ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಲಾರಿ ಡಿಕ್ಕಿ, ಪೊಲೀಸ್ ಸೇರಿ ಮೂವರ ಸಾವು

ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರ ತೆರವುಗೊಳಿಸುವಾಗ ಘಟನೆ: ಲಾರಿ ನಿಲ್ಲಿಸದೆ ಪರಾರಿಯಾದ ಚಾಲಕ
Last Updated 5 ಏಪ್ರಿಲ್ 2022, 19:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಳೆಯಿಂದಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರದ ಟೊಂಗೆಯನ್ನು ತೆರವುಗೊಳಿಸುತ್ತಿದ್ದ ಪೊಲೀಸರು ಹಾಗೂ ಸಾರ್ವಜನಿಕರಿಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ, ಕಾನ್ಸ್‌ಟೇಬಲ್ ಹಾಗೂ ಇಬ್ಬರು ಸ್ಥಳೀಯರು ಮೃತಪಟ್ಟಿದ್ದಾರೆ.

ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಅಂಚಟಗೇರಿ ಮತ್ತು ಚಳಮಟ್ಟಿ ಕ್ರಾಸ್ ಮಾರ್ಗದ ಮಧ್ಯೆ ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದೆ‌‌.

ಕಲಘಟಗಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಪಂಡಿತ ಕಾಸರ್ (28), ಗಂಗೀವಾಳ ಗ್ರಾಮದ ಶಿವಲಿಂಗಪ್ಪ ಕಲಬುರ್ಗಿ ಹಾಗೂ ಹನುಮಂತಪ್ಪ ಕಲಬುರ್ಗಿ ಮೃತರು. ಕಾನ್ಸ್‌ಟೇಬಲ್ ಗಳಾದ ನೇತಾಜಿ ಎಸ್. ವಾಘ್, ಶಂಕರ ಬೇವಿನಮರದ, ಸ್ಥಳೀಯರಾದ ರವಿ ವಾಲಿಕರ, ಸಿದ್ದಪ್ಪ ಗುಡ್ಡಪ್ಪನವರ ಗಾಯಗೊಂಡಿದ್ದು ಎಲ್ಲರನ್ನು‌ ಕಿಮ್ಸ್ ಗೆ ದಾಖಲಿಸಲಾಗಿದೆ.

ಸಂಜೆ ಸುರಿದ ಮಳೆಯಿಂದಾಗಿ ಕಾರವಾರ ರಸ್ತೆಯಲ್ಲಿ ಮರದ ಟೊಂಗೆ ರಸ್ತೆಗೆ ಅಡ್ಡವಾಗಿ ಬಿದ್ದಿತ್ತು. ಇದೇ ಮಾರ್ಗದಲ್ಲಿ ಬೈಕ್ ಸವಾರರೊಬ್ಬರಿಗೆ ಅಪಘಾತವಾಗಿತ್ತು. ವಿಷಯ ತಿಳಿದ ಮೂವರೂ ಕಾನ್ಸ್‌ಟೇಬಲ್ ಗಳು ಸ್ಥಳಕ್ಕೆ ಠಾಣೆಯ 112 ವಾಹನದಲ್ಲಿ ತೆರಳಿದ್ದರು. ಅಪಘಾತದ ಸ್ಥಳದಲ್ಲಿದ್ದ ಸ್ಥಳೀಯರ ನೆರವಿನಿಂದ ಮರವನ್ನು ಮೂವರೂ ತೆರವುಗೊಳಿಸುತ್ತಿದ್ದರು.

ಆಗ ಕಲಘಟಗಿ ಕಡೆಯಿಂದ ವೇಗವಾಗಿ ಬಂದ ಲಾರಿ ಚಾಲಕ ಮರಗಳನ್ನು ತೆರವು ಮಾಡುತ್ತಿದ್ದವರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮೂವರೂ ಸ್ಥಳದಲ್ಲೇ ಮೃತಪಟ್ಟರು. ಅಪಘಾತದಲ್ಲಿ ಗಾಯಗೊಂಡ ಶಂಕರ ಬೇವಿನಮರದ ಅವರು, ಸ್ಥಳೀಯರ ನೆರವಿನಿಂದ ಮೃತರನ್ನು ಹಾಗೂ ಗಾಯಾಳುಗಳನ್ನು ಪೊಲೀಸ್ ವಾಹನದಲ್ಲಿ ಕಿಮ್ಸ್ ಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

"ಮರ ತೆರವು ಮಾಡುವಾಗ ಒಮ್ಮೆಲೆ ಲಾರಿ ಬಂದುದನ್ನು ಕಂಡು, ಬದಿಗೆ ಹೋಗುವಂತೆ ಕೂಗಿಗೊಂಡು ಪಕ್ಕಕ್ಕೆ ವಾಲಿದೆ. ಆದರೂ, ಲಾರಿ ಸ್ವಲ್ಪ ಬಡಿದಿದ್ದರಿಂದ ತಲೆ ಮತ್ತು ಭುಜಕ್ಕೆ ಗಾಯವಾಯಿತು. ನೋವಿನಲ್ಲೇ ಎಲ್ಲರನ್ನೂ ಕಿಮ್ಸ್ ಗೆ ಕರೆತಂದೆ" ಎಂದು ಘಟನೆ ಬಗ್ಗೆ ಗಾಯಾಳು ಕಾನ್ಸ್‌ಟೇಬಲ್ ಶಂಕರ ಬೇವಿನಮರದ ಪ್ರಜಾವಾಣಿಗೆ ವಿವರಿಸಿದರು.

ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಮತ್ತು ಪೊಲೀಸ್ ಕಮಿಷನರ್ ಲಾಭೂ ರಾಮ್ ಭೇಟಿ ನೀಡಿದರು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏ. 23ಕ್ಕೆ ಮದುವೆ ಕಾಸರ್ ಮದುವೆ ನಿಗದಿಯಾಗಿತ್ತು...

ಕಲಘಟಗಿ ತಾಲ್ಲೂಕಿನ ಸಂಗಮೇಶ್ವರ ಗ್ರಾಮದವರಾದ ಕಾನ್‌ಸ್ಟೆಬಲ್‌ ಕಾಸರ್ ಅವರು ಮೂರು ವರ್ಷದ ಹಿಂದೆ ಸೇವೆಗೆ ಸೇರಿದ್ದರು. ಏಪ್ರಿಲ್ 23ರಂದು ಅವರ ವಿವಾಹ ನಿಗದಿಯಾಗಿತ್ತು. ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಗೆ ಬಂದು ಚಿನ್ನಾಭರಣ ಖರೀದಿಸಿದ್ದರು ಎಂದು ಅವರ ಸಹೋದ್ಯೋಗಿಗಳು ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT