ಲಕ್ಷ ಪಡೆದಿರುವೆ’ ಎಂದು ಮಾಹಿತಿ ನೀಡಿದರು.

ಸಾವಯವ ಗೊಬ್ಬರ ಬಳಕೆ: ‘ಮನೆಯಲ್ಲಿ ಒಂದು ಹಳ್ಳಿಕಾರ್ ತಳಿಯ ಹಸು ಇದ್ದು, ದಿನಕ್ಕೆ ನಾಲ್ಕು ಲೀಟರ್ ಹಾಲು ಸಿಗುತ್ತದೆ. ಸಾರಜನಕ, ಪೊಟ್ಯಾಷಿಯಂ, ರಂಜಕ ಸಹಿತ ಗೊಬ್ಬರ ಹಾಗೂ ಎರೆಹುಳು ಗೊಬ್ಬರವನ್ನು ಜಮೀನಿಗೆ ಬಳಸುತ್ತೇವೆ’ ಎಂದು ಹೇಳಿದರು.

ಗೊಬ್ಬರವಾಗಿ ಕಬ್ಬಿನ ರವದಿ ಬಳಕೆ

‘ಸಾಮಾನ್ಯವಾಗಿ ಬಹುತೇಕ ಕಬ್ಬು ಬೆಳೆಗಾರರು ಕಬ್ಬಿನ ರವದಿಯನ್ನು ಸುಟ್ಟು ಹಾಕುತ್ತಾರೆ. ಆದರೆ ನಾವು ಜಮೀನಿನಲ್ಲಿಯೇ ಅದನ್ನು ಕ್ರಷರ್ ಮೂಲಕ ತುಂಡು ಮಾಡಿ ನೀರು ಹಾಯಿಸುತ್ತೇವೆ. ಇದರಿಂದ ಜಮೀನಿನಲ್ಲಿ ತೇವಾಂಶ ಉಳಿಯುತ್ತದೆ. ಜತೆಗೆ ಎರೆಹುಳುಗಳನ್ನು ಇಲ್ಲಿ ಬಿಡುವುದರಿಂದ ಅದು ಮಣ್ಣಿನೊಂದಿಗೆ ಬೆರೆತು ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ರೈತರು ರವದಿಯನ್ನು ಗೊಬ್ಬರವಾಗಿಸುವ ಕ್ರಮಕ್ಕೆ ಮುಂದಾಗಿ ಪರಿಸರವನ್ನು ಕಾಪಾಡಬೇಕು’ ಎಂದು ರೈತ ಸುಬ್ಬಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.