ಹುಬ್ಬಳ್ಳಿ | ಈರೇಶ ಅಂಚಟಗೇರಿ ಮೇಯರ್; ಉಮಾ ಉಪಮೇಯರ್?

ಹುಬ್ಬಳ್ಳಿ: ಫಲಿತಾಂಶ ಬಂದು ಒಂಬತ್ತು ತಿಂಗಳ ಬಳಿಕ 21ನೇ ಅವಧಿಯ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು ನಡೆಯಲಿದ್ದು, ಈರೇಶ ಆಂಚಟಗೇರಿ ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಕೇಂದ್ರಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ ನೇತೃತ್ವದಲ್ಲಿ ಇಂದು ನಗರದ ಖಾಸಗಿ ಹೋಟೆಲ್'ನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ವೀರೇಶ ಅಂಚಟಗೇರಿ ಹೆಸರು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿರುವುದರಿಂದ ಆ ಪಕ್ಷದವರಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಹೀಗಾಗಿ ಬಿಜೆಪಿಯಲ್ಲಿ ಶುಕ್ರವಾರ ತಡರಾತ್ರಿ ತನಕವೂ ಚುರುಕಿನ ಚಟುವಟಿಕೆ ನಡೆದಿದ್ದವು. ಧಾರವಾಡದ ವೀರೇಶ ಅಂಚಟಗೇರಿ ಮತ್ತು ವಿಜಯಾನಂದ ಶೆಟ್ಟಿ ಮತ್ತು ವೀರಣ್ಣ ಸವಡಿ ನಡುವೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಪಾಲಿಕೆ ಸದಸ್ಯರ ವೈಯಕ್ತಿಕ ಅಭಿಪ್ರಾಯ ಹಾಗೂ ಪಕ್ಷದ ಮುಖಂಡ ನಿರ್ಧಾರದ ಮೇಲೆ ಅಂಚಟಗೇರಿ ಹೆಸರು ಅಂತಿಮಗೊಳಿಸಲಾಗಿದೆ. ಹಾಗೂ ಅದೇ ರೀತಿ ಉಪಮೇಯರ್ ಸ್ಥಾನಕ್ಕೆ ಹುಬ್ಬಳ್ಳಿಯ ಉಮಾ ಮುಕುಂದ ಅವರ ಹೆಸರನ್ನು ಅಂತಿಮ ಮಾಡಲಾಗಿದೆ ಎನ್ನಲಾಗಿದೆ.
ಬಹುಮತದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಅಂತಿಮ ಹಂತದ ಸರ್ಕಸ್ ನಡೆಸುತ್ತಿದೆ. ಪಾಲಿಕೆ ಆವರಣದಲ್ಲಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಕಚೇರಿಯಲ್ಲಿ ಸಭೆ ಸೇರಿರುವ ಮುಖಂಡರು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ. ಅಬ್ಬಯ್ಯ ನೇತೃತ್ವದಲ್ಲಿ ಮೇಯರ್ ಸ್ಥಾನಕ್ಕೆ ಮಯೂರ್ ಮೋರೆ ಹಾಗೂ ಉಪಮೇಯರ್ ಸ್ಥಾನಕ್ಕೆ ದೀಪಾ ನೀರಲಕಟ್ಟಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
82 ಸದಸ್ಯರಿರುವ ಪಾಲಿಕೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ 3 ಹಾಗೂ ಪಕ್ಷೇತರರು 6 ಮಂದಿ ಇದ್ದಾರೆ. ಮ್ಯಾಜಿಕ್ ಸಂಖ್ಯೆ 42 ಆಗಿದ್ದು, ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಿಕಾ ಮೇಸ್ತ್ರಿ ಮತ್ತು ಕಿಶನ್ ಬೆಳಗಾವಿ ಶುಕ್ರವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗೂ ಜೆಡಿಎಸ್'ನ ಲಕ್ಷ್ಮಿ ಹಿಂಡಸಗೇರಿ ಸಹ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಆ ಮೂಲಕ ಬಿಜೆಪಿ ಮ್ಯಾಜಿಕ್ ಸಂಖ್ಯೆ ದಾಟಿದೆ.
ಪಾಲಿಕೆ ಕಚೇರಿಯಲ್ಲಿ ಬೆಳಿಗ್ಗೆ 9.30ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. 1.30ಕ್ಕೆ ಚುನಾವಣೆ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.