ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಟ್ರಾನ್ಸ್‌ಫಾರ್ಮರ್‌ ಅವ್ಯವಸ್ಥೆಗೆ ಬಳಲಿದ ರೈತ!

ತನ್ನ ಖರ್ಚಿನಲ್ಲಿ ಪಂಪ್‌ಸೆಟ್‌ ಅಳವಡಿಕೆ ಸ್ಥಗಿತಗೊಳಿಸಿದ ಸರ್ಕಾರ
Published : 5 ಆಗಸ್ಟ್ 2024, 5:10 IST
Last Updated : 5 ಆಗಸ್ಟ್ 2024, 5:10 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಹೊಸದಾಗಿ ಕೃಷಿ ಪಂಪ್‌ಸೆಟ್‌ ಅಳವಡಿಸುವುದನ್ನು ಸ್ಥಗಿತಗೊಳಿಸಿರುವ  ಸರ್ಕಾರ ಒಂದೆಡೆಯಾದರೆ, ಕೆಟ್ಟುಹೋಗಿರುವ ಹಳೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಲು ಹೆಸ್ಕಾಂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ರೈತರು ತೀವ್ರ ಕಷ್ಟ ಎದುರಿಸುತ್ತಿದ್ದಾರೆ. ಇದು ಕೇವಲ ರೈತರ ಜೀವನದ ಮೇಲಲ್ಲದೇ ಕೃಷಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯ ತಂದೊಡ್ಡಿದೆ.

ಕಳೆದ ವರ್ಷಕ್ಕಿಂತ ಮುಂಚೆ ಸರ್ಕಾರವೇ ರೈತರ ಜಮೀನುಗಳಲ್ಲಿ ನೀರಾವರಿ ಪಂಪ್‌ಸೆಟ್‌ ಅಳವಡಿಸುತ್ತಿತ್ತು. ಇದಕ್ಕಾಗಿ ಬೇಕಾದ ವಿದ್ಯುತ್‌ ತಂತಿ, ಕಂಬ, ಟ್ರಾನ್ಸ್‌ಫಾರ್ಮರ್‌ಗಳನ್ನು ಪೂರೈಸುತ್ತಿತ್ತು. 5–6 ಪಂಪ್‌ಸೆಟ್‌ಗಳಿಗೆ ಒಂದರಂತೆ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿತ್ತು. ಹೀಗಾಗಿ ಗುಣಮಟ್ಟದ ವಿದ್ಯುತ್‌ ದೊರಕುತ್ತಿತ್ತು, ಹೊಲಗಳಿಗೆ ನೀರು ಹಾಯಿಸಲು ಸಾಕಷ್ಟು ಅನುಕೂಲವಾಗಿತ್ತು. ಇದರಿಂದಾಗಿ ಕೃಷಿ ಉತ್ಪಾದನೆ ಹೆಚ್ಚಾಗಿ ರೈತರಿಗೆ ನೆರವಾಗಿತ್ತು.

ಕೃಷಿ ಪಂಪ್‌ಸೆಟ್‌ ಅಳವಡಿಸಲು ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರವು ಕಳೆದ ವರ್ಷ ಜುಲೈ ತಿಂಗಳಲ್ಲಿ ಆದೇಶ ಹೊರಡಿಸಿದೆ. ರೈತರು ಸ್ವಂತ ಖರ್ಚಿನಲ್ಲಿ ಪಂಪ್‌ಸೆಟ್‌ ಹಾಗೂ ಟ್ರಾನ್ಸ್‌ಫಾರ್ಮರ್‌ ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದೆ. ಇದಕ್ಕೆ ಪರ್ಯಾಯವಾಗಿ ಸೋಲಾರ್‌ (ಸೌರಶಕ್ತಿ) ಬಳಸಿಕೊಳ್ಳಲು ಪ್ರೋತ್ಸಾಹ ನೀಡಲು ಆರಂಭಿಸಿದೆ. ಈ ಮೊದಲು ಶೇ 50ರಷ್ಟಿದ್ದ ಸಬ್ಸಿಡಿಯನ್ನು ಶೇ 80ಕ್ಕೆ ಹೆಚ್ಚಿಸಿದೆ. ಕೇವಲ ಶೇ 20ರಷ್ಟು ವೆಚ್ಚವನ್ನು ಫಲಾನುಭವಿಗಳು ಭರಿಸಿದರೆ ಇನ್ನುಳಿದ ವೆಚ್ಚವನ್ನು ತಾನೇ ಭರಿಸುವುದಾಗಿ ಸರ್ಕಾರ ಹೇಳಿದೆ.

ರೈತರ ಆಕ್ರೋಶ:

ಕೃಷಿ ಪಂಪ್‌ಸೆಟ್‌ ಅಳವಡಿಸಲು ನಿರಾಕರಿಸಿರುವ ಸರ್ಕಾರದ ವಿರುದ್ಧ ಹಾಗೂ ಹಳೆಯ ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ಹೆಸ್ಕಾಂ ಅಧಿಕಾರಿಗಳು ತೋರುತ್ತಿರುವ ವಿಳಂಬದ ವಿರುದ್ಧ  ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ವಾಪಸ್‌ ಪಡೆಯಬೇಕು ಹಾಗೂ ಈ ಮೊದಲು ಇದ್ದಂತೆ ಹೊಸದಾಗಿ ಪಂಪ್‌ಸೆಟ್‌ ಅಳವಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಇಂಧನ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದುವರೆಗೆ ಸರ್ಕಾರ ಸ್ಪಂದಿಸಿಲ್ಲ. 

ಅನಗತ್ಯ ಹೊರೆ:

ರೈತರೇ ಸ್ವಂತ ಹಣ ಹಾಕಿ ಪಂಪ್‌ಸೆಟ್‌ ಅಳವಡಿಸಲು ಮುಂದಾದರೆ, ಅಂದಾಜು ₹ 2 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಬೇಕಾಗಿದೆ. ಒಂದು ವರ್ಷದೊಳಗೆ ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋದರೆ, ಪುನಃ ರೈತರೇ ಹಣ ಹಾಕಿ, ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಳ್ಳಬೇಕಾಗಿದೆ. ಸಣ್ಣ ಹಾಗೂ ಮಧ್ಯಮ ರೈತರಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದೆ.

ಹಳೆಯ ಟ್ರಾನ್ಸ್‌ಫಾರ್ಮರ್‌ಗಳ ಕತೆ:

ಪ್ರಸ್ತುತ ಹುಬ್ಬಳ್ಳಿ ನಗರದಲ್ಲಿ 4,015, ಹುಬ್ಬಳ್ಳಿ ಗ್ರಾಮೀಣದಲ್ಲಿ 4,929, ಧಾರವಾಡ ನಗರದಲ್ಲಿ 2,305, ಧಾರವಾಡ ಗ್ರಾಮೀಣದಲ್ಲಿ 8,591 ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು 19,840 ಟ್ರಾನ್ಸ್‌ಫಾರ್ಮರ್‌ಗಳಿವೆ. ಇವುಗಳಲ್ಲಿ ಕೆಲವು ಆಗಾಗ, ದುರಸ್ತಿಗೆ ಬರುತ್ತಿವೆ. ಸುಟ್ಟುಹೋದ  ಉದಾಹರಣೆಗಳೂ ಇವೆ.

ಈಗಾಗಲೇ ಚಾಲ್ತಿಯಲ್ಲಿರುವ ಹಳೆಯ ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟುಹೋದಾಗ ಹೆಸ್ಕಾಂ ಅಧಿಕಾರಿಗಳು ಸಮಯಕ್ಕ ಸರಿಯಾಗಿ ಬಂದು ದುರಸ್ತಿ ಮಾಡುತ್ತಿಲ್ಲ. ಸಂಪೂರ್ಣ ಸುಟ್ಟುಹೋಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ನಿಗದಿತ ಸಮಯದೊಳಗೆ ಬದಲಾಯಿಸಿ ಕೊಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿದ್ದರೆ ನಗರ ಪ್ರದೇಶಗಳಲ್ಲಿ 24 ತಾಸಿನೊಳಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 72 ತಾಸಿನೊಳಗೆ ಬದಲಾಯಿಸಬೇಕೆನ್ನುವ ನಿಯಮ ಇದ್ದರೂ ಹೆಸ್ಕಾಂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಸಾಕಷ್ಟು ವಿಳಂಬ ಮಾಡುತ್ತಾರೆ. 8–10 ದಿನ ವಿಳಂಬ ಮಾಡಿದರೆ, ಆ ಅವಧಿಯಲ್ಲಿ ಬೆಳೆಗಳಿಗೆ ಸಮರ್ಪಕ ನೀರು ಸಿಗುವುದಿಲ್ಲ. ಅವು ನಾಶವಾಗಿ ಹೋಗುತ್ತವೆ. ಅದಕ್ಕಾಗಿ ಅನಿವಾರ್ಯವಾಗಿ ಲಂಚ ನೀಡಿ, ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಳ್ಳುತ್ತಾರೆ ಎಂದು ರೈತ ಮುಖಂಡ ಗಂಗಾಧರ ಪಾಟೀಲಕುಲಕರ್ಣಿ ದೂರುತ್ತಾರೆ.

ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೃಷಿ ಪಂಪ್‌ಸೆಟ್‌ ಹಾಗೂ ಟ್ರಾನ್ಸ್‌ಫಾರ್ಮರ್‌ ಅಳವಡಿಸಬೇಕೆಂದು ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿದೆ. ಈ ಆದೇಶವನ್ನು ಪುನರ್‌ಪರಿಶೀಲಿಸುವಂತೆ ರೈತ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ

– ನಾಗಪ್ಪ ಸೂಪರಿಟೆಂಡೆಂಟ್‌ ಎಂಜಿನಿಯರ್‌ (ಎಲೆಕ್ಟ್ರಿಕಲ್‌)

ರಾಜ್ಯ ಸರ್ಕಾರ ಕೂಡಲೇ ತನ್ನ ಆದೇಶವನ್ನು ವಾಪಸ್‌ ಪಡೆದು ಈ ಮೊದಲಿದ್ದಂತೆ ತನ್ನ ವೆಚ್ಚದಲ್ಲಿ ಕೃಷಿ ನೀರಾವರಿ ಪಂಪ್‌ ಸೆಟ್‌ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿಕೊಡಬೇಕು.

– ಗಂಗಾಧರ ಪಾಟೀಲಕುಲಕರ್ಣಿ ರೈತ ಮುಖಂಡ

ಟಿ.ಸಿ ಅಳವಡಿಕೆಗೆ ವಿಳಂಬ ಧೋರಣೆ

ಧಾರವಾಡ: ಲೋಡ್‌ ಜಾಸ್ತಿಯಾಗಿ ಆಯಿಲ್‌ ಖಾಲಿಯಾಗಿ ನಿರ್ವಹಣೆ ಕೊರತೆಯಿಂದಾಗಿ ಟ್ರಾನ್ಸ್‌ಫಾರ್ಮರ್‌ಗಳು (ಟಿ.ಸಿ) ಹಾಳಾಗುತ್ತವೆ. ಟಿ.ಸಿ ರಿಪೇರಿ ಅಥವಾ ಹೊಸದನ್ನು ಅಳವಡಿಸುವ ನಿಟ್ಟಿನಲ್ಲಿ ಹೆಸ್ಕಾಂ ಸಿಬ್ಬಂದಿ ರೈತರನ್ನು ಅಲೆದಾಡಿಸುತ್ತಾರೆಂಬ ದೂರುಗಳು ಇವೆ. ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೆಚ್ಚು ಇದೆ. ಟಿ.ಸಿ ಹಾಳಾದರೆ ಅದರ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾಗುತ್ತದೆ. ಅಲ್ಲಿನ ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸಲ್ಲ. ಟಿ.ಸಿ ಹಾಳಾಗುವ ಸಮಸ್ಯೆಗಳು ಬೇಸಿಗೆಯಲ್ಲಿ ಹೆಚ್ಚು. ಹಾಳಾದ ಟಿ.ಸಿ ಯನ್ನು ಬದಲಾಯಿಸಿ ಇಂತಿಷ್ಟು ದಿನಗಳೊಳಗೆ ಹೊಸದನ್ನು ಅಳವಡಿಸಬೇಕು ಎಂದು ಮಾರ್ಗಸೂಚಿ ಇದೆ. ಆದರೆ ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಜೇಷ್ಠತೆ ನೆವದಲ್ಲಿ ವಿಳಂಬ ಮಾಡಲಾಗುತ್ತದೆ ಎಂದು ರೈತರು ಹೇಳುತ್ತಾರೆ. ಕೃಷಿ ಪಂಪ್‌ಸೆಟ್‌ ಕಾರ್ಯನಿರ್ವಹಿಸದಿದ್ದರೆ ರೈತರು ಬೆಳೆಗಳಿಗೆ ನೀರು ಹಾಯಿಸಲಾಗದು. ಹೊಸ ಟಿ.ಸಿ ಅಳವಡಿಸಲು ತಿಂಗಳುಗಟ್ಟಲೇ ತಡ ಮಾಡಿದರೆ ಬೆಳೆ ಒಣಗುತ್ತವೆ. ಬೆಳೆ ನಷ್ಟವಾಗುತ್ತದೆ. ‘ಹಾಳಾದ ಟಿ.ಸಿ.ಯನ್ನು ರೈತರೇ ಹೆಸ್ಕಾಂ ಕಚೇರಿಗೆ ಒಯ್ದಿಟ್ಟು ಅಲ್ಲಿಂದ ಹೊಸದನ್ನು ರೈತರೇ ಒಯ್ಯಬೇಕು. ಟಿ.ಸಿ ನೀಡಲು ವಿಳಂಬ ಮಾಡುತ್ತಾರೆ. ಕೆಲವರು ಕಮಿಷನ್‌ ಕೇಳುತ್ತಾರೆ. ಟಿ.ಸಿ ಹಾಳಾದ ಹೊಸದನ್ನು ತಕ್ಷಣ ಅಳವಡಿಸಲು ಕ್ರಮ ವಹಿಸಲ್ಲ’ ಎನ್ನುತ್ತಾರೆ ರೈತ ಮುಖಂಡ ಶಂಕರಪ್ಪ ಅಂಬಲಿ. ಕೆಲವೆಡೆ ಹಳೆಯ ಟಿ.ಸಿ.ಗಳು ಇವೆ. ನಿರ್ವಹಣೆ ಕೊರತೆ ಇದೆ. ಹೆಸ್ಕಾಂನವರು ನಿಗಾ ವಹಿಸಬೇಕು. ಟಿ.ಸಿ ರಿಪೇರಿ ಹೊಸದನ್ನು ಅಳವಡಿಸುವ ನಿಟ್ಟಿನಲ್ಲಿ ತಕ್ಷಣ ಸ್ಪಂದಿಸಬೇಕು ಎಂದು ರೈತರು ಒತ್ತಾಯಿಸುತ್ತಾರೆ.

‘ಅಧಿಕಾರಿಗಳು ಸ್ಪಂದಿಸಲಿ’

ಉಪ್ಪಿನಬೆಟಗೇರಿ: ಟ್ರಾನ್ಸ್‌ಫಾರ್ಮರ್‌ಗಳು ದುರಸ್ತಿಗೆ ಬಂದಾಗ ಹೆಸ್ಕಾಂ ಸಿಬ್ಬಂದಿ ತಕ್ಷಣ ಸ್ಪಂದಿಸುವುದಿಲ್ಲ. ಆಗ ರೈತರೆಲ್ಲರೂ ಸೇರಿ ವಂತಿಗೆ ಹಾಕಿ ಖಾಸಗಿ ವ್ಯಕ್ತಿಗಳಿಂದ ರಿಪೇರಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ  ಇದೆ ಎಂದು ರೈತ ಈರಣ್ಣ ಹೆಬ್ಬಳ್ಳಿ ತಿಳಿಸಿದರು. ಧಾರವಾಡ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ 33/11ಕೆವಿ ಉಪ್ಪಿನಬೆಟಗೇರಿ ವಿದ್ಯುತ್ ವಿತರಣಾ ಸಾಮರ್ಥ್ಯ ಹೊಂದಿರುವ ಗ್ರೀಡ್ ಇದೆ. ಇದರ ವ್ಯಾಪ್ತಿಯಲ್ಲಿ 800 ಟ್ರಾನ್ಸ್‌ಫಾರ್ಮರ್‌ಗಳಿವೆ. ಜಮೀನುಗಳಿಗೆ ನೀರು ಹಾಯಿಸಲು ವಿದ್ಯುತ್‌ ಪೂರೈಕೆ ಮಾಡಲು ಇವುಗಳ ಅಗತ್ಯತೆ ಇದೆ. ಇವು ದುರಸ್ತಿಗೆ ಬಂದಾಗ ಹೆಸ್ಕಾಂ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಸ್ಥಳಾಂತರಗೊಳ್ಳದ ಟ್ರಾನ್ಸ್‌ಫಾರ್ಮರ್‌

ಕುಂದಗೋಳ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸಮಸ್ಯೆ ಕೆಲವು ಭಾಗಗಳಲ್ಲಿ  ಕಂಡು ಬಂದಿದೆ. ಅನೇಕ ವರ್ಷಗಳಿಂದ ಬೇರೆಡೆ ಸ್ಥಳಾಂತರಿಸಲು ಮನವಿ ಸಲ್ಲಿಸಿದರೂ ಹೆಸ್ಕಾಂ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ದೂರಿದರು. ಪಟ್ಟಣದ ದರ್ಗಾ ಓಣಿ ಹತ್ತಿರದ ವಿದ್ಯಾಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಬಳಿ ಟ್ರಾನ್ಸ್‌ಫಾರ್ಮರ್‌ ಇರುವುದರಿಂದ ಮಕ್ಕಳಿಗೆ ಅಪಾಯವಾಗುತ್ತದೆ. ಇದನ್ನು ಬೇರೆಡೆ ಸ್ಥಳಾಂತರಿಸಿ ಕೊಡಿ ಎಂದು ಇಲ್ಲಿನ ನಾಗರಿಕರು ಹಾಗೂ ಶಾಲೆಯವರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.  ಇದುವರೆಗೂ ಸ್ಥಳಾಂತಗೊಂಡಿಲ್ಲ. ಅದರಂತೆ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ಇದೆ ರೀತಿ ಸಮಸ್ಯಯಿದೆ. ತಾಲ್ಲೂಕಿನಲ್ಲಿ ಬಹುತೇಕ ಕಡೆಗೆ ಟ್ರಾನ್ಸ್‌ಫಾರ್ಮರ್‌ಗಳಿಗೆ ಸುತ್ತಲೂ ತಂತಿ ಬೇಲಿ ಹಾಕಿರುವುದಿಲ್ಲ. ಇದರಿಂದ ದನಕರುಗಳಿಗೆ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಇನ್ನೂ ಕೆಲವು ಕಡೆ ಟ್ರಾನ್ಸ್‌ಫಾರ್ಮರ್‌ಗಳಿಗೆ ಬಳ್ಳಿ ಹಬ್ಬಿಕೊಂಡಿದ್ದು ಸಮರ್ಪಕ ನಿರ್ವಹಣೆ ಇಲ್ಲದಿರುವುದು ಕಂಡುಬಂದಿದೆ. 

ವಂತಿಗೆ ಹಾಕಿ ದುರಸ್ತಿ

ಗುಡಗೇರಿ: ಗ್ರಾಮದ ಸುತ್ತಮುತ್ತ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ದುಸ್ಥಿತಿಯಲ್ಲಿವೆ. ತಂತಿ ಬೇಲಿ ಹಾಕಿಲ್ಲ ಇದರಿಂದಾಗಿ ಜಾನುವಾರುಗಳಿಗೆ ಅಪಾಯವಿದೆ. ಸಣ್ಣ ಪುಟ್ಟ ದುರಸ್ತಿಗೆ   ತಾವೇ ವಂತಿಕೆ ಹಾಕಿ ಮಾಡಿಸಿಕೊಳ್ಳುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೆಟ್ಟು ಹೋಗಿರುವ ಟ್ರಾನ್ಸ್‌ಫಾರ್ಮರ್‌ಗಳ ಬಗ್ಗೆ ಹೆಸ್ಕಾಂ ಅಧಿಕಾರಿಗಳಿ ತಿಳಿಸಿದರೆ ನಮ್ಮ ಬಳಿ ಸಾಮಗ್ರಿಗಳು ಲಭ್ಯವಿಲ್ಲ ಎನ್ನುತ್ತಾರೆ. ಅನಿವಾರ್ಯವಾಗಿ ನಾವೇ ವಂತಿಕೆ ಹಾಕಿ ಸಾಮಗ್ರಿಗಳನ್ನು ತಂದುಕೊಟ್ಟ ಬಳಿಕ ಹಾಕುತ್ತಾರೆ ಎಂದು ರೈತರು ಹೇಳಿದರು.

ಟ್ರಾನ್ಸ್‌ಫಾರ್ಮರ್‌ಗಳ ಸ್ಥಿತಿ ಗತಿ

ಧಾರವಾಡ ಜಿಲ್ಲೆಯಲ್ಲಿರುವ ಒಟ್ಟು ಟ್ರಾನ್ಸ್‌ಫಾರ್ಮರ್‌ಗಳ ಸಂಖ್ಯೆ;19840 ಅಪಾಯಕಾರಿ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಸಂಖ್ಯೆ;142 ಕಳೆದ 1ವರ್ಷದಲ್ಲಿ ಬದಲಾಯಿಸಿದ ಟ್ರಾನ್ಸ್‌ಫಾರ್ಮರ್‌ಗಳ ಸಂಖ್ಯೆ;72 ಈಗ ಟ್ರಾನ್ಸ್‌ಫಾರ್ಮರ್‌ ಬದಲಾಯಿಸುವಂತೆ ಕೋರಿರುವವರ ಸಂಖ್ಯೆ;21

ಪೂರಕ ಮಾಹಿತಿ: ಧನ್ಯಪ್ರಸಾದ್‌ ಬಿ.ಜೆ., ರಮೇಶ ಓರಣಕರ, ಬಸವರಾಜ ಗುಡ್ಡದಕೇರಿ, ವಾಸುದೇವ ಮುರಗಿ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT