ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಮಾವು ಇಳುವರಿಯಲ್ಲಿ ಶೇ 15 ರಷ್ಟು ಕಡಿಮೆ ಸಾಧ್ಯತೆ

ಜಿಲ್ಲೆಯಲ್ಲಿ ಹೂ ಬಿಡುವ ಸಮಯ ವಿಳಂಬ
Last Updated 5 ಫೆಬ್ರುವರಿ 2022, 7:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದ ಆಪೂಸ್, ಕಲ್ಮಿ ಮಾವಿನ ಹಣ್ಣುಗಳು ತಮ್ಮ ಸ್ವಾದಿಷ್ಟ ರುಚಿಯಿಂದಾಗಿ ಮಾವಿನ ಋತುವಿನಲ್ಲಿ ಜನರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಧಾರವಾಡ ಜಿಲ್ಲೆಯಲ್ಲಿ 8,400 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಕಳೆದ ವರ್ಷಕ್ಕಿಂತ ಶೇ 15ರಷ್ಟು ಫಸಲು ಕಡಿಮೆಯಾಗುವ ಸಾಧ್ಯತೆ ಕಂಡುಬಂದಿದೆ.

ಎರಡು ವರ್ಷಗಳಿಂದ ಬೆಳೆ ಬರುವ ಕಾಲದಲ್ಲಿ ಕೋವಿಡ್‌ ಲಾಕ್‌ಡೌನ್ ನಿಂದಾಗಿ ರೈತರು ಮಾವಿನ ಫಸಲನ್ನು ಸರಿಯಾದ ದರಕ್ಕೆ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಜತೆಗೆ ಬೆಳೆ ಬಂದ ಸಮಯದಲ್ಲಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಗೆ ಬಹಳಷ್ಟು ಕಡೆಗಳಲ್ಲಿ ಫಸಲು ನೆಲಕಚ್ಚಿತ್ತು.

2020 ಹಾಗೂ 2021ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಕ್ರಮವಾಗಿ 10,500 ಹಾಗೂ 8,500 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾವಿನ ಬೆಳೆ ಇತ್ತು. ಜಿಲ್ಲೆಯಲ್ಲಿ 2019 ರಲ್ಲಿ 87 ಸಾವಿರ ಟನ್, 2020ರಲ್ಲಿ 90 ಸಾವಿರ ಟನ್ ಹಾಗೂ 2021 ರಲ್ಲಿ 75 ಸಾವಿರ ಮೆಟ್ರಿಕ್‌ ಟನ್ ಮಾವು ಉತ್ಪಾದನೆಯಾಗಿತ್ತು.

ಎರಡು ವರ್ಷಗಳಿಗೂ ಮುನ್ನ ಜಿಲ್ಲೆಯಲ್ಲಿ ಇದಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಮಾವಿನ ಬೆಳೆ ಬೆಳೆಯಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಮಾವು ಬೆಳೆಯುವ ಪ್ರದೇಶ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ.

ಧಾರವಾಡ, ಹುಬ್ಬಳ್ಳಿ ಕಲಘಟಗಿ ಹಾಗೂ ಅಳ್ನಾವರಗಳಲ್ಲಿ ಮಾವಿನ ಬೆಳೆ ಹೆಚ್ಚು. ಕುಂದಗೋಳ ತಾಲ್ಲೂಕಿನಲ್ಲಿ ಛಬ್ಬಿಯಲ್ಲಿ ಮಾತ್ರ ಮಾವು ಬೆಳೆಯಲಾಗುತ್ತದೆ. ವಿಶೇಷವಾಗಿ ಶೇ 99ರಷ್ಟು ‘ಆಪೂಸ್‌’ ತಳಿಯ ಉತ್ಕೃಷ್ಟ ಗುಣಮಟ್ಟದ ಮಾವನ್ನು ಜಿಲ್ಲೆಯಲ್ಲಿ ಪ್ರಧಾನವಾಗಿ ಬೆಳೆಯಲಾಗುತ್ತದೆ. ಇಲ್ಲಿನ ಆಪೂಸ್‌ ಗೆ ಹೊರ ರಾಜ್ಯ, ವಿದೇಶಗಳಲ್ಲಿಯೂ ಬಹಳ ಬೇಡಿಕೆ. ಉಳಿದಂತೆ ಕಲ್ಮಿ, ಮಲ್ಲಿಕಾ ಮತ್ತಿತರ ತಳಿಗಳನ್ನು ಬೆಳೆಯಲಾಗುತ್ತದೆ.

***

ಈ ವರ್ಷ ಮಾವಿನ ಹೂ ಬಿಡುವ ಸಮಯ ಸ್ವಲ್ಪ ತಡವಾಗಿದೆ. ಹೀಗಾಗಿ ಶೆ 15ರಷ್ಟು ಫಸಲು ಕಡಿಮೆ ಬರಬಹುದು

-ಕಾಶಿನಾಥ ಭದ್ರಣ್ಣವರ, ಧಾರವಾಡ ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ

ಸದ್ಯದ ಹವಾಮಾನ ಉತ್ತಮ: ‘ನವೆಂಬರ್– ಡಿಸೆಂಬರ್‌ನಲ್ಲಿ ಸಾಮಾನ್ಯವಾಗಿ ಮಾವಿನ ಹೂ (ಕಸ್ತ್ರಿ) ಬಿಡಬೇಕಿತ್ತು. ಆದರೆ, ಈ ವರ್ಷ ಸ್ವಲ್ಪ ತಡವಾಗಿದೆ. ಮಳೆಯೂ ಹೆಚ್ಚಾದ ಪರಿಣಾಮ ಹವಾಮಾನ ವೈಪರೀತ್ಯದಿಂದ ತಡವಾಗಿ ಹೂ ಬಿಡುತ್ತಿದೆ. ಇದರಿಂದ ಕೊಂಚ ಬೆಳೆ ಕಡಿಮೆಯಾಗಲಿದೆ. ಸದ್ಯದ ಪರಿಸ್ಥಿತಿ ಮಾವಿನ ಬೆಳೆಗೆ ಅನುಕೂಲವಾಗಿದೆ. ಹೀಗಾಗಿ ಇರುವಷ್ಟು ಫಸಲು ಉತ್ತಮವಾಗಿಯೇ ಬರಬಹುದು. ಇನ್ನುಳಿದಂತೆ ಹವಾಮಾನ ವೈಪರೀತ್ಯ, ರೋಗಬಾಧೆ ಕಾಡಿದರೆ ಏನಾಗುತ್ತದೆಯೋ ಅಂದಾಜಿಸುವುದು ಕಷ್ಟ’ ಎನ್ನುತ್ತಾರೆ ಧಾರವಾಡ ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ.

‘ಎರಡು ವರ್ಷ ಕೋವಿಡ್ ಲಾಕ್‌ಡೌನ್‌ ಪರಿಸ್ಥಿತಿ ನಮ್ಮನ್ನೆಲ್ಲ ಹೈರಾಣ ಮಾಡಿತ್ರೀ... ಬೆಳೆ ಇದ್ರೂ ಮಾರಾಟ ಮಾಡಾಕ ಆಗಿರಲಿಲ್ಲ; ರೇಟು ಇರಲಿಲ್ಲ. ಈ ವರ್ಷ ನೋಡಬೇಕು; ದೇವರು ನಮ್ಮ ಕೈಬಿಡಾಂಗಿಲ್ಲ ಅಂದಕಂಡಿವ್ರೀ’ ಎನ್ನುತ್ತಾರೆ ನವಲೂರಿನ ರೈತ ಈರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT