ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಮನೆಮನೆಗೂ ಹರಿಯಲಿ ಜೀವಜಲ

ಸರಾಗ ನೀರು ಪೂರೈಕೆಗೆ ಆದ್ಯತೆ; ಪಾಲಿಕೆ ತೋರಲಿ ಬದ್ಧತೆ
Last Updated 13 ಜೂನ್ 2022, 7:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದಲ್ಲಿ ಮನೆಮನೆಗೂ ನೀರು ಸಿಗಲಿ ಎನ್ನುವುದು ಈ ಭಾಗದ ಜನರ ದಶಕಗಳ ಕನಸಾಗಿದೆ.ಆದರೆ, ಮಹಾನಗರ ಬೆಳೆದಂತೆ ನೀರು ಪೂರೈಕೆಯನ್ನು ವ್ಯವಸ್ಥಿತವಾಗಿ ರೂಪಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಇದನ್ನು ಶೀಘ್ರ ಪರಿಹರಿಸಿಕೊಳ್ಳಬೇಕು.

ಸದ್ಯ ಮಹಾನಗರದ ನೀರು ಪೂರೈಕೆ ಮತ್ತು ನಿರ್ವಹಣೆ ಹೊಣೆಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ಹಸ್ತಾಂತರಿಸಿದ್ದರೂ,ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರು ಇಂದಿಗೂ ಕಂಪನಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಇದು ನೀರು ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹಾಗಾಗಿ, ನೌಕರರ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕಿದೆ.ಉಳಿದಂತೆ ಸರಾಗ ನೀರು ಪೂರೈಕೆ ಮತ್ತು ನಿರ್ವಹಣೆಗೆ ಪಾಲಿಕೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.

* ಈಗಾಗಲೇ ವಿಳಂಬವಾಗಿರುವ ನಿರಂತರ ನೀರು ಪೂರೈಕೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.

* ಪ್ರತಿ ತಿಂಗಳು ಅವಳಿನಗರದಲ್ಲಿ ವಿವಿಧ ಕಾರಣಗಳಿಗಾಗಿ ನೀರುಪೋಲಾಗುತ್ತಿದ್ದು, ಅದನ್ನು ತಡೆಯಲು ಕ್ರಮ ವಹಿಸಬೇಕು.

* ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಜೊತೆಗೆ, ಸಾರ್ವಜನಿಕರಿಗೂ ಪ್ರೋತ್ಸಾಹಿಸಬೇಕು.

* ನಗರದಲ್ಲಿ ನೀರಿನ ಕರ ಬಾಕಿ ಉಳಿಸಿಕೊಂಡಿರುವವರಿಂದ ಕರ ವಸೂಲಿಗೆ ಪಾಲಿಕೆ ಮುಂದಾಗಬೇಕು.

* ಹೊರವಲಯದ ಬಡಾವಣೆಗಳಿಗೂ ನೀರಿನ ಸಂಪರ್ಕ ಕಲ್ಪಿಸಿ, ಟ್ಯಾಂಕರ್ ನೀರಿನ ಅವಲಂಬನೆಯನ್ನು ತಗ್ಗಿಸಬೇಕು.

‘ನೀರು ನಿರ್ವಹಣಾ ಸಮಿತಿ ರಚನೆ’
ಎಲ್‌ ಆ್ಯಂಡ್‌ ಟಿ ಕಂಪನಿ, ಪಾಲಿಕೆ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಒಳಗೊಂಡ ಸಮಿತಿ ರಚನೆ ಪ್ರಕ್ರಿಯೆ ನಡೆಯುತ್ತಿದೆ.ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮಿತಿ ನಿರ್ಧಾರವೇ ಅಂತಿಮವಾಗಲಿದ್ದು, ಚುನಾವಣಾ ನೀತಿಸಹಿಂತೆ ಮುಗಿದ ನಂತರ ಅಂತಿಮಗೊಳಿಲಾಗುವುದು.ದೂರುಗಳನ್ನು ಪರಿಹರಿಸಲು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಎರಡು ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಲಾಗಿದೆ. ಇದರಲ್ಲಿ ಪಾಲಿಕೆ ಸದಸ್ಯರು, ಕಂಪನಿ, ಕೆಯುಡಿಎಫ್‌ಸಿ ಹಾಗೂ ಪಾಲಿಕೆಯ ಅಧಿಕಾರಿಗಳು ಇದ್ದಾರೆ. ನೀರು ಪೂರೈಕೆಯಲ್ಲಿ ಸಮಸ್ಯೆಯಾದರೆ ಸದಸ್ಯರು ಗ್ರೂಪ್‌ನಲ್ಲಿ ಗಮನಕ್ಕೆ ತರುತ್ತಿದ್ದು, ಕಂಪನಿಯವರು ಅದನ್ನು ಸರಿಪಡಿಸುತ್ತಿದ್ದಾರೆ.
– ಈರೇಶ ಅಂಚಟಗೇರಿ, ಮೇಯರ್, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ

‘ಜಲಮಂಡಳಿ ಮುಂದುವರಿಯಲಿ’
ಕುಡಿಯುವ ನೀರು ಪೂರೈಕೆಯ ಮಹತ್ವದ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಲಾಗಿದೆ. ಆದರೆ, ಇದರ ನಿರ್ವಹಣೆ ಹೇಗಿರಲಿದೆ, ಯಾವ ಷರತ್ತುಗಳನ್ನು ವಿಧಿಸಲಾಗಿದೆ ಹಾಗೂ ಒಪ್ಪಂದದಲ್ಲಿ ಯಾವ ಅಂಶಗಳಿವೆ ಎಂಬುದನ್ನು ಗೌಪ್ಯವಾಗಿರಿಸಲಾಗಿದೆ. ಈ ಬಗ್ಗೆ ಮುಕ್ತ ಚರ್ಚೆಗಳು ನಡೆದಿಲ್ಲ. ಇದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ನೀರು ಪೂರೈಕೆ ಮತ್ತು ಅದರ ನಿರ್ವಹಣೆ ಹೊಣೆಯನ್ನು ಮತ್ತೆ ಜಲಮಂಡಳಿಗೇ ನೀಡಬೇಕು.
–ವಿಕಾಸ ಸೊಪ್ಪಿನ, ಉಪಾಧ್ಯಕ್ಷ, ಎಎಪಿ

‘ಹೆಚ್ಚುವರಿ ಶುಲ್ಕವಿಲ್ಲ’
ನೀರು ಪೂರೈಕೆಗೆ ಸಂಬಂಧಿಸಿದಂತೆ ಜನರಿಂದ ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ. ಸಂಗ್ರಹಿಸುವ ಶುಲ್ಕ ಸರ್ಕಾರಕ್ಕೆ ಸೇರುತ್ತದೆ. ಸೇವೆ ಒದಗಿಸುವ ಸಂಸ್ಥೆಯಾಗಷ್ಟೇ ನಾವು ಕೆಲಸ ಮಾಡುತ್ತಿದ್ದೇವೆ.
– ಸತೀಶ್‌ ಯಾದವ್‌,ಎಲ್‌ ಆ್ಯಂಡ್‌ ಟಿ ಕಂಪನಿ ಅಧಿಕಾರಿ

‘ದಿಟ್ಟ ನಿಲುವು ಅಗತ್ಯ’
ಅವಳಿನಗರದ ನೀರು ಪೂರೈಕೆ ಮತ್ತು ನಿರ್ವಹಣೆಯನ್ನು ಯಾವುದೇ ಅನುಭವವಿಲ್ಲದ ಎಲ್ ಆ್ಯಂಡ್ ಟಿ ಕಂಪನಿಗೆ ಕೊಡಲಾಗಿದೆ. ಜಲಮಂಡಳಿಯ ಹೊರಗುತ್ತಿಗೆ ನೌಕರರ ಸಮಸ್ಯೆ ಬಗೆಹರಿಸಲು ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳಬೇಕು. ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
– ಪ್ರಸಾದ ಅಬ್ಬಯ್ಯ, ಶಾಸಕ

‘ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿ’
ಹೊರಗುತ್ತಿಗೆಯಡಿ ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಎಲ್‌ ಆ್ಯಂಡ್ ಟಿ ಕಂಪನಿಯಲ್ಲೂ ಹಿಂದಿನ ಪದ್ಧತಿಯಲ್ಲೇ ಕೆಲಸ ಮಾಡಬೇಕು. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕೌಶಲಯುಕ್ತ ಈ ನೌಕರರು ಉದ್ಯೋಗ ಕಳೆದುಕೊಳ್ಳುವ ಆತಂಕವೂ ಇಲ್ಲ. ಹಾಗಾಗಿ, ಅವರು ಕಂಪನಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಮುಂದುವರಿಯಬೇಕು.
– ಅರವಿಂದ ಬೆಲ್ಲದ, ಶಾಸಕ

ಹೊಣೆಗಾರಿಕೆ ಅಗತ್ಯ
ಎಷ್ಟು ವಾರ್ಡ್‌ಗಳಲ್ಲಿ 24X7 ನೀರು ಪೂರೈಕೆಯಾಗುತ್ತಿದೆ ಎಂಬುದರ ಕುರಿತು ಇಂದಿಗೂ ನಿಖರತೆ ಇಲ್ಲ. ಈ ವಿಷಯದಲ್ಲಿ ಪಾರದರ್ಶಕತೆ ಜೊತೆಗೆ ಹೊಣೆಗಾರಿಕೆ ಪ್ರದರ್ಶಿಸಬೇಕು. ಜಲಮಂಡಳಿಯ ಹೊರಗುತ್ತಿಗೆ ನೌಕರರಿಗೆ ಸರ್ಕಾರ ಉದ್ಯೋಗ ಭದ್ರತೆ ಒದಗಿಸಬೇಕು.
– ಸಂತೋಷ ನರಗುಂದ,ರಾಜ್ಯ ಮುಖ್ಯಸ್ಥ,ನಾಗರಿಕ ಸಹಭಾಗಿತ್ವ ಕಾರ್ಯಕ್ರಮ,ಜನಾಗ್ರಹ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT