ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಾರ್ಕಲ್‌ ಕಾರ್ಖಾನೆ ಅಗ್ನಿ ದುರಂತ: ‘ನಮ್ಮನ್ನ ಅನಾಥರಾಗಿಸಿ ಹೋಗ್ಯಾಳ....’

ಸ್ಥಳಕ್ಕೆ ಸಚಿವ ಹಾಲಪ್ಪ ಆಚಾರ್‌ ಭೇಟಿ
Last Updated 25 ಜುಲೈ 2022, 4:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದಿನಕ ಎರಡನೂರ್ ರೂಪಾಯಿ ಕೊಡ್ತೀವಿ ಅಂದಿದ್ರಂತೆ, ಅದಕ್ಕ ನೂರೈವತ್ತ ರೂಪಾಯಿ ಕೊಡೋ ಕೆಲಸ ಬಿಟ್ಟ ಹೋಗಿದ್ಲಾಕಿ. ಈಗ ನಮ್ಮನ್ನ ಅನಾಥರನ್ನಾಗಿ ಮಾಡಿ ಹೋಗ್ಯಾಳ ನೋಡ್ರೀ...’

ತಾರಿಹಾಳ ಕೈಗಾರಿಕೆ ಪ್ರದೇಶದ ಕಾರ್ಖಾನೆಯಲ್ಲಿ ಶನಿವಾರ ನಡೆದ ಬೆಂಕಿ ಅವಘಡದಲ್ಲಿ ಮೃತಪಟ್ಟ ಗೌರವ್ವ ಹಿರೇಮಠ(45) ಅವರ ಪತಿ ವೀರಭದ್ರಯ್ಯ ಅವರ ನೋವಿನ ನುಡಿಗಳಿವು. ಕಿಮ್ಸ್‌ ಆವರಣದಲ್ಲಿ ಪತ್ನಿ ಶವ ಕೊಂಡೊಯ್ಯಲು ಕುಟುಂಬಸ್ಥರೊಂದಿಗೆ ಬಂದಾಗ ಅವರು ಮಾಧ್ಯಮದ ಜೊತೆ ಮಾತನಾಡಿದರು.

‘ಗೌರವ್ವ ಈ ಮೊದಲು ತಾರಿಹಾಳದಲ್ಲಿರುವ ಬಾಂಡಲೆ ತಯಾರಿಸುವ ಕಾರ್ಖಾನೆಗೆ ಹೋಗುತ್ತಿದ್ದಳು. ಅಲ್ಲಿ ದಿನಕ್ಕೆ ₹150 ಕೊಡುತ್ತಿದ್ದರು. ಹೊಸ ಕಾರ್ಖಾನೆ ಆರಂಭವಾಗಿದೆ, ಅಲ್ಲಿ ₹200 ಕೊಡುತ್ತಾರೆ ಎಂದು ಒಂದು ವಾರದಿಂದ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದಳು. ಬೆಳಿಗ್ಗೆಯೇ ನಮಗೆಲ್ಲ ಅಡುಗೆ ಮಾಡಿಟ್ಟು, ಬುತ್ತಿ ಕೊಂಡೊಯ್ಯುತ್ತಿದ್ದಳು’ ಎಂದು ಪತ್ನಿಯನ್ನು ನೆನಪಿಸಿಕೊಂಡು ಗದ್ಗದಿತರಾದರು.

‘ಬಡತನದಲ್ಲೇ ಬೆಳೆದ ನಮಗೆ ₹50 ಹೆಚ್ಚಿಗೆ ಸಿಕ್ಕಿದರೂ ಅದೇ ದೊಡ್ಡ ಮೊತ್ತ. ಆದರೆ, ಆ ಮೊತ್ತವೇ ನಮ್ಮ ಬದುಕಿಗೆ ಮುಳ್ಳಾಯಿತು. ಇಬ್ಬರು ಚಿಕ್ಕ ಮಕ್ಕಳನ್ನು ಸಾಕುತ್ತಾ, ಕುಟುಂಬ ನಿರ್ವಹಿಸುವುದು ಹೇಗೆಂದು ತಿಳಿಯುತ್ತಿಲ್ಲ. ದಿಕ್ಕು ತೋಚದಂತಾಗಿದ್ದೇನೆ’ ಎಂದು ಅವರು ಅಳಲು ತೋಡಿಕೊಂಡರು.

ಮೃತ ಮತ್ತೊಬ್ಬ ಮಹಿಳೆ ವಿಜಯಲಕ್ಷ್ಮಿ ಯಚ್ಚನಗಾರ(34) ಅವರ ಪತಿ ವೀಭದ್ರಪ್ಪ ಅವರ ರೋಧನೆ ಮನ ಮಿಡಿಯುಂತಿತ್ತು. ‘ದೇವರಿಗೆ ನಮ್ಮ ಕುಟುಂಬ ಚೆನ್ನಾಗಿರುವುದು ಸಹಿಸೋಕೆ ಆಗಿಲ್ಲ. ಇತ್ತೀಚೆಗಷ್ಟೇ ಅವಳು ಕಾರ್ಖಾನೆ ಕೆಲಸಕ್ಕೆ ಸೇರಿದ್ದಳು. ಕೆಲಸ ಕಷ್ಟವಾದರೆ ಬಿಡು ಎಂದಿದ್ದೆ. ಶನಿವಾರ ವೇತನ ಕೊಡ್ತಾರೆ, ಅದನ್ನು ಪಡೆದು ಬಿಡುತ್ತೇನೆ ಎಂದಿದ್ದಳು. ಈಗ ನಮ್ಮನ್ನೇ ಬಿಟ್ಟು ಹೋಗಿದ್ದಾಳೆ’ ಎನ್ನುವಾಗಅಲ್ಲಿದ್ದವರಕಣ್ಣಾಲಿಗಳು ಒದ್ದೆಯಾದವು.

ಅವಘಡದಲ್ಲಿ ಕೊನೆಯುಸಿರೆಳೆದ ಕಲಘಟಗಿಯ ಮಾಳೇಶ ಹದ್ದನ್ನವರ(25) ಅವರಿಗೆ ಐದು ತಿಂಗಳ ಮಗುವಿದೆ. ತವರು ಮನೆಯಲ್ಲಿ ಅವರ ಪತ್ನಿ ಮಗುವಿನ ಆರೈಕೆಯಲ್ಲಿದ್ದಾಳೆ. ವಾರ ಕಳೆದರೆ ಮಗುವಿನೊಂದಿಗೆ ಪತ್ನಿ ಕಲಘಟಗಿಗೆ ಬರುತ್ತಿದ್ದಳು. ಮಾಳೇಶ ಕೂಡ ಸಂಭ್ರಮದಿಂದ ಇದ್ದ. ಮನೆಗೆ ಬೇಕಾದ ಸಣ್ಣ–ಪುಟ್ಟ ಸಾಮಾನುಗಳನ್ನು ಖರೀದಿಸಿದ್ದ. ಆದರೆ, ವಿಧಿ ಸಂಭ್ರಮಕ್ಕೆ ಅವಕಾಶ ನೀಡದೆ ಅವನನ್ನೇ ಕರೆದುಕೊಂಡು ಬಿಟ್ಟಿದೆ’ ಅವರ ಕುಟುಂಬಸ್ಥರು ಕಣ್ಣೀರಾದರು.

ಸಚಿವ ಹಾಲಪ್ಪಗೆ ಅಚ್ಚರಿ
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಅಚಾರ್‌ ಅವರು ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಮುಖಂಡರ ಜೊತೆ ಅವಘಡ ನಡೆದ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 800 ಚದರ ಅಡಿ ವಿಸ್ತೀರ್ಣದ ಕಾರ್ಖಾನೆಯ ಕಟ್ಟಡದ ಚಾವಣಿಗೆ ಮಾಡಲಾದ ಸಿಮೆಂಟ್‌ ಹೊದಿಕೆ, ಸ್ಫೋಟದ ತೀವ್ರತೆಗೆ ಸಂಪೂರ್ಣ ಕಿತ್ತು ಬಿದ್ದಿತ್ತು. ಬ್ಯಾರೆಲ್‌ಗಳೆಲ್ಲ ಕರಗಿ, ಸುಟ್ಟು ಕರಕಲಾಗಿದ್ದವು. ಕೆಲವು ಕಡೆ ಕಟ್ಟಡದ ಗೋಡೆ ಬಿರುಕು ಸಹ ಬಿಟ್ಟಿದ್ದವು. ಇದನ್ನು ಗಮನಿಸಿದ ಸಚಿವರು ಅಚ್ಚರಿ ವ್ಯಕ್ತಪಡಿಸಿದರು. ಬೇಜವಾಬ್ದಾರಿಯಿಂದ ಕಾರ್ಖಾನೆ ನಡೆಸುತ್ತಿದ್ದ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಪರಿಹಾರದ ಬದಲು ಕ್ರಮ ಕೈಗೊಳ್ಳಿ’
ಗಾಯಾಳುಗಳ ಆರೋಗ್ಯ ವಿಚರಿಸಿಕೊಂಡು ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಲು ಕಿಮ್ಸ್‌ ಆಸ್ಪತ್ರೆಯಿಂದ ಹೊರಗೆ ಬಂದ ಸಚಿವ ಹಾಲಪ್ಪ ಅವರನ್ನು ಕುಟುಂಬಸ್ಥರು ತರಾಟೆ ತೆಗೆದುಕೊಂಡರು. ‘ನೀವು ನೀಡುವ ₹5 ಲಕ್ಷ ಪರಿಹಾರಕ್ಕೆ ನಾವು ಇಲ್ಲಿ ಬಂದು ನಿಂತಿಲ್ಲ. ಬೇಜವಾಬ್ದಾರಿ ಕಾರ್ಖಾನೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತಪಟ್ಟವರ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುವಂತೆ ಸರ್ಕಾರ ನೆರವು ನೀಡಬೇಕು. ಕಾರ್ಖಾನೆ ಮಾಲೀಕರಿಂದಲೇ ₹10 ಲಕ್ಷ ಪರಿಹಾರ ಕೊಡಿಸಬೇಕು’ ಎಂದು ಆಗ್ರಹಿಸಿದರು. ಅದಕ್ಕೆ ಸಚಿವರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ, ‘ನಿಮ್ಮ ಮಕ್ಕಳು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವುದಿಲ್ಲವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಜುಗರಕ್ಕೊಳಗಾದ ಸಚಿವರು, ಸ್ಪಷ್ಟನೆ ನೀಡುತ್ತಾ ಕೈ ಮುಗಿದು ಅಲ್ಲಿಂದ ತೆರಳಿದರು.

ಎಫ್‌ಐಆರ್‌ನಲ್ಲಿ ಏನಿದೆ?
ಸ್ಫೋಟಕ ವಸ್ತುಗಳನ್ನು ಸುರಕ್ಷತಾ ಕ್ರಮವಹಿಸದೆ ಸಂಗ್ರಹಿಸಿಟ್ಟ ಪರಿಣಾಮ ಕಾರ್ಖಾನೆಯಲ್ಲಿ ಸ್ಫೋಟಗೊಂಡು ಕಾರ್ಮಿಕರ ಪ್ರಾಣ ಹಾನಿಗೆ ಕಾರಣವಾಗಿದೆ ಎಂದು ತಾರಿಹಾಳದ ಮೆ. ಐ.ಸಿ. ಪ್ಲೇಮ್‌ ಸ್ಪಾರ್ಕಲ್‌ ಕ್ಯಾಂಡಲ್‌ ತಯಾರಿಕಾ ಕಾರ್ಖಾನೆಯ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ. ‌

ಕಾರ್ಖಾನೆಯ ಮಾಲೀಕ ಅಬ್ದುಲ್‌ ಶೇಕ್‌ ಮತ್ತು ವ್ಯವಸ್ಥಾಪಕ ಮಂಜುನಾಥ ಹರಿಜನ ವಿರುದ್ಧ ಮೃತ ಕಾರ್ಮಿಕ ಮಹಿಳೆಯ ಪತಿ ವೀರಭದ್ರಪ್ಪ ಯಚ್ಚಲಗಾರ ದೂರು ನೀಡಿದ್ದು, ಕಾರ್ಮಿಕರಿಗೆ ರಕ್ಷಣಾ ಸಲಕರಣೆಗಳನ್ನು ಪೂರೈಸದೆ ಕಾನೂನು ಉಲ್ಲಂಘಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಫೋಟಕ ಸಾಮಗ್ರಿ ಸಂಗ್ರಹ ಕಾಯ್ದೆ, ಬೇಜವಾಬ್ದಾರಿಯಿಂದ ಸ್ಫೋಟಕ ಸಾಮಗ್ರಿ ಸಂಗ್ರಹ(ಎಕ್ಸ್‌ಪ್ಲೋಸಿವ್‌ ಸಬ್‌ಸ್ಟ್ಯಾನ್ಸಿಸ್‌ ಆ್ಯಕ್ಟ್‌ 1908), ನಿರ್ಲಕ್ಷ್ಯತನದಿಂದ ಸಾದಾಗಾಯ(337), ನಿರ್ಲಕ್ಷ್ಯತನದಿಂದ ತೀವ್ರ ಗಾಯ(338) ಹಾಗೂ ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ(304, 34) ಸೆಕ್ಷನ್‌ ಹಾಕಲಾಗಿದೆ.

ಮೂರು ದಿನಗಳಲ್ಲಿ ವರದಿಗೆ ಸೂಚನೆ
‘ಧಾರವಾಡ ಜಿಲ್ಲೆಯ ಎಂಟು ವಲಯಗಳಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಹಾಗೂ ಕಾನೂನು ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಮೀಕ್ಷೆ ನಡೆಸಿ, ಮೂರು ದಿನಗಳಲ್ಲಿ ವರದಿ ನೀಡುವಂತೆ‌ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಗ್ನಿ ದುರಂತಕ್ಕೆ ಕಾರಣವಾದ ಕಾರ್ಖಾನೆ ಯಾವುದೇ ಅನುಮತಿ ಪಡೆದಿರಲಿಲ್ಲ. ಲೋಪ ಎಸಗಿದ ಅಧಿಕಾರಿಗಳ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಬಾಡಿಗೆ ಪಡೆದ ಕಾರ್ಖಾನೆ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಅವನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಪ್ಪು ಮಾಡಿದವರ ಹೆಡೆಮುರಿ ಕಟ್ಟಿ, ಎಚ್ಚರಿಕೆ ಸಂದೇಶ ನೀಡಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT