ಹುಬ್ಬಳ್ಳಿ: ಸಾರ್ವಜನಿಕರ ಅನುಕೂಲ ಹಾಗೂ ಸುಗಮ ಆಡಳಿತದ ಹಿತದೃಷ್ಟಿಯಿಂದ ಹುಬ್ಬಳ್ಳಿ– ಧಾರವಾಡ ನಗರಗಳಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ವೀರೇಶ ಧೂಪದಮಠ ಮನವಿ ಮಾಡಿದ್ದಾರೆ.
ಸದ್ಯ ಎರಡೂ ನಗರಗಳನ್ನು ಒಳಗೊಂಡಂತೆ ಒಂದೇ ಮಹಾನಗರ ಪಾಲಿಕೆ ಇದೆ. ಆದರೆ ಹುಬ್ಬಳ್ಳಿ ಹಾಗೂ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಿದರೆ ಸಾರ್ವಜನಿಕರು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕಚೇರಿಗೆ ತೆರಳಿ ಕೆಲಸ, ಕಾರ್ಯಗಳನ್ನು ಬೇಗ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಸರ್ಕಾರದ ನಿಯಮಾನುಸಾರ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಬಹುದು. ಪ್ರತ್ಯೇಕ ಪಾಲಿಕೆ ಮಾಡದಿದ್ದರೆ ಸದ್ಯದ ಮಟ್ಟಿಗೆ ಧಾರವಾಡವನ್ನು ನಗರಸಭೆಯನ್ನಾದರೂ ಮಾಡಬೇಕು. ಕೆಲ ವರ್ಷಗಳ ಬಳಿಕ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.