ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ ಪಾಲಿಕೆ ಮೇಯರ್‌ ಸ್ಥಾನ: ಹೆಚ್ಚಿದ ಪೈಪೋಟಿ, ನಾಯಕರಿಗೆ ಸಂಕಷ್ಟ

Last Updated 28 ಜನವರಿ 2022, 3:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇದು ಮೇಯರ್‌, ಉಪಮೇಯರ್‌ ಅಭ್ಯರ್ಥಿಗಳ ಅಂತಿಮಗೊಳಿಸುವ ನಾಯಕರ ಸಂಕಷ್ಟ ಹೆಚ್ಚಿಸಿದೆ.

ಅವಳಿ ನಗರ ವ್ಯಾಪ್ತಿಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು ಬರುತ್ತದೆ. ವಿಧಾನಸಭೆ ಚುನಾವಣೆಗೆ 14 ತಿಂಗಳಷ್ಟೇ ಬಾಕಿ ಉಳಿದಿದೆ. ಮೂರು ವರ್ಷಗಳಿಂದ ಪಾಲಿಕೆಯಲ್ಲಿ ಅಧಿಕಾರಿಗಳೇ ಆಡಳಿತ ನಡೆಸಿದ್ದಾರೆ. ಅವಳಿ ನಗರಗಳಿಗೆ ಹೊಸ ಇಮೇಜ್‌ ನೀಡುವ ಅಭ್ಯರ್ಥಿಯ ಆಯ್ಕೆ ಮಾಡಬೇಕಾದ ಹೊಣೆ ನಾಯಕರ ಮೇಲಿದೆ.

ಮಾಜಿ ಮೇಯರ್‌ಗಳಾದ ವೀರಣ್ಣ ಸವಡಿ, ಶಿವು ಹಿರೇಮಠ, ಹಿರಿಯ ಸದಸ್ಯರಾದ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ವೀರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಮಲ್ಲಿಕಾರ್ಜುನ ಗುಂಡೂರು ಸೇರಿದಂತೆ ಹಲವರು ಮೇಯರ್‌ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿರುವ ರಾಜಣ್ಣ ಕೊರವಿ ಸಹ ಆಕಾಂಕ್ಷಿಯಾಗಿದ್ದಾರೆ.

ಈಗಾಗಲೇ ಮೇಯರ್‌ ಆಗಿರುವವರಿಗೆ ಮತ್ತೊಮ್ಮೆ ಅವಕಾಶ ನೀಡುವ ಬದಲು ಹೊಸಬರಿಗೆ ಅವಕಾಶ ನೀಡಬಹುದೇ? ಮೀಸಲಾತಿಯಡಿ ಆಯ್ಕೆಯಾದ ಕೆಲವು ಸದಸ್ಯರಿಗೆ ಮುಂದಿನ ದಿನಗಳಲ್ಲಿ ಅವಕಾಶ ಕೊಡಬಹುದೇ ಎಂಬ ಲೆಕ್ಕಾಚಾರಗಳೂ ಪಕ್ಷದ ಪಡಸಾಲೆಯಲ್ಲಿ ನಡೆದಿವೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ ಅವರು ಮೇಯರ್ ಅಭ್ಯರ್ಥಿ ಅಂತಿಮಗೊಳಿಸುವಲ್ಲಿ ಪ್ರಮುಖರಾಗಿರಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಹುಬ್ಬಳ್ಳಿಯವರಾದರೂ ಮೇಯರ್‌ ಆಯ್ಕೆಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚು ಎಂಬ ಮಾತು ಪಕ್ಷದ ಮುಖಂಡರಲ್ಲಿ ಕೇಳಿ ಬರುತ್ತಿದೆ.

ಹುಬ್ಬಳ್ಳಿಗೋ..ಧಾರವಾಡಕ್ಕೋ...: ಮೇಯರ್‌, ಉಪಮೇಯರ್ ಆಯ್ಕೆಯ ಪ್ರಶ್ನೆ ಬಂದಾಗಲೆಲ್ಲ ಹುಬ್ಬಳ್ಳಿ ಅವರನ್ನು ಮಾಡಬೇಕೇ? ಧಾರವಾಡದವರನ್ನು ಮಾಡಬೇಕೇ ಎಂಬ ಪ್ರಶ್ನೆ ಎದ್ದೇಳುತ್ತದೆ. ಅಧಿಕಾರ, ಅಭಿವೃದ್ಧಿಯಲ್ಲಿ ಸಮಾನ ಅವಕಾಶ ಸಿಗುವುದಿಲ್ಲ. ಪ್ರತ್ಯೇಕ ಪಾಲಿಕೆ ಮಾಡಬೇಕು ಎಂಬ ಕೂಗು ಆಗಾಗ ಕೇಳಿ ಬರುತ್ತಿರುವುದರಿಂದ ಅಲ್ಲಿಗೂ ಆದ್ಯತೆ ನೀಡಬೇಕಾಗಿದೆ.

ಉಪಮೇಯರ್‌ಗೆ ಪತಿಯಂದಿರ ಲಾಬಿ: ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪತ್ನಿಯನ್ನು ಉಪಮೇಯರ್‌ ಮಾಡಲು ಪಕ್ಷದೊಳಗಿನ ನಾಯಕರು ಸದ್ದಿಲ್ಲದೇ ಲಾಬಿ ನಡೆಸುತ್ತಿದ್ದಾರೆ.

ಮಾಜಿ ಮೇಯರ್‌ ರಾಧಾಭಾಯಿ ಸಫಾರೆ ಹೊರತುಪಡಿಸಿದರೆ ಉಳಿದವರೆಲ್ಲ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿದ್ದಾರೆ. ಮೀನಾಕ್ಷಿ ಒಂಟಮೂರಿ ಅವರು ಹುಡಾ ಸದಸ್ಯರಾಗಿರುವುದರಿಂದ ಉಪಮೇಯರ್ ಸ್ಥಾನವನ್ನೂ ನೀಡಲಿಕ್ಕಿಲ್ಲ ಎನ್ನಲಾಗುತ್ತಿದೆ.

ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸತೀಶ ಶೇಜವಾಡಕರ ಪತ್ನಿ ರುಕ್ಮಿಣಿ ಶೇಜವಾಡಕರ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಯ್ಯ ಹಿರೇಮಠ ಪತ್ನಿ ಶಾಂತಾ ಹಿರೇಮಠ ಪ‍ರವಾಗಿ ಪತಿಯಂದಿರು ಲಾಬಿ ನಡೆಸುತ್ತಿದ್ದಾರೆ. ಅವರಲ್ಲದೆ ಉಮಾ ಮುಕುಂದ, ರೂಪಾ ಶೆಟ್ಟಿ ಅವರ ಹೆಸರೂ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT