ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕೊರತೆ ನೀಗಲಿ, ಅಭಿವೃದ್ಧಿ ‘ಕೇಂದ್ರ’ವಾಗಲಿ

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಜನರ ನಿರೀಕ್ಷೆ
Published 19 ಮೇ 2023, 22:52 IST
Last Updated 19 ಮೇ 2023, 22:52 IST
ಅಕ್ಷರ ಗಾತ್ರ

ಗೋವರ್ಧನ ಎಸ್‌.ಎನ್‌.

ಹುಬ್ಬಳ್ಳಿ: ಹಲವು ಅಭಿವೃದ್ಧಿಗಳನ್ನು ಕಂಡಿರುವ, ಇನ್ನೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಸಮಸ್ಯೆಗಳೂ ಇವೆ. ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಮಹೇಶ ಟೆಂಗಿನಕಾಯಿ ಅವರು, ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವರೆಂಬ ನಿರೀಕ್ಷೆ ಜನರದ್ದಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಉದ್ಯಾನ, ಕ್ರೀಡಾಂಗಣ, ಮಾರುಕಟ್ಟೆ ಆಧುನೀಕರಣದಂತಹ ಹಲವು ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯುತ್ತಿವೆ. ಆದರೆ, ಮೂಲಸೌಕರ್ಯಗಳಿಂದಲೇ ಬಹುತೇಕರು ವಂಚಿತರಾಗಿದ್ದಾರೆ. 

ನೀರು ಪೂರೈಕೆ ಸಮಸ್ಯೆ: ‘ನೀರಿನ ಪೈಪ್‌ಲೈನ್‌ ಒಡೆದು ವಾರ ಕಳೆಯಿತು. ನೀರು ಪೂರೈಕೆ ಮಾಡಿದಾಗೆಲ್ಲ ಪೋಲಾಗುತ್ತಿದೆ. ಇದರಿಂದ ಮನೆಗಳಿಗೆ ನೀರು ಸಮಪರ್ಕವಾಗಿ ಬರುತ್ತಿಲ್ಲ. ಈ ಬಗ್ಗೆ ಎಲ್‌ ಆ್ಯಂಡ್‌ ಟಿ ಕಂಪನಿಯವರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಹದಿನೈದು ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಆ ನೀರು ಸಹ ಹೀಗೆ ಪೋಲಾದರೆ ನೀರಿಗಾಗಿ ಏನು ಮಾಡಬೇಕು’ ಎಂದು ಬೈರಿದೇವರಕೊಪ್ಪದ ಅಂಗಡಿಯೊಂದರ ಮಾಲೀಕ ಆರ್‌.ಬಿ. ಮಾದಪ್ಪನವರ ಪ್ರಶ್ನಿಸಿದರು. 

ಮೂಲಸೌಕರ್ಯ ನೀಡಿ: ‘ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ ಎನ್ನುತ್ತಾರೆ ಅಷ್ಟೇ. ಈ ಅಭಿವೃದ್ಧಿ ಕಾರ್ಯಗಳಿಂದಲೇ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಅಭಿವೃದ್ಧಿ ಬೇಕು, ಅದನ್ನು ಸುವ್ಯವಸ್ಥಿತವಾಗಿ ಮಾಡಬೇಕು. ಜನರ ಅಗತ್ಯ ಬೇಡಿಕೆಗಳು ಈಡೇರಿದರೆ, ಉಳಿದ ಅಭಿವೃದ್ಧಿ ಕೆಲಸಗಳತ್ತ ನಂತರ ಗಮನ ಹರಿಸಬಹುದು’ ಎಂದು ಉಣಕಲ್‌ನ ಹೋಟೆಲ್ ಉದ್ಯಮಿ ಕುಸುಮಾಕರ ತಿಳಿಸಿದರು.

ಸ್ವಚ್ಛತೆಗೆ ಬೇಕು ಆದ್ಯತೆ: ‘ಕ್ಷೇತ್ರದ ಮುಖ್ಯರಸ್ತೆಗಳ ಹೊರತಾಗಿ ಉಳಿದೆಡೆ ಸ್ವಚ್ಛತೆ ಮರೀಚಿಕೆಯಾಗಿದೆ. ಯಾವ ಅಧಿಕಾರಿಯೂ ಕ್ಷೇತ್ರದೊಳಗೆ ಬಂದು, ಜನರ ಸಮಸ್ಯೆ ವಿಚಾರಿಸುವುದಿಲ್ಲ. ರಸ್ತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಬಿಸಿಲಿನಲ್ಲಿ ಅಪಾರ ಪ್ರಮಾಣದಲ್ಲಿ ದೂಳು ಏಳುತ್ತದೆ. ಮಳೆ ಬಂದರೆ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ, ಕೆಲವೆಡೆ ಕೆಸರುಗದ್ದೆಯಂತಾಗುತ್ತದೆ. ರಸ್ತೆ ದುರಸ್ತಿ ಮಾಡಿದರೂ, ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ಉಣಕಲ್‌ ಕ್ರಾಸ್‌ನ ಟಿಂಬರ್ ಯಾರ್ಡ್‌ ಸತೀಶ ಗಟಾರ ಆರೋಪಿಸಿದರು.

‘ರಸ್ತೆ ನಿರ್ಮಿಸಿದ ಕೆಲ ತಿಂಗಳಲ್ಲೇ ಕಿತ್ತುಹೋಗುತ್ತಿವೆ. ಒಳಚರಂಡಿ ಕಾಮಗಾರಿಯೂ ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರಿ ಜಾಗಗಳು ಒತ್ತುವರಿಯಾದ ಆರೋಪವಿದೆ. ಮಳೆ ಬಂದರೆ ರಾಜಕಾಲುವೆ ನೀರು ಮನೆಗಳಿಗೆ, ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ನೂತನ ಶಾಸಕರಾದರೂ ಜನರ ಸಮಸ್ಯೆಯತ್ತ ಗಮನಹರಿಸಿ, ಪರಿಹರಿಸಬೇಕು’ ಎಂದು ದೇವಿನಗರದ ಕ್ಷೀರಸಾಗರ ಹಾಗೂ ವೀರಪ್ಪ ಹಾಗರಗಿ ಮನವಿ ಮಾಡಿದರು. 

ಸಂಚಾರ ದಟ್ಟಣೆ ನಿಯಂತ್ರಣವಾಗಲಿ: ಕ್ಷೇತ್ರದಲ್ಲಿ ಹಲವು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಿವೆ. ಬೃಹತ್‌ ಮಾಲ್‌ಗಳು, ಪ್ರಮುಖ ಮಾರುಕಟ್ಟೆ, ಉದ್ಯಮಗಳೂ ಇರುವುದರಿಂದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಸಂಚಾರ ದಟ್ಟಣೆ ಹೆಚ್ಚಿರುವುದರಿಂದ, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಯ.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ರಾಜ್‌ನಗರದ ಪ್ರಮುಖ ರಸ್ತೆ ಹದಗೆಟ್ಟಿರುವುದು ಪ್ರಜಾವಾಣಿ ಚಿತ್ರ–ಗುರು ಹಬೀಬ
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ರಾಜ್‌ನಗರದ ಪ್ರಮುಖ ರಸ್ತೆ ಹದಗೆಟ್ಟಿರುವುದು ಪ್ರಜಾವಾಣಿ ಚಿತ್ರ–ಗುರು ಹಬೀಬ
ಮಹೇಶ ಟೆಂಗಿನಕಾಯಿ
ಮಹೇಶ ಟೆಂಗಿನಕಾಯಿ
ವಿನಯ ಜವಳಿ ಕೆಸಿಸಿಐ ಅಧ್ಯಕ್ಷ 
ವಿನಯ ಜವಳಿ ಕೆಸಿಸಿಐ ಅಧ್ಯಕ್ಷ 

ಚುನಾವಣೆ ವೇಳೆ ಭರವಸೆ ‘ಚುನಾವಣೆಯಲ್ಲಿ ಗೆದ್ದರೆ ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಸ್ವಚ್ಛ ಮತ್ತು ಸ್ವಸ್ಥ ನಗರವನ್ನಾಗಿ ಮಾಡುವುದು ಉದ್ಯಮಗಳ ಸ್ಥಾಪನೆ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು’ ಎಂದು ಚುನಾವಣೆ ವೇಳೆ ಮಹೇಶ ಟೆಂಗಿನಕಾಯಿ ಭರವಸೆ ನೀಡಿದ್ದರು. ‘ನೀರಿನ ಸಮಸ್ಯೆ ಬಗೆಹರಿಸಿ ದೂಳು ಮತ್ತು ಕಸಮುಕ್ತ ಮಾಡಿ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು. ದೇಶದ ಅತ್ಯುತ್ತಮ 10 ಸ್ವಚ್ಛ ನಗರಗಳಲ್ಲಿ ಒಂದನ್ನಾಗಿ ಮಾಡಲಾಗುತ್ತದೆ. ಕೈಗಾರಿಕಾ ಕಾರಿಡಾರ್‌ ಬೆಳೆಸುವುದು ತಾಜ್ಯ ಸಂಸ್ಕರಣೆಗೆ ಆದ್ಯತೆ ನೀಡಲಾಗುತ್ತದೆ’ ಎಂದೂ ಹೇಳಿದ್ದರು. ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಮೂಲಸೌಕರ್ಯದೊಂದಿಗೆ ಕ್ಷೇತ್ರದ ಇತರೆ ಅಭಿವೃದ್ಧಿಗೂ ಕ್ರಮ ವಹಿಸಬೇಕು ಎಂಬುದು ಜನರ ಆಗ್ರಹವಾಗಿದೆ.

‘ಉದ್ಯಮ ಬೆಳವಣಿಗೆಗೆ ಅವಶ್ಯ’ ‘ಹು–ಧಾ ಸೆಂಟ್ರಲ್‌ ಕ್ಷೇತ್ರದಲ್ಲಿ ಹಲವೆಡೆ ಉದ್ಯಮಗಳು ಸ್ಥಾಪನೆಯಾಗಿವೆ. ಕೈಗಾರಿಕಾ ಪ್ರದೇಶಗಳನ್ನು ವಿಸ್ತರಿಸಿದರೆ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ಉದ್ಯಮಿಗಳು ನವ ಉದ್ಯಮಿಗಳಿಗೆ ರಿಯಾಯ್ತಿ ದರದಲ್ಲಿ ಭೂಮಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಹೇಳಿದರು. ‘ರಸ್ತೆ ವಿಸ್ತರಣೆ ಪಾರ್ಕಿಂಗ್ ವಲಯ ಬೀದಿ ಬದಿ ವ್ಯಾಪಾರಿಗಳ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಸೌಂದರ್ಯೀಕರಣ ಅಗತ್ಯ ಇರುವೆಡೆ ಶೌಚಾಲಯ ನಿರ್ಮಾಣ ಟ್ರಕ್ ಟರ್ಮಿನಲ್‌ ಸ್ಥಾಪನೆಗೆ ಒತ್ತು ನೀಡಿದರೆ ಉದ್ಯಮ ಬೆಳೆಯುತ್ತದೆ. ಇದರಿಂದ ಆದಾಯವೂ ಹೆಚ್ಚುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT