ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಣೀಯ

ಹುಬ್ಬಳ್ಳಿ ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅಭಿಮತ
Last Updated 15 ಆಗಸ್ಟ್ 2019, 14:44 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಭಾರತವು ಸ್ವತಂತ್ರ ದೇಶವಾಗಲು, ವಿವಿಧ ಧರ್ಮ, ಜಾತಿ, ಭಾಷೆಯ ಜನರು ಒಗ್ಗಟ್ಟಾಗಿ ಜೀವಿಸಲು ಶ್ರಮಿಸಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರನಾಯಕರ ತ್ಯಾಗ, ಬಲಿದಾನ ಸ್ಮರಣೀಯ ಎಂದು ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಹೇಳಿದರು.

ತಾಲ್ಲೂಕು ಆಡಳಿತದಿಂದ ನಗರದ ನೆಹರೂ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆ ನಾಶವಾಗಿದೆ. ಕೆರೆ, ಹಳ್ಳಗಳು ತುಂಬಿ ಹರಿದ ಪರಿಣಾಮ ಸಾಕಷ್ಟು ಮನೆಗಳು ಪ್ರವಾಹದಲ್ಲಿ ಸಿಲುಕಿ ಸಾವಿರಾರು ಕುಟುಂಬಗಳು ತೊಂದರೆಗೆ ಈಡಾಗಿವೆ. ಮಳೆಯಿಂದ ತಾಲ್ಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ಸರ್ಕಾರದ ಮಾರ್ಗಸೂಚಿ ಅನ್ವಯ ಬಿದ್ದ ಮನೆಗಳಿಗೆ, ಗಾಯಾಳುಗಳಿಗೆ, ಮೃತಪಟ್ಟವರಿಗೆ ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ಒದಗಿಸಲಾಗಿದೆ. ಅತಿವೃಷ್ಟಿಯಿಂದಾದ ಹಾನಿಯ ಪರಿಶೀಲನೆ ಪ್ರಗತಿಯಲ್ಲಿದೆ ಎಂದರು.

ಶಾಸಕ ಜಗದೀಶ ಶೆಟ್ಟರ್‌, ರಾಜ್ಯದಲ್ಲಿ ಭೀಕರ ನೆರೆ ಹಾವಳಿ ಸಂಭವಿಸಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂತ್ರಸ್ತರ ನೆರವಿಗೆ ಸ್ಪಂದಿಸುತ್ತಿವೆ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯುದ್ಧೋಪಾದಿಯಲ್ಲಿ ನೆರೆ ಪರಿಹಾರ ಕಾರ್ಯಕೈಗೊಂಡಿದ್ದಾರೆ. ಸಂತ್ರಸ್ತರ ಸಂಕಷ್ಟ ಪರಿಹಾರಕ್ಕೆ ಸರ್ಕಾರ ಬದ್ಧವಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಲಾಢ್ಯ ಸರ್ಕಾರ ಇದೆ. ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೂಲಕ ಬಿಜೆಪಿಯು ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಇದರಿಂದ ಭವಿಷ್ಯದಲ್ಲಿ ಕಾಶ್ಮೀರವು ಅಭಿವೃದ್ಧಿಯಾಗಲಿದೆ. ಉಗ್ರರ ಉಪಟಳ ತಪ್ಪಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸನ್ಮಾನ:ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಜಿ.ಕುಲಕರ್ಣಿ ದಂಪತಿ ಹಾಗೂ ಎಸ್‌.ವಿ.ತಾಂಬೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪೊಲೀಸ್‌, ಗೃಹರಕ್ಷಕ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್ಎಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು, ಕೇಸರಿ, ಬಿಳಿ, ಹಸಿರು ಬಣ್ಣದ ಚಿತ್ತಾರವನ್ನು ಮುಖದಲ್ಲಿ ಬಿಡಿಸಿಕೊಂಡು, ಬಣ್ಣ,ಬಣ್ಣದ ಬಲೂನ್‌, ಕೈಗೆ ತ್ರಿವರ್ಣದ ರಿಬ್ಬನ್‌ ಹಾಕಿಕೊಂಡು ‘ಭಾರತ್‌ ಮಾತಾಕೀ ಜೈ’ ಎಂಬ ಘೋಷಣೆಯನ್ನು ಮೊಳಗಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್‌, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಸಂಗಪ್ಪ ಬಾಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT