ಹುಬ್ಬಳ್ಳಿ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ರಾಜ್ಯಪಾಲರಿಂದ ಅನುಮೋದನೆ ಸಿಕ್ಕ ಹಿನ್ನೆಲೆಯಲ್ಲಿ, ‘ಬೃಹತ್ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ’ ರಚನೆಗೆ ಕಳೆದ ಸಾಮಾನ್ಯ ಸಭೆಯಲ್ಲಿ ಅಂಗೀಕಾರವಾಗಿದ್ದ ಠರಾವನ್ನು ಕೈಬಿಡಲಾಯಿತು.

ಇಲ್ಲಿ ಶುಕ್ರವಾರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಜ್ಯೋತಿ ಪಾಟೀಲ ಅವರು, ‘ಪ್ರತ್ಯೇಕ ಪಾಲಿಕೆ ರಚನೆಗೆ ರಾಜ್ಯಪಾಲರು ಅಂಕಿತ ಹಾಕಿರುವುದರಿಂದ ಠರಾವು ಅಸಿಂಧುವಾಗಲಿದೆ’ ಎಂದು ಹೇಳಿದರು.

ಪ್ರತಿಪಕ್ಷದ ಸದಸ್ಯರು ಹಿಂದಿನ ಸಾಮಾನ್ಯ ಸಭೆಯ ಠರಾವು ಕೈಬಿಡುವಂತೆ ಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಗೊಂದಲ ಏರ್ಪಟ್ಟಿತ್ತು. ಆಗ ಮೇಯರ್ ಸಭೆಯನ್ನು ಮುಂದೂಡಿ, ಪುನಃ ಆರಂಭಿಸಿದರು. ಚರ್ಚೆಯ ನಂತರ ಹಿಂದಿನ ಠರಾವು ಅಸಿಂಧುಗೊಳಿಸಿ, ‘ಪ್ರತ್ಯೇಕ ಮಹಾನಗರ ಪಾಲಿಕೆಗೆ ರಾಜ್ಯಪಾಲರು ಅನುಮೋದನೆ ನೀಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಸರ್ಕಾರದ ಸೂಚನೆಯಂತೆ ಆಯುಕ್ತರು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ಇದಕ್ಕೂ ಪೂರ್ವ ಸದನದಲ್ಲಿ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಅವರು, ‘ಬೃಹತ್ ಹು–ಧಾ ಮಹಾನಗರ ಪಾಲಿಕೆ ರಚನೆಯ ಠರಾವು’ ಸಂಬಂಧಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಹಿಂದಿನ ಸಾಮಾನ್ಯ ಸಭೆಯಲ್ಲಿ ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಾರದ್ದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ಠರಾವಿನಲ್ಲಿ ಅದನ್ನು ಉಲ್ಲೇಖಿಸಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಹನೆ ಕಳೆದುಕೊಂಡ ಮೇಯರ್ ಸದಸ್ಯರನ್ನು ಹೊರಹಾಕುವುದಾಗಿ ಎಚ್ಚರಿಸಿದರು. ಆದರೂ, ಪ್ರತಿಪಕ್ಷದ ಸದಸ್ಯರು, ‘ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಆಗಬೇಕು’, ‘ನ್ಯಾಯ ಬೇಕು’ ಎಂದು ಘೋಷಣೆ ಕೂಗುತ್ತ ಸಭೆ ಬಹಿಷ್ಕರಿಸಿದರು. ಮೇಯರ್ ಸಭೆಯನ್ನು ಹತ್ತು ನಿಮಿಷ ಮುಂದೂಡಿ, ಪುನಃ ಆರಂಭಿಸಿದಾಗ ಎಐಎಂಐಎಂ ಮೂವರು ಹಾಗೂ ಬಿಜೆಪಿ ಸದಸ್ಯರು ಮಾತ್ರ ಇದ್ದರು.

‘ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ರಾಜ್ಯಪಾಲರು ಕೈಗೊಂಡಿರುವ ನಿರ್ಣಯಕ್ಕೆ ಅಭಿನಂದನೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೆಲವು ಮುಖಂಡರು ಕರೆದೊಯ್ದು, ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ನಮ್ಮ ಠರಾವು ಕೈ ಬಿಟ್ಟು ರಾಜ್ಯಪಾಲರ ನಿರ್ಣಯ ಸ್ವಾಗತಿಸಬೇಕು’ ಎಂದು ಸಭಾನಾಯಕ ಈರೇಶ ಅಂಚಟಗೇರಿ ಹೇಳಿದರು.

ತಿಪ್ಪಣ್ಣ ಅಸಮಾಧಾನ: ‘ಯಾವುದು ಸರಿ, ಯಾವುದು ತಪ್ಪು ಎಂದು ಯಾರೂ ಅರ್ಥೈಸಿಕೊಳ್ಳುತ್ತಿಲ್ಲ. ಹುಬ್ಬಳ್ಳಿ ಮತ್ತು ಧಾರವಾಡ ಈ ಎರಡೂ ನಗರಕ್ಕೆ ಅವಿನಾಭಾವ ಸಂಬಂಧವಿದ್ದು, ನೋವಿನಿಂದ ಪ್ರತ್ಯೇಕತೆಯ ನಿರ್ಣಯಕ್ಕೆ ಅನುಮತಿ ಕೊಟ್ಟಿದ್ದೇವೆ. ಆದರೆ, ಇದು ರಾಜಕೀಕರಣವಾಗಿದ್ದು ದುಃಖದ ಸಂಗತಿ. ಕೇಂದ್ರ ಸರ್ಕಾರದ 16ನೇ ಹಣಕಾಸಿನ ವ್ಯವಸ್ಥೆಯಲ್ಲಿ ನಗರಗಳ ಮೂಲಸೌಲಭ್ಯಕ್ಕೆ ₹53 ಸಾವಿರ ಕೋಟಿ ಅನುದಾನ ನೀಡಲು ಮುಂದಾಗಿದೆ. ನಮಗೆ ಕನಿಷ್ಠ ₹5 ಸಾವಿರ ಕೋಟಿ ಬರುತ್ತಿತ್ತು, ಅದೀಗ ಕೈ ತಪ್ಪುತ್ತಿದೆ’ ಎಂದರು.

‘ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ನಿರ್ಧರಿಸಿ, ನಮ್ಮ ಮಹಾನಗರ ಪಾಲಿಕೆಯನ್ನು ಪ್ರತ್ಯೇಕ ಮಾಡಲು ಹೊರಟಿರುವುದು ರಾಜಕೀಯ ಷಡ್ಯಂತ್ರವಾಗಿದೆ. ಧಾರವಾಡ ನಗರದಲ್ಲಿ 2.71 ಲಕ್ಷ ಜನಸಂಖ್ಯೆ ಇರುವುದರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಸಾಧ್ಯವಿಲ್ಲ ಎಂದು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಹೋಗಿದೆ. ಜನರ ಭಾವನೆಗೆ ಧಕ್ಕೆಯಾಗುತ್ತದೆ ಎಂದು ರಾಜ್ಯಪಾಲರು ಪ್ರತ್ಯೇಕ ಮಹಾನಗರ ಪಾಲಿಕೆಗೆ ನಿರ್ಣಯ ಕೈಗೊಂಡಿದ್ದಾರೆ. ಪ್ರತ್ಯೇಕ ಮಹಾನಗರ ಪಾಲಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಕಾಂಗ್ರೆಸ್ ನಾಯಕರಾಗಲಿ ಸರ್ಕಾರವನ್ನು ಒತ್ತಾಯಿಸಿದ್ದರೆ? ಜನರು ಪ್ರತಿಭಟನೆ ನಡೆಸಿದಾಗ ಅವರಿಗೆ ಬಿಸಿ ಹತ್ತಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮಾಣ ವಚನ ಸ್ವೀಕಾರ, ವಾಗ್ವಾದ: ನೂತನವಾಗಿ ನಾಮನಿರ್ದೇಶನಗೊಂಡ ನಾಲ್ವರು ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ಕುರಿತು ಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು.

‘ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದರಿಂದ, ಅವರ ಅಧೀನದಲ್ಲಿರುವ ಎಲ್ಲ ಆದೇಶಗಳು ಅಸಿಂಧುವಾಗುತ್ತವೆ. ಈ ಕುರಿತು ಪರಿಶೀಲಿಸಿ ಪ್ರಮಾಣ ವಚನದ ನಿರ್ಧಾರ ಕೈಗೊಳ್ಳಿ’ ಎಂದು ಸದಸ್ಯ ತಿಪ್ಪಣ್ಣ ಮಜ್ಜಗಿ ಹೇಳಿದರು.

‘ಸಿಎಂ ರಾಜೀನಾಮೆ ನೀಡುವ ಒಂದು ತಿಂಗಳು ಮೊದಲೇ ನಾಮನಿರ್ದೇಶಿತರನ್ನು ನೇಮಕ ಮಾಡಲಾಗಿದೆ. ಪ್ರಮಾಣ ವಚನ ಬೋಧಿಸಲೇಬೇಕು’ ಎಂದು ಪ್ರತಿಪಕ್ಷದ ಸುಧಾ ಮಣಿಕುಂಟ್ಲ, ಆರೀಫ್ ಭದ್ರಾಪುರ ಪಟ್ಟಹಿಡಿದರು.

ಎರಡೂ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವಿಪರೀತಕ್ಕೆ ತಲುಪಿದಾಗ ತಿಪ್ಪಣ್ಣ ಮಜ್ಜಗಿ, ‘ಪ್ರಮಾಣ ವಚನ ಪಡೆಯಲಿ, ಮುಂದೇನಾಗುತ್ತದೆ ನೋಡೋಣ’ ಎಂದರು. ಅದಕ್ಕೆ ಆರೀಫ್ ಭದ್ರಾಪುರ ‘ಸವಾಲು ಹಾಕುತ್ತೀರ?’ ಎಂದು ಪ್ರಶ್ನಿಸಿದರು. ಮೇಯರ್ ಪ್ರಮಾಣ ವಚನ ಬೋಧಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-24-1419956156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.