ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ ಸ್ಥಿತಿಯಲ್ಲಿ ಹುಬ್ಬಳ್ಳಿ–ಧಾರವಾಡ ಜಲಮಂಡಳಿ ನೌಕರರು

ಕಾಯಂ ಮಾಡಿಕೊಳ್ಳಲು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸರ್ಕಾರ ಹಿಂದೇಟು
Last Updated 11 ಜೂನ್ 2022, 6:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸ್ಥಿತಿ ಅಕ್ಷರಶಃ ಆಧುನಿಕ ಜೀತ ಪದ್ಧತಿಯಂತಿದೆ. ಮುಂದೊಂದು ದಿನ ಈ ಕೆಲಸ ಕಾಯಂ ಆಗಲಿದೆ ಎಂಬ ಕನಸು ಹೊತ್ತು ಹೊರಗುತ್ತಿಗೆ ನೌಕರರಾಗಿ ಕೆಲಸಕ್ಕೆ ಸೇರಿಕೊಂಡವರು, ಇದೀಗ ಅದರಿಂದ ಹೊರಬರಲಾಗದೆ ಘನತೆಯ ಬದುಕು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ.

ಇದರ ಮಧ್ಯೆಯೇ ಅವಳಿನಗರದ ನೀರು ಪೂರೈಕೆಯ ಹೊಣೆಯನ್ನು ಜಲಮಂಡಳಿಯಿಂದ ಎಲ್‌ ಆ್ಯಂಡ್‌ ಟಿ ಕಂಪನಿಗೆ ವಹಿಸಲಾಗಿದೆ. ಬದುಕಿಗೆ ಆಸರೆಯಾಗಿರುವ ಈ ಕೆಲಸವು ಕಂಪನಿ ಮೇಲ್ವಿಚಾರಣೆಯಲ್ಲಿ ಯಾವಾಗ ಬೇಕಾದರೂ ಕೈ ತಪ್ಪಬಹುದು ಎಂಬ ಆತಂಕ ನೌಕರರಲ್ಲಿದೆ. ಹಾಗಾಗಿಯೇ, ಕೆಲಸದ ಭದ್ರತೆಗೆ ಆಗ್ರಹಿಸಿ ಏಪ್ರಿಲ್‌ನಲ್ಲಿ ಒಂದು ವಾರ ಕರ್ತವ್ಯ ಬಹಿಷ್ಕರಿಸಿದ್ದರು. ಇದು ನೀರಿನ ಹಾಹಾಕಾರವನ್ನು ಸೃಷ್ಟಿಸಿತ್ತು.

2003ರಲ್ಲಿ ನೇಮಕ

ಹಿಂದೆ ಮಹಾನಗರದ ನೀರು ಪೂರೈಕೆ ಮತ್ತು ನಿರ್ವಹಣೆಯ ಹೊಣೆಯನ್ನು ಪಾಲಿಕೆಯೇ ಹೊತ್ತಿತ್ತು. 2003ರಲ್ಲಿ ಅಸ್ತಿತ್ವಕ್ಕೆ ಬಂದ ಜಲಮಂಡಳಿ, ಕನಿಷ್ಠ ವೇತನದಡಿ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಂಡು ಕಾರ್ಯಾಚರಣೆ ಆರಂಭಿಸಿತು. ‘ಸಮಾನ ಕೆಲಸಕ್ಕೆ ಸಮಾನ ವೇತನ’ಕ್ಕೆ ಹೋಲಿಸಿದರೆ ಇಲ್ಲಿನ ನೌಕರರು ಶೇ 30ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ.

‘ಗುತ್ತಿಗೆ ಪದ್ಧತಿಯಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವವರು ಹಾಗೂ ಕಾರ್ಮಿಕರನ್ನು ಪೂರೈಸುವ ಗುತ್ತಿಗೆದಾರರು ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಆಗ ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯಗಳು ಸಿಗುತ್ತವೆ. ಆದರೆ, ಜಲಮಂಡಳಿ ವಿಷಯದಲ್ಲಿ ಎಲ್ಲವೂ ತದ್ವಿರುದ್ಧವಾಗಿದೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದ ಅಧ್ಯಕ್ಷ ವಿ.ಎನ್. ಹಳಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘2006ರಲ್ಲಿ ರಾಜ್ಯ ಸರ್ಕಾರ ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಿದರೂ ಜಲಮಂಡಳಿಯಲ್ಲಿ ಅದು ಕಾರ್ಯರೂಪಕ್ಕೆ ಬರಲಿಲ್ಲ. ನಗರಾಭಿವೃದ್ಧಿ ಇಲಾಖೆಯ ಅಧೀನದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಸರ್ಕಾರದ ಆದೇಶವೂ ಜಾರಿಯಾಗಿಲ್ಲ. ಅವಳಿನಗರದಲ್ಲಿ 2003ರಿಂದ 2015ರವರೆಗೆ ವಿವಿಧ ಹುದ್ದೆಗಳಲ್ಲಿ 478 ನೌಕರರಿದ್ದರು. ನಂತರದ ವರ್ಷಗಳಲ್ಲಿ 138 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಟ್ಟು 616 ನೌಕರರು ಇದ್ದಾರೆ. ಅವರ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ’ ಎಂದರು.

ಮೈಸೂರು ಮಾದರಿ ಅನುಸರಿಸಲು ಆಗ್ರಹ

ಮೈಸೂರಿನ ಜಲಮಂಡಳಿಯಲ್ಲಿ ಇದೇ ರೀತಿಯ ಸಮಸ್ಯೆ ತಲೆದೋರಿದಾಗ, ಕನಿಷ್ಠ ವೇತನದ ಬದಲು ಸಮಾನ ಕೆಲಸಕ್ಕೆ ಸಮಾನ ವೇತನದಡಿ ಸಂಬಳ ಪಾವತಿಸಲು ಒಪ್ಪಲಾಯಿತು. ಇದೀಗ ಪಾಲಿಕೆಯೇ ಅಲ್ಲಿ ಉದ್ಯೋಗದಾತ ಹಾಗೂ ಸಂಬಳ ಪಾವತಿಸುವ ಸಂಸ್ಥೆಯಾಗಿದೆ.

‘ಹುಬ್ಬಳ್ಳಿ–ಧಾರವಾಡದ ನೌಕರರಿಗೂ ಮೈಸೂರು ಮಾದರಿಯಲ್ಲಿ ವೇತನ ನೀಡುವಂತೆ 2012ರಲ್ಲಿ ಪಾಲಿಕೆಯ ಸಾಮಾನ್ಯ ಸಭೆ ಠರಾವು ಪಾಸು ಮಾಡಿತ್ತು. ಪೂರಕವಾಗಿ, 2015ರಲ್ಲಿ ಅಂದಿನ ಪಾಲಿಕೆ ಆಯುಕ್ತರು ನೌಕರರ ವಿವರ ಹಾಗೂ ವೇತನದ ವ್ಯತ್ಯಾಸದಲ್ಲಾಗುವ ವಿವರವನ್ನೊಳಗೊಂಡ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿದ್ದರು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರಿಂದ ಸಮಸ್ಯೆ ಬಿಗಡಾಯಿಸಿದೆ. ಈಗಲೂ ಪಾಲಿಕೆ ನೌಕರರೆಂದು ಪರಿಗಣಿಸಿದರೆ, ಎಲ್‌ ಆ್ಯಂಡ್ ಟಿ ಕಂಪನಿಯಲ್ಲಿ ನೌಕರರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸಿದ್ಧರಿದ್ದಾರೆ’ ಎನ್ನುತ್ತಾರೆ ವಿ.ಎನ್. ಹಳಕಟ್ಟಿ.

ಚೆಂಡು ಸರ್ಕಾರದ ಅಂಗಳಕ್ಕೆ

ಹೊರಗುತ್ತಿಗೆ ನೌಕರರ ಬೇಡಿಕೆಗೆ ಸಂಬಂಧಿಸಿದ ಚೆಂಡು ಇದೀಗ ಸರ್ಕಾರದ ಅಂಗಳದಲ್ಲಿದೆ. ನೀರು ಪೂರೈಕೆ ಮತ್ತು ನಿರ್ವಹಣೆ ಹೊಣೆ ಹೊತ್ತಿರುವ ಕಂಪನಿಯಲ್ಲಿ ಎರಡು ವರ್ಷ ಕೆಲಸ ಮಾಡಿದ ಬಳಿಕ, ನೌಕರರನ್ನು ಪಾಲಿಕೆಗೆ ವರ್ಗಾಯಿಸಲಾಗುತ್ತದೆ ಎಂಬ ಅಧಿಕಾರಿಗಳ ಭರವಸೆಯನ್ನು ನಂಬಲು ಸಿದ್ಧರಿಲ್ಲದ ನೌಕರರು, ತಿಂಗಳಾದರೂ ಕಂಪನಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಪರ್ಯಾಯ ಮಾರ್ಗವಿಲ್ಲದ ಪಾಲಿಕೆ ನೌಕರರ ಸಂಘದೊಂದಿಗೆ ಇದುವರೆಗೆ ಸರಣಿ ಸಭೆ ನಡೆಸಿದರೂ ಫಲಪ್ರದವಾಗಿಲ್ಲ.

‘ಜಲಮಂಡಳಿಯಿಂದ ನೇಮಕವಾದ ಹೊರಗುತ್ತಿಗೆ ನೌಕರರು ಎಲ್ ಆ್ಯಂಡ್ ಟಿ ಕಂಪನಿಯಡಿ 2 ವರ್ಷ ಕೆಲಸ ಮಾಡುವಂತೆ ಕೋರ್ಟ್ ಆದೇಶಿಸಿದೆ. ನಂತರ, ಪಾಲಿಕೆಗೆ ವಾಪಸ್ಸಾಗುವ ಅವರಿಗೆ ಲಭ್ಯವಿರುವ ಹುದ್ದೆಯಲ್ಲಿ ಮುಂದುವರಿಸಲು ಅವಕಾಶ ನೀಡಿದೆ. ಆದರೆ, ನೌಕರರು ಪಾಲಿಕೆಯೇ ವೇತನ ನೀಡಲಿ ಎನ್ನುತ್ತಿದ್ದಾರೆ. ಈ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು’ ಎನ್ನುತ್ತಾರೆ ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT