ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಡೈರಿ: ಹಾಪ್ಚಾ, ಕಟ್‌ ದ್ವಾಸಿ...

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 19 ನವೆಂಬರ್ 2019, 8:31 IST
ಅಕ್ಷರ ಗಾತ್ರ

ಹಾಪ್ಚಾ.. ಹಾಪ್ಚಾ... ಹಾಪ್ಚಾ.. ಅಂತ ಆ ಹುಡುಗ ಕೂಗಿ ಹೇಳಿದ್ರ ನನ್ನ ಮಕ್ಕಳು ಅದೇನೋ ಪೀಟ್ಜಾದ್ಹಂಗ ಮಸ್ತ್‌ ಇರುವ ಖಾದ್ಯ ಅಂದ್ಕೊಂಡಿದ್ರನಸ್ತದ... ಹುಬ್ಬಳ್ಳಿಗೆ ಬಂದ ಹೊಸತಾಗ, ಗ್ಯಾಸಿನ ವ್ಯವಸ್ಥೆ ಆಗಿರಲಿಲ್ಲ. ಅವಾಗಿನ ಕಥಿ ಇದು.

ಒಂದಿನ ನನ್ಮಕ್ಕಳು.. ನಮಗೂ ಹಾಪ್ಚಾ ಅಂದುವು...

ಚಾ... ಕುಡೀತೇರಿ..
ಇಲ್ಲಾ.. ಹಾಪ್ಚಾ ಬೇಕು..
ಅದೇ ಕೇಳಾತೇನಿ ನಿಮಗ, ಚಾ ಕುಡೀತೇರಿ..
ಇಲ್ಲಮ್ಮ... ಹಾಪ್ಚಾನೇ ಬೇಕು.
ಅಯ್ಯ... ಹಾಪ್ಚಾ ಅಂದ್ರೇನು?
ನಮಗೇನ ಗೊತ್ತು? ಅದು ಬೇಕಾಗೇದ.. ಟೇಸ್ಟ್‌ ನೋಡಾಕ..
ಹುಚ್‌ಖೋಡಿ... ವೈದು.. ಹಾಪ್ಚಾ... ಅಂದ್ರ ಹಾಫ್‌ ಚಾಲೇ..
ಅಂದಾಗ ಎರಡು ಮುಖಾಮುಖಾ ನೋಡಿ ನಕ್ಕು. ಮುಂದಿನ ಕಥಿ ಕಟ್‌ ದೋಸಾ...
ಅದೂ ಏನೋ.. ಈ ದಾವಣಗೆರೆ ಮಸಾಲೆ ದೋಸೆ, ಮೈಸೂರ್‌ ಮಸಾಲಾ, ರವಾ ಮಸಾಲಾ ಇದ್ಹಂಗ ಇದೊಂದು ನಮೂನಿ ಕಟ್‌ ದೋಸಾ ಅಂತ ಅಂದ್ಕೊಂಡಿದ್ದುವು. ಈ ಸಲ ನಾನು ಏನೂ ಹೇಳಲಿಲ್ಲ.. ಅವಕ್ಕೇ ಗೊತ್ತಾಗಲಿ ಅಂತ ಸುಮ್ನಿದ್ದೆ. ಕಟ್‌ ದೋಸಾ ಹೇಳಿ ಕುಂತುವು. ಇಬ್ಬರಿಗೂ ಪ್ಲೇಟ್‌ನಾಗ ಅರ್ಧರ್ಧ ದೋಸೆ ಬಂದಾಗಲೇ ಗೊತ್ತಾಗಿದ್ದು ಕಟ್‌ದೋಸಾ ಹಕೀಕತ್ತು..

ಹಿಂಗ ತಿಂಡಿಯ ಬಗ್ಗೆ ಹೇಳೂಮುಂದ ನನಗ ಯಾವಾಗಲೂ ನೆನಪಾಗೂದು.. ನಾವು ಸಣ್ಣೋರಿದ್ದಾಗ ನಮ್ಮನಿಗೆ ಒಬ್ಬ ಡ್ರೈವರ್‌ ಬರ್ತಿದ್ದ. ರಾಜು ಅಥವಾ ಸಂಜು ಹಿಂಗೇನೋ ಹೆಸರಿತ್ತು. ಅಂವಾ ದಿನ್ನಾ ಮುಂಜೇನೆ ಸುಸ್ಲಾ ತಿಂತಿದ್ದ. (ಮಂಡಕ್ಕಿ ಒಗ್ಗರಣಿಗೆ ಬೀದರ್‌ನಾಗ ಸುಶೀಲಾ ಅಂತಾರ, ಕಲಬುರ್ಗಿಯೊಳಗ ಸುಸುಲಾ ಅಂತಾರ, ವಿಜಯಪುರದಾಗ ಸೂಸ್ಲಾ ಅಂತಾರ).
ಅಂವನ್ನ ಕರಕೊಂಡು ರಾಯಚೂರಿಗೆ ಹೋಗಿದ್ವಿ. ಮನ್ಯಾಗ ಸುಸ್ಲಾ ಮಾಡಿದ್ರು.. ‘ನಾ ದಿನ್ನಾ ಅದೇ ತಿಂತೆ.. ಹೊರಗ ಹೊಯ್ತೆ.. ಹೊರಗ ಹೋಗಿ ಯಾನ್‌ಭಿ ನಾಷ್ಟಾ ಮಾಡಿ ಬರ್ತೆ’ (ನಾನು ದಿನಾಲೂ ಅದನ್ನೇ ತಿನ್ನೂದು, ಹೊರಗ ಹೋಗ್ತೀನಿ, ಏನರೆ ತಿಂದ್ಕೊಂಡು ಬರ್ತೀನಿ) ಅಂತ್ಹೇಳೆ ಹೋದ.

ಬಂದ ಮ್ಯಾಲೆ ಏನಪಾ ಇವೊತ್ತಿನ ‘ಪೇಸಲ್‌’ ಅಂತ ಕೇಳಿದ್ವಿ... ‘ಅವನೌನ... ಈ ಊರಾಗ ಏನ್ರಿ.. ಎಲ್ಲಿ ಹೋದುರ್‌ಭಿ ಒಗ್ಗರ್ಣಿ ಒಗ್ಗರ್ಣಿ, ಪೂರಿ ಅದ ಅಂದೂರು.. ಅಕ್ಕೋಗಾ.. ಎಲ್ಲಾ ಹೋಟೆಲ್‌ನಾಗ ಇದೇ ಅದ ಅಂದುರ್‌ ರಾಯಚೂರು ಪೇಸಲ್‌ ಅಂತ ಅದೇ ಹೇಳ್ದರಿ... ಅಕ್ಕೋರೆ... ಅದೇನದ... ಅದು ಭಿ ಸುಸುಲಾನೇ ತಂದಿಕ್ಕಿದ... ಮತ್ತ ಯಾನ್‌ ಮಾಡ್ಲಿ.. ನಿನ್ನ ನಶೀಬಿನಾಗ ಇದೇ ಇದ್ದುರ್‌, ಇದೇ ತಿನು ಪಾಂಡು ಅಂತ ಮತ್ತ ಸುಸುಲಾನೇ ತಿಂದು ಬಂದರಿ’ (ಹೋದಕಡೆಯೆಲ್ಲಾ ಒಗ್ಗರ್ಣಿ ಒಗ್ಗರ್ಣಿ ಅಂತ ಹೇಳ್ತಿದ್ರು. ಇದೇನೋ ರಾಯಚೂರಿನ ವಿಶೇಷ ಇರಬೇಕು ಅಂತ ಆರ್ಡರ್‌ ಮಾಡಿದೆ... ಮತ್ತನೂ ಟೇಬಲ್‌ ಮ್ಯಾಲೆ ಸುಸ್ಲಾನೇ ಬಂತು. ‘ಪಾಂಡು ನಿನ್ನ ನಶೀಬಿನಾಗ ಸುಸ್ಲಾನೇ ಅದ’ ಅಂತ ಅದನ್ನೇ ತಿಂದು ಬಂದೆ). ಈ ಹಾಪ್ಚಾ ಪ್ರಸಂಗದಿಂದ ಒಗ್ಗರ್ಣಿ, ಸೂಸ್ಲಾ ನೆನಪಾಯ್ತು. ಅಂವಾ ಏನರೆ ಇಲ್ಲಿ ಬಂದು ಗಿರ್ಮಿಟ್‌ ಅಂದಿದ್ರ.. ಅಂತ ನಗು ಬಂತು.

ಇಲ್ಲಿ ಸಿಂಗಲ್‌ ಪೂರಿ ಯಾವತ್ತೂ ಸಿಂಗಲ್‌ ಇರೂದಿಲ್ರಿ.. ಅದೇ ಮಜಾ. ಈ ಊರಾಗ ನೀವು ಒಮ್ಮೆ ಪೂರಿ ತಿನ್ನಾಕ ಬೇಕು. ಇವು ಪೂರಿಯಲ್ಲ ಪೋರಾ.. ಇವು ಪೂರಾ ಅನ್ನೂವಷ್ಟು ದೊಡ್ಡುವು. ಇಂಥಾ ಪೂರಾಪೂರಿ ಸಿಂಗಲ್‌ ಕೊಡ್ರಿ ಅಂದಾಗ ಒಂದೇ ಕೊಡ್ತಾರ ಅಂತ ಅಂದ್ಕೊಂಡಿದ್ದೆ. ಆದ್ರ ಎರಡು ತಂದಿಟ್ರು. ಪೂರಿ ಪ್ಲೇಟಿಗೆ ಮೂರಿದ್ರ, ಸಿಂಗಲ್‌ ಅಂದ್ರ ಎರಡು ಕೊಡ್ತಾರ. ಎರಡು ಪೂರಿ ಇದ್ದಾಗಷ್ಟೆ ಸಿಂಗಲ್‌ ಅಂದ್ರ ಸಿಂಗಲ್‌ ಕೊಡ್ತಾರ..
ಯಾಕಪಾ ಹಿಂಗ.. ಅಂದ್ರ ಸಿಂಗಲ್‌ ಅಂದ್ರ ಒಂದೇ ಅಲ್ರಿ ಅಕ್ಕಾರ.. ನಮ್ಮ ಕೂಡ ನಾವಷ್ಟೇ ಇರೂದಿಲ್ಲಲ್ಲ.. ಹಂಗ ಡಬಲ್‌ ಅಂದ್ರೂ ಸಿಂಗಲ್ಲೇ.. ಸಿಂಗಲ್ಲ ಅಂದ್ರೂ ಸಿಂಗಲ್ಲಲ್ಲ.. ಅಂತ ವೇದಾಂತ ಮಾತಾಡಿದ್ರು. ನಾನೂ ಗಲ್ಲಗಲ್ಲ ಬಡ್ಕೊಂತ ಹೊರಬಂದೆ... ಈಗ ನನ್ನ ಆಕಾರ ನೋಡಿದ್ರ, ಸಿಂಗಲ್ಲೋ ಡಬಲ್ಲೋ ಅನ್ನೂ ಜಿಜ್ಞಾಸೆ ಕೊನಿಯಾಗಾಕ ಸಾಧ್ಯ ಇರಲಿಲ್ಲ.. ಹಂಗಾಗಿ.. ಸುಮ್ನ ಹಾಪ್ಚಾ ಕುಡದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT