ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ರೈತರ ಜೀವನಾಡಿ ಹುಬ್ಬಳ್ಳಿ ಎಪಿಎಂಸಿ

ರೈತರು ಮತ್ತು ಖರೀದಿ ದಾರರನ್ನು ಬೆಸೆಯುವ ಕೊಂಡಿ
Last Updated 11 ಜನವರಿ 2022, 5:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿಯ ಅಮರಗೋಳದ ಜಗಜ್ಯೋತಿ ಬಸವೇಶ್ವರ ಮಾರುಕಟ್ಟೆಯು ಧಾರವಾಡದ ಸೇರಿದಂತೆ ಹತ್ತಾರು ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. ವರ್ಷಪೂರ್ತಿ ಶ್ರಮಪಟ್ಟು ದುಡಿದ ಫಸಲಿಗೆ ಉತ್ತಮ ದರ ಒದಗಿಸುವ ವೇದಿಕೆಯಾಗಿದ್ದು, ಅವರ ಆರ್ಥಿಕ ಸಬಲತೆಗೆ ಸಾಕ್ಷಿಯಾಗಿದೆ.

ಮಾರುಕಟ್ಟೆಯು 434 ಎಕರೆಯಷ್ಟು ವಿಶಾಲವಾಗಿದ್ದು, ಮಾರುಕಟ್ಟೆ ಸಮಿತಿಯನ್ನು 1939ರ ಮುಂಬೈ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ) ಶಾಸನದ ಅನ್ವಯ 1943ರಲ್ಲಿ ಸ್ಥಾಪಿಸಲಾಗಿದೆ. ಈ ಹಿಂದೆ ವ್ಯಾಪಾರ ನಡೆಯುತ್ತಿದ್ದ ನ್ಯೂ ಕಾಟನ್‌ ಮಾರ್ಕೆಟ್‌ನಲ್ಲಿದ್ದ ಸಗಟು ವ್ಯಾಪಾರವನ್ನು 1994ರಲ್ಲಿ ಅಮರಗೋಳದ ಮುಖ್ಯ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಹಂತ– ಹಂತವಾಗಿ ವ್ಯಾಪಾರಸ್ಥರು, ಮಳಿಗೆಗಳು ಮತ್ತು ಗೋದಾಮುಗಳ ಸಂಖ್ಯೆ ಹೆಚ್ಚಾಗಿದ್ದು, ಮಾರುಕಟ್ಟೆ ಅಭಿವೃದ್ಧಿಯ ಪಥದಲ್ಲಿ ಸಾಗಿದೆ.

ಇಲ್ಲಿಗೆ ನಿತ್ಯ ರೈತರು, ವರ್ತಕರು ಹಾಗೂ ಗ್ರಾಹಕರು ಸೇರಿ ಐದರಿಂದ ಆರು ಸಾವಿರ ಜನ ಬರುತ್ತಾರೆ. ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಒಮ್ಮೆ ಬಂಪರ್‌ ಬೆಲೆ ದೊರೆತರೆ, ಒಮ್ಮೊಮ್ಮೆ ದರ ಕುಸಿತದಿಂದ ಕಂಗಾಲಾದ ಪ್ರಸಂಗಗಳೂ ಇವೆ.

ಪ್ರಮುಖ ಉತ್ಪನ್ನಗಳಾದ ಹತ್ತಿ, ಶೇಂಗಾ, ಒಣಮೆಣಸಿನ ಕಾಯಿ, ಆಹಾರ ಧಾನ್ಯ, ಅಕ್ಕಡಿ ಕಾಳು, ಈರುಳ್ಳಿ, ಆಲೂಗಡ್ಡೆ, ಹಣ್ಣು, ತರಕಾರಿ, ವೀಳ್ಯದೆಲೆ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ನಡೆಯುತ್ತದೆ. ಅಲ್ಲದೇ ಜಾನುವಾರು, ಕುರಿ ಹಾಗೂ ಮೇಕೆಗಳನ್ನು ಪರಸ್ಪರ ಒಪ್ಪಂದ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತದೆ.

ಉತ್ತರ ಕರ್ನಾಟಕದ ಕೇಂದ್ರ ಬಿಂದು: ಎಪಿಎಂಸಿಗೆ ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಬರುತ್ತಾರೆ.

ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್‌ ಹಾಗೂ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ರೈತರು ಮಸಾಲೆ, ಒಣಮೆಣಸಿನಕಾಯಿ ಹಾಗೂಅರಿಸಿಣ ಸೇರಿದಂತೆ ಹಲವು ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ. ಮಾವು ಮತ್ತು ಪೇರು ಸೇರಿದಂತೆ ವಿವಿಧ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಇಲ್ಲಿ ಅಂಗಡಿ, ಗೋದಾಮು ಸೇರಿದಂತೆ ಒಟ್ಟು203 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 193 ಅಂಗಡಿ, ಗೋದಾಮುಗಳನ್ನು ಅರ್ಹರಿಗೆ ಹಂಚಿಕೆ ಮಾಡಲಾಗಿದೆ. ಪ್ರಾಂಗಣದಲ್ಲಿ 1,072 ನಿವೇಶಗಳನ್ನು ಗುರುತಿಸಿದ್ದು, 753 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, 305 ನಿವೇಶನಗಳು ಹಂಚಿಕೆಯಾಗಬೇಕಿದೆ.‌

ಎಪಿಎಂಸಿಯನ್ನು ಈರುಳ್ಳಿ– ಆಲೂಗಡ್ಡೆ ವಿಭಾಗ, ಹಣ್ಣು– ತರಕಾರಿ ವಿಭಾಗ, ಹೂವು, ಕಾಳು, ಅಕ್ಕಿ–ಬೇಳೆಕಾಳು, ಬೆಲ್ಲ, ಸಂಸ್ಕರಣಾ ಘಟಕ, ಗೋದಾಮು, ಬೀಜ, ರಸಗೊಬ್ಬರ, ಕೃಷಿ ಸಲಕರಣೆ ಹಾಗೂ ಜಾನುವಾರು ಮಾರುಕಟ್ಟೆ ಎಂದು ಹತ್ತು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಕೃಷಿ ಉತ್ಪನ್ನಗಳ ದೀರ್ಘಕಾಲ ಸಂರಕ್ಷಣೆಗಾಗಿ ಎಪಿಎಂಸಿಯಲ್ಲಿ ಎರಡು ಖಾಸಗಿ ಮತ್ತು ಒಂದು ಸರ್ಕಾರಿ ಸ್ವಾಮ್ಯದ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್)ಗಳಿವೆ. ಕೃಷಿ ಉತ್ಪನ್ನ ಮಾರಾಟ ಮತ್ತು ಖರೀದಿ ಮಾತ್ರವಲ್ಲದೆ ಬ್ಯಾಂಕ್‌, ಉಪಾಹಾರ ಗೃಹ, ಕೃಷಿ ಬಳಕೆಗೆ ಪೂರಕವಾದ ವಸ್ತುಗಳ ಮಾರಾಟ ಕೇಂದ್ರ, ಹಮಾಲರ ಕಾಲೊನಿ, ಸರ್ಕಾರಿ ಶಾಲೆಯೂ ಇದೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕು: ಎಪಿಎಂಸಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎನ್ನುವುದು ಹಮಾಲರು ಸೇರಿದಂತೆ ಹಲವರ ಬೇಡಿಕೆ ಆಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾದರೆ, ಸಾವಿರಾರು ಜನರಿಗೆ ಅನುಕೂಲವಾಗಲಿದೆ.

ಆಸ್ತಿ ಕರ ಮನ್ನಾ ಮಾಡಲು ಮನವಿ: ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿವೇಶನ, ಅಂಗಡಿ ಮತ್ತು ಗೋದಾಮು ಹಂಚಿಕೆ ಪಡೆದ ಪೇಟೆ ವ್ಯಾಪಾರಸ್ಥರಿಗೆ 2008–09ನೇ ಸಾಲಿಗಿಂತ ಹಿಂದಿನ ಆಸ್ತಿ ಕರವನ್ನು ಮನ್ನಾ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಈ ಹಿಂದೆ ಜನಪ್ರತಿನಿಧಿಗಳು ಹಾಗೂ ಪಾಲಿಕೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು. ಆದರೆ, ತಾರ್ಕಿಕ ಅಂತ್ಯ ಕಂಡಿಲ್ಲ’ ಎನ್ನುತ್ತಾರೆ ಎಪಿಎಂಸಿ ವ್ಯಾಪಾರಸ್ಥರ ಸಂಘದ ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ.

ಇಲ್ಲಿ ಕೆಲವು ನಿರ್ದಿಷ್ಟ ಸಮಸ್ಯೆಗಳೂ ಸಹ ಇವೆ. ಶೌಚಾಲಯ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕಿದ್ದು, ತರಕಾರಿ ತ್ಯಾಜ್ಯ ವಿಲೇವಾರಿ, ಒಳಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತಷ್ಟು ಸುಧಾರಿಸಬೇಕಿದೆ. ಒಟ್ಟಾರೆ ಮಾರುಕಟ್ಟೆ ಮತ್ತಷ್ಟು ಉನ್ನತಿ ಸಾಧಿಸಲಿ ಎನ್ನುವುದು ಎಲ್ಲ ರೈತರ ಆಶಯವಾಗಿದೆ.

ಮಾರುಕಟ್ಟೆ ಆವರಣದಲ್ಲಿ ಹಮಾಲರ ಕಾಲೊನಿ‌
ಮಾರುಕಟ್ಟೆ ಆವರಣದಲ್ಲಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ 132 ಜನ ಹಮಾಲರ ಕುಟುಂಬದವರಿಗೆ ಸರ್ಕಾರ ಆಶ್ರಯಕಲ್ಪಿಸಿದೆ. ಸಾವಿರಕ್ಕೂ ಹೆಚ್ಚು ಜನ ಇಲ್ಲಿ ನೆಲೆಸಿದ್ದಾರೆ. ಪಕ್ಕದಲ್ಲೇಸರ್ಕಾರಿ ಶಾಲೆಯೂ ಇದ್ದು, ಹಮಾಲರ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಪರವಾನಗಿ ಪಡೆದ ಹಮಾಲರಿಗೆ ವಾಜಪೇಯಿ ನಗರಾಭಿವೃದ್ಧಿ ವಸತಿ ಯೋಜನೆ ಅಡಿ ಆಶ್ರಯ ಕಲ್ಪಿಸಲು ಮಾರುಕಟ್ಟೆ ಆವರಣದಲ್ಲಿ 4 ಎಕರೆ 3 ಗುಂಟೆ ಜಾಗ ಮೀಸಲಿಡಲಾಗಿದೆ.

ಮೂಲಸೌಕರ್ಯ ಕಲ್ಪಿಸಿ: ‘ಹಮಾಲರ ಕಾಲೊನಿಯಲ್ಲಿ ನೆಲೆಸಿರುವವರಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿಲ್ಲ, ಸ್ವಚ್ಛತೆ ಕೊರತೆ ಇದೆ. ಅಲ್ಲದೇ, ವಿದ್ಯುತ್‌ ಸಮಸ್ಯೆಯೂ ಇದೆ. ಹಮಾಲರ ಕಾಲೊನಿಯಿಂದ ಮುಖ್ಯದ್ವಾರಕ್ಕೆ ಅಂದಾಜು ಒಂದು ಕಿ.ಮೀ ದೂರವಿದ್ದು, ಸಂಚಾರ ವ್ಯವಸ್ಥೆ ಇಲ್ಲ. ಕಾಲೊನಿಯಲ್ಲಿ ನೂರಕ್ಕೂ ಹೆಚ್ಚು ಜನ ಮಕ್ಕಳಿದ್ದು ಆಟದ ಮೈದಾನವಿಲ್ಲ. ಈ ವ್ಯವಸ್ಥೆಗಳನ್ನು ಶೀಘ್ರ ಸುಧಾರಿಸಬೇಕು’ ಎಂದು ಬಸವ ಕಾಲೊನಿ ನಾಗರಿಕರ (ಕಾರ್ಮಿಕರ ಸೇವಾ ಸಂಘ) ಖಜಾಂಜಿ ಹಾಗೂ ಕಾಲೊನಿ ನಿವಾಸಿ ಮಂಜುನಾಥ ಹೂಜರಾತಿ ಆಗ್ರಹಿಸುತ್ತಾರೆ.

‘₹10ಕೋಟಿ ವೆಚ್ಚದಲ್ಲಿ ಅಭಿವೃದ್ಧಿ’
ಮಾರುಕಟ್ಟೆಯನ್ನು ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆರೂಪಿಸಿಕೊಳ್ಳಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಸುರೇಶ ಕಿರೇಸೂರ ಹೇಳಿದರು.

ಏಳು ಎಕರೆ ವ್ಯಾಪ್ತಿಯಲ್ಲಿ ಜಾನುವಾರು ಮಾರಾಟ ಕೇಂದ್ರ ಅಭಿವೃದ್ಧಿ ಪಡಿಸಲಾಗುತ್ತಿದೆ. ರೈತರ ಉತ್ಪನ್ನ ಕಾಪಾಡುವುದು ಮತ್ತು ಭದ್ರತೆಯ ದೃಷ್ಟಿಯಿಂದ ಮಾರುಕಟ್ಟೆ ವ್ಯಾಪ್ತಿಯಲ್ಲಿ 40 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಟೆಂಡರ್‌ ಕರೆಯಲಾಗುತ್ತಿದೆ. ವಿದ್ಯುತ್‌ ಸೌಕರ್ಯ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹಂತ– ಹಂತವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದರು.

*

ಎಪಿಎಂಸಿಯಲ್ಲಿರುವ ವ್ಯಾಪಾರಸ್ಥರ 2008–09ನೇ ಸಾಲಿಗಿಂತ ಮುಂಚಿನ ಆಸ್ತಿಕರ ಮನ್ನಾ ಮಾಡಬೇಕು. ಒಳಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು.
-ರಾಜಕಿರಣ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ, ಎಪಿಎಂಸಿ ವ್ಯಾಪಾರಸ್ಥರ ಸಂಘ

*

ಎಪಿಎಂಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮಾರುಕಟ್ಟೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿಕೊಳ್ಳಲಾಗಿದ್ದು, ₹10 ಕೋಟಿ ಮೀಸಲಿಡಲಾಗಿದೆ. ನೂತನ ಜಾನುವಾರು ಮಾರುಕಟ್ಟೆ ಶೀಘ್ರ ಪ್ರಾರಂಭವಾಗಲಿದೆ.
-ಸುರೇಶ ಕಿರೇಸೂರ, ಅಧ್ಯಕ್ಷ, ಎಪಿಎಂಸಿ

*

ಹಮಾಲರ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಬೇಕು. ಎಪಿಎಂಸಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪೊಲೀಸ್‌ ಠಾಣೆ ಆರಂಭಿಸಬೇಕು.
-ದುರ್ಗಪ್ಪ ಚಿಕ್ಕತುಂಬಳ, ರಾಜ್ಯ ಘಟಕದ ಅಧ್ಯಕ್ಷ, ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT