ಹುಬ್ಬಳ್ಳಿ–ಚೆನ್ನೈ ನೇರ ವಿಮಾನ 6ರಂದು ಪುನರಾರಂಭ

ಹುಬ್ಬಳ್ಳಿ: ಕೋವಿಡ್ ಕಾರಣದಿಂದ ಐದು ತಿಂಗಳ ಹಿಂದೆ ಸ್ಥಗಿತಗೊಳಿಸಲಾಗಿದ್ದ ಇಂಡಿಗೊ ಸಂಸ್ಥೆಯ ಹುಬ್ಬಳ್ಳಿ–ಚೆನ್ನೈ ನೇರ ವಿಮಾನಯಾನ ಸೆ.6ರಿಂದ ಪುನರಾರಂಭವಾಗಲಿದೆ.
ಈ ವಿಮಾನ ಆರಂಭದ ಕೆಲ ದಿನಗಳ ಕಾಲ ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ನಿತ್ಯ ವಿಮಾನಕ್ಕೆ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಇಂಡಿಗೊದ ಸ್ಥಳೀಯ ಸಿಬ್ಬಂದಿ ’ಪ್ರಜಾವಾಣಿ’ಗೆ ತಿಳಿಸಿದರು. ಬೆಳಿಗ್ಗೆ 9 ಗಂಟೆಗೆ ಚೆನ್ನೈನಿಂದ ಹೊರಡುವ ವಿಮಾನ 10.50ಕ್ಕೆ ಇಲ್ಲಿಗೆ ಬರಲಿದೆ. ಹುಬ್ಬಳ್ಳಿಯಿಂದ 11.20ಕ್ಕೆ ಹೊರಟು ಮಧ್ಯಾಹ್ನ 1.25ಕ್ಕೆ ಚೆನ್ನೈ ತಲುಪಲಿದೆ.
ಇಂಡಿಗೊ ಹುಬ್ಬಳ್ಳಿಯಿಂದ ಬೆಂಗಳೂರಿಗೆ ನಿತ್ಯ ವಿಮಾನ ಸೌಲಭ್ಯ ಆರಂಭಿಸಿದ್ದು, ಬೆಂಗಳೂರಿನಿಂದ ಬೆಳಿಗ್ಗೆ 7.50ಕ್ಕೆ ಹೊರಟು ಒಂದು ತಾಸಿನಲ್ಲಿ ಇಲ್ಲಿಗೆ ಬರಲಿದೆ. ಇಲ್ಲಿಂದ 9.25ಕ್ಕೆ ಹೊರಟು 10.25ಕ್ಕೆ ರಾಜ್ಯ ರಾಜಧಾನಿ ಮುಟ್ಟಲಿದೆ. ಇದೇ ಸಂಸ್ಥೆಯ ವಿಮಾನ ಜುಲೈ 16ರಂದು ವಾಣಿಜ್ಯ ನಗರಿಯಿಂದ ಕೇರಳದ ಕಣ್ಣೂರಿಗೆ ಬುಧವಾರ, ಗುರುವಾರ ಮತ್ತು ಶನಿವಾರ ಸಂಚಾರ ಆರಂಭಿಸಿದೆ. ಮಧ್ಯಾಹ್ನ 12.40ಕ್ಕೆ ಕಣ್ಣೂರಿನಿಂದ ಹೊರಟು 2ಕ್ಕೆ ಇಲ್ಲಿಗೆ ಬರಲಿದ್ದು, ಹುಬ್ಬಳ್ಳಿಯಿಂದ 2.30ಕ್ಕೆ ಹೊರಟು 3.45ಕ್ಕೆ ಕಣ್ಣೂರು ಮುಟ್ಟಲಿದೆ.
’ಕೋವಿಡ್ ನಡುವೆಯೂ ನಿಧಾನವಾಗಿ ವಿಮಾನಯಾನ ಚೇತರಿಸಿಕೊಳ್ಳುತ್ತಿದೆ. ಆರಂಭದಲ್ಲಿ ಕಾಡಿದ್ದ ಪ್ರಯಾಣಿಕರ ಕೊರತೆ ಈಗ ಕಡಿಮೆಯಾಗಿದೆ. ನಿತ್ಯ ಸಂಚರಿಸುವ ಬೆಂಗಳೂರಿನ ವಿಮಾನದಲ್ಲಿ ಶೇ 80ರಷ್ಟು ಪ್ರಯಾಣಿಕರು ಇರುತ್ತಾರೆ. ಸೆಪ್ಟೆಂಬರ್ ಅಂತ್ಯದಲ್ಲಿ ಇಲ್ಲಿಂದ ಮುಂಬೈಗೆ ನೇರ ವಿಮಾನ ಸಂಚಾರ ಆರಂಭಿಸಲಾಗುವುದು’ ಎಂದು ಸಿಬ್ಬಂದಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.