ಹುಬ್ಬಳ್ಳಿ: ‘ಕಸ ಸಂಗ್ರಹ ಮಾಡೋರು ಅದನ್ನ ಬ್ಯಾರೆ ಬ್ಯಾರೆ ಮಾಡ್ಬೇಕು. ಮನಿಯೊಳಗ ಎಲ್ರೂ ಕೆಲಸಕ್ಕೆ ಹೋಗ್ತಿವಿ. ಕಸ ಬ್ಯಾರೆ ಮಾಡಾಕ ಟೈಮ್ ಸಿಗಲ್ಲ. ಎರಡ್ ನಿಮಿಷ ನಿಂತ ನೀವ್ ಸಪರೇಟ್ ಮಾಡ್ಕೊಂಡ ಹೋಗ್ರಿ. ಇಲ್ಲಂದ್ರ ಇನ್ಮುಂದ ಗಾಡಿಗ ಕಸ ಹಾಕಲ್ಲ, ಹೊರಗ ಚೆಲ್ತೀವಿ’...

ನಗರದ ಸ್ವಚ್ಛತೆಗಾಗಿ ಕಸ ಪ್ರತ್ಯೇಕಿಸಿ ಕೊಡಿ ಎಂದು ಹೇಳುವ ಪೌರಕಾರ್ಮಿಕರಿಗೆ ಜನರಿಂದ ಎದುರಾಗುವ ಮಾತುಗಳಿವು. ಪ್ರತ್ಯೇಕಿಸಿ ಕೊಡದಿದ್ದರೆ ಕಸ ಒಯ್ಯುವುದಿಲ್ಲ ಎಂದು ಪೌರಕಾರ್ಮಿಕರು ಹೇಳಿದರೆ ಅವರ ಮೇಲೆ ದಬ್ಬಾಳಿಕೆ, ನಿಂದನೆ ಮಾಡಲಾಗುತ್ತಿದೆ.

ನಗರದ ಸೌಂದರ್ಯೀಕರಣಕ್ಕೆ ಒತ್ತು ನೀಡಿ ದೇಶದಾದ್ಯಂತ 2016ರಲ್ಲಿ ‘ಸ್ವಚ್ಛ ಭಾರತ್ ಮಿಷನ್’ ಯೋಜನೆ ಜಾರಿಗೆ ಮಾಡಲಾಗಿದೆ. ಅಂದಿನಿಂದ ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಕೊಡಬೇಕು ಎಂದು ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ, ಜಿಲ್ಲೆಯ ಕೆಲವೆಡೆ ಜನರು ಇಂದಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಪರಿಣಾಮ ಪೌರಕಾರ್ಮಿಕರಿಗೆ ಕಸ ಸಂಗ್ರಹಣೆ ಕಿರಿಕಿರಿಯಾಗಿದೆ.

‘ನಾವೂ ಮನಷಾರ ಅದಿವ್ರಿ. ದಿನಾ ಹೇಳಿದ್ರು ಮತ್ತದ ಮಾಡ್ತಾರಿ. ನಮ್ ಜೊತಿಗ ಜಗಳಕ ಬರ್ತಾರ್ರಿ. ಅವ್ರ ಮನಿ ಕಸ ಅವರಿಗ್ ಬ್ಯಾರೆ ಮಾಡಾಕ ಆಗಲ್ಲಂದ್ರ ಇನ್ನ ಅದನ್ನ ನಾವ್ ಕೈಯಿಂದ ಬ್ಯಾರೆ ಮಾಡಾಕ ಹೇಸಿಗಿ ಅನಸಲ್ಲೇನ್ರಿ. ಹೊಟ್ಟಿ ಪಾಡಿಗ್ ದುಡಿಯೋ ನಾವ್ ಇದನ್ನೆಲ್ಲ ಮಾಡಬೇಕಂದ್ರ ಕಷ್ಟ ಆಗ್ತದರಿ, ಇದ ಕೈಯಿಂದ ನಮಗ ಊಟ ಹೆಂಗ್ ಸೇರ್ತದರಿ... ಅರ್ಥ ಮಾಡ್ಕೊಬೇಕಲ್ರಿ, ಓದ್ಕೊಂಡಿರೊ ಮಂದಿನ ಹಿಂಗ ಮಾಡ್ತಾರ’

‘ಒಂದಿಷ್ಟ ಮಂದಿ ತಿಳ್ಕೊಂಡ ಕಸ ಬ್ಯಾರೆ ಬ್ಯಾರೆ ಮಾಡಿಕೊಡ್ತಾರ. ಅರ್ಥ ಮಾಡ್ಕೊಲಾರದ ಮಂದಿ ಜೊತೆ ಹೆಚ್ಚ ವಾದ ಮಾಡಲಾರದ ಕಸ ತಗೊಂಡ ಹೋಗ್ತಿವಿ. ಆದರ ಈ ಕಸ ಕೊಡಾಕ ಹೋದಾಗ (ಡಂಪಿಂಗ್ ಯಾರ್ಡ್), ಸಾಹೇಬ್ರ ನಿಂತ ಚೆಕ್ ಮಾಡಿ, ನಮ್ ಕಡೆಯಿಂದ ಬ್ಯಾರೆ ಮಾಡಾಕ ಹಚ್ತಾರ್ರಿ... ಮೊದ್ಲ ಉರಿ ಬಿಸಿಲು, ಅದರಾಗ ಈ ಕೆಟ್ಟ ವಾಸನಿ ತಗೋತ ಕೆಲಸ ಮಾಡಬೇಕಂದ್ರ ಉಸಿರ ನಿಂತಷ್ಟ ತ್ರಾಸಾಗ್ತದರಿ. ಆದರೂ ನಮಗಿದು ಅನಿವಾರ್ಯ ಅಲ್ರಿ’...

ಹೀಗೆ ಪೌರಕಾರ್ಮಿಕರು ‘ಪ್ರಜಾವಾಣಿ’ ಎದುರು ತಮ್ಮ ಅಳಲು ತೋಡಿಕೊಂಡರು.

ನಿತ್ಯ 2.80 ಲಕ್ಷ ಮನೆ ಕಸ ಸಂಗ್ರಹ: ‘ಹುಬ್ಬಳ್ಳಿ–ಧಾರವಾಡದಲ್ಲಿ ಒಟ್ಟು 82 ವಾರ್ಡ್ಗಳಿದ್ದು, ಪಾಲಿಕೆಯ 380 ಆಟೊ ಟಿಪ್ಪರ್ ಮೂಲಕ ನಿತ್ಯ 2.80 ಲಕ್ಷ ಮನೆ ಸಂಗ್ರಹ ಮಾಡಲಾಗುತ್ತಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೂ ಪ್ರತಿ ಮನೆ ಮನೆಯಿಂದ ಕಸ ಸಂಗ್ರಹ ಮಾಡಲಾಗುತ್ತದೆ. ದುರಸ್ತಿ ಕಾರಣಕ್ಕೆ ನಿತ್ಯ 20ರಿಂದ 30 ವಾಹನಗಳು ಲಭ್ಯ ಇರುವುದಿಲ್ಲ. ಪ್ರತ್ಯೇಕವಾಗಿ ಕಸ ಕೊಡದಿದ್ದಲ್ಲಿ ತೆಗೆದುಕೊಳ್ಳಬೇಡಿ ಎಂದು ಪೌರಕಾರ್ಮಿಕರಿಗೆ ನಿರ್ದೇಶನ ನೀಡಿದ್ದೇವೆ. ಅವರು ಅದನ್ನು ಪಾಲಿಸುತ್ತಿದ್ದಾರೆ, ಸಾರ್ವಜನಿಕರು ಸಹಕರಿಸಬೇಕು ವಿನಃ ಅವರೊಂದಿಗೆ ತಕರಾರು ಮಾಡಬಾರದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ ತಿಳಿಸಿದರು. ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 622 ಬ್ಲ್ಯಾಕ್ ಸ್ಪಾಟ್ ಗುರುತು ಮಾಡಲಾಗಿದ್ದು, ಇಲ್ಲಿ ಕಸ ಎಸೆಯುವವರಿಗೆ ದಂಡ ಸಹ ವಿಧಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಿತ್ಯ 300 ಟನ್ ಹಾಗೂ ಧಾರವಾಡದಲ್ಲಿ 150 ಟನ್ ಕಸ ಸಂಗ್ರಹವಾಗುತ್ತದೆ, ಎರಡು ಕಾಂಪೋಸ್ಟ್ ಘಟಕಗಳಿವೆ’ ಎಂದು ಅವರು ಮಾಹಿತಿ ನೀಡಿದರು.

‘ಕಸ ಪ್ರತ್ಯೇಕವಾಗಿ ಕೊಡಲು ತಿಳಿಸಿದರೆ, ಕೆಲವರು ಕರೆ ಮಾಡಿ ಪೌರಕಾರ್ಮಿಕರು ನಮ್ಮ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ನಮ್ಮ ಸಿಬ್ಬಂದಿ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸಲ್ಲ. ಕರೆ ಮಾಡಿ ನಮಗೆ ದೂರು ಹೇಳುವ ಜನ ಅದೇ ಸಮಯವನ್ನು ಕಸ ವಿಂಗಡಣೆಗೆ ಬಳಸಬಹುದು’ ಎಂದು ತಿಳಿಸಿದರು.

‘ಸಾಮಾಜಿಕ ಜಾಲತಾಣ, ಕಸ ಸಂಗ್ರಹಿಸುವ ಆಟೊ ಟಿಪ್ಪರ್ಗಳಲ್ಲಿ ಜಿಂಗಲ್ ಮೂಲಕ ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಡಬೇಕು ಎಂದು ತಿಳಿಸಲಾಗುತ್ತಿದೆ. ಆರೋಗ್ಯ ನಿರೀಕ್ಷಕರು ಆಟೊ ಟಿಪ್ಪರ್ಗಳೊಂದಿಗೆ ಮನೆ ಮನೆಗೂ ಹೋಗಿ ತಿಳಿವಳಿಕೆ ನೀಡುತ್ತಿದ್ದೇವೆ. ಒಂದು ವರ್ಷದಿಂದ ಕಮ್ಯುನಿಟಿ ಮೊಬೈಲೈಸರ್ ನಿತ್ಯ ಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಮಕ್ಕಳಿಗೆ, ವೃದ್ಧರಿಗೆ ಬಳಸುವ ಡೈಪರ್, ಸ್ಯಾನಿಟರಿ ನ್ಯಾಪಕಿನ್ಗಳನ್ನು ಶುಚಿಗೊಳಿಸಿ ಕೊಡಬೇಕು, ಕೆಲವರು ಹಾಗೇ ತಂದು ಗಾಡಿಯಲ್ಲಿ ಹಾಕುತ್ತಾರೆ. ಪುರುಷರಿಗೆ ಹೇಳಿದರೆ ಸ್ಪಂದಿಸುತ್ತಾರೆ, ಅನೇಕ ಬಾರಿ ಮಹಿಳೆಯರು ನಿರ್ಲಕ್ಷ್ಯ ಮಾಡುತ್ತಾರೆ. ಜೊತೆಗೆ ಪಾಲಿಕೆಗೆ ತೆರಿಗೆ ಕಟ್ಟುತ್ತೇವೆ ಎಂದು ಬೇರೆ ಬೇರೆ ಸಮಸ್ಯೆಗಳ ಕುರಿತು ನಮ್ಮ ಜೊತೆಗೂ ಜಗಳ ಮಾಡುತ್ತಾರೆ’ ಎನ್ನುತ್ತಾರೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಿರಿಯ ಆರೋಗ್ಯ ನಿರೀಕ್ಷಕಿ ದೀಪಿಕಾ ಆರ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-24-819897816

ಈಗಾಗಲೇ ಕೆಲವು ಕಡೆ 4 ವಿಧದಲ್ಲಿ ಕಸ ಸಂಗ್ರಹ ಮಾಡಲಾಗುತ್ತಿದೆ, ಶೀಘ್ರದಲ್ಲೇ ಪಾಲಿಕೆ ವ್ಯಾಪ್ತಿಯಾದ್ಯಂತ ಇದನ್ನು ಜಾರಿ ಮಾಡಲಾಗುವುದು. ಈಗಿರುವ ವಾಹನಗಳಿಗೆ ಹೆಚ್ಚುವರಿ ಎರಡು ಬ್ಯಾಗ್ ಹಾಕಲಾಗುವುದು. ಸಿಬ್ಬಂದಿ ಕೊರತೆಯಿಲ್ಲ
ರುದ್ರೇಶ್ ಘಾಳಿ, ಆಯುಕ್ತ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

ಹು–ಧಾ ಮಹಾನಗರ ಪಾಲಿಕೆಯ ಕಿರು ಮಾಹಿತಿ

ಒಟ್ಟು ಪೌರಕಾರ್ಮಿಕರು;2,077

ನೇರ ವೇತನ ಪೌರಕಾರ್ಮಿಕರು;1,604

ಕಾಯಂ ಪೌರಕಾರ್ಮಿಕರು;473

ಪಾಲಿಕೆ ಸ್ವಂತ ವಾಹನ;314

ಹೊರಗುತ್ತಿಗೆ ಆಧಾರದ ವಾಹನ;66

ಹುಬ್ಬಳ್ಳಿ;300 ಟನ್ ಕಸ ಸಂಗ್ರಹ

ಧಾರವಾಡ;150 ಕಸ ಟನ್

ಒಟ್ಟಾರೆ ವೆಚ್ಚ;ವಾರ್ಷಿಕ ₹120 ಕೋಟಿ

‘ದಂಡ ಅನಿವಾರ್ಯ’

‘ಜನರಿಗೆ ಹೊರೆ ಆಗಬಾರದೆಂದು ಈವರೆಗೆ ದಂಡ ವಿಧಿಸದೆ ಜಾಗೃತಿ ಮೂಡಿಸಲಾಗುತ್ತಿತ್ತು. ಆದರೆ, ಇನ್ಮುಂದೆ ಇದು ಅನಿವಾರ್ಯವಾಗಿದೆ. ಕಸ ಪ್ರತ್ಯೇಕಿಸಿ ಕೊಡದಿದ್ದಲ್ಲಿ ₹1 ಸಾವಿರ, ಬೇರೆ ಕಡೆ ಚೆಲ್ಲಿದರೆ ₹2 ಸಾವಿರ ಮತ್ತು ತಪ್ಪು ಪುನರಾವರ್ತನೆಯಾದಲ್ಲಿ ₹5 ಸಾವಿರದಿಂದ ₹50 ಸಾವಿರ ದಂಡ ಹಾಕಲಾಗುವುದು’ ಎಂದು ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ ತಿಳಿಸಿದರು.

‘4 ವಿಧದಲ್ಲಿ ಕಸ ಸಂಗ್ರಹ’

‘ಏ.1ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಇನ್ನು ಮುಂದೆ ಮನೆ ಮನೆಯಿಂದ ನಾಲ್ಕು ವಿಧದಲ್ಲಿ ಕಸ ಸಂಗ್ರಹ ಮಾಡಬೇಕಿದೆ. ಹಸಿ ತ್ಯಾಜ್ಯ (ಕೊಳೆಯಬಹುದಾದ, ಅಡುಗೆ ಮನೆ ತ್ಯಾಜ್ಯ), ಒಣ ತ್ಯಾಜ್ಯ (ಪ್ಲ್ಯಾಸ್ಟಿಕ್ ಹಾಳೆ, ರಟ್ಟು, ಬಾಟಲಿ ಇತ್ಯಾದಿ), ಸ್ಯಾನಿಟರಿ ತ್ಯಾಜ್ಯ (ಡೈಪರ್, ಸ್ಯಾನಿಟರಿ ಪ್ಯಾಡ್ ಇತರೆ) ಹಾಗೂ ವಿಶೇಷ ಕಾಳಜಿ ತ್ಯಾಜ್ಯ (ವೈದ್ಯಕೀಯ ತ್ಯಾಜ್ಯ, ಬಲ್ಬ್, ಬ್ಯಾಟರಿ ಇತ್ಯಾದಿ). ಈ ಕುರಿತು ಈಗಾಗಲೇ ಕೆಲವರಿಗೆ ತರಬೇತಿ ನೀಡಲಾಗಿದೆ, ಎರಡ್ಮೂರು ತಿಂಗಳಲ್ಲಿ ಪ್ರತಿ ಮನೆಯಿಂದ ನಾಲ್ಕು ವಿಧದದಲ್ಲಿ ಕಸ ಸಂಗ್ರಹಿಸಲಾಗುವುದು’ ಎಂದು ಧಾರವಾಡ ಮಹಾನಗರ ಪಾಲಿಕೆಯ ಕಿರಿಯ ಆರೋಗ್ಯ ನಿರೀಕ್ಷಕಿ ದೀಪಿಕಾ ಆರ್., ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.