ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂದ್: ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಸೀಮಿತ

ಸರ್ಕಾರದ ವಿರುದ್ಧ ಆಕ್ರೋಶ; ಅರೆಬೆತ್ತಲೆ ಪ್ರತಿಭಟನೆ
Published 29 ಸೆಪ್ಟೆಂಬರ್ 2023, 6:46 IST
Last Updated 29 ಸೆಪ್ಟೆಂಬರ್ 2023, 6:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ, ವಿವಿಧ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು. ರಾಜ್ಯದ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್'ಗೆ ಮನವಿ ಸಲ್ಲಿಸಿದರು.

ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಬೆಳಿಗ್ಗೆ ಹೊಸೂರು ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಚನ್ನಮ್ಮ‌ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ಯಪಡಿಸಿದರು. ವಾಹನಗಳ ಸಂಚಾರ ತಡೆದು ಧರಣಿ ನಡೆಸಲು ಮುಂದಾದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಖಾಲಿಕೊಡ, ಖಾಲಿ ಬಾಟಲಿ ಪ್ರದರ್ಶಿಸಿದರು. ಅರೆಬೆತ್ತಲೆಯಾಗಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದರು. 'ಬೇಕೆ ಬೇಕೆ ನ್ಯಾಯ ಬೇಕು', 'ಕಾವೇರಿ ನಮ್ಮದು, ನಮ್ಮದು' ಎಂದು ಘೋಷಣೆ ಕೂಗಿದರು.

ಉತ್ತರ ಕರ್ನಾಟಕ ಆಟೊ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, 'ರಾಜ್ಯದ ಜನತೆ ಬರದ ಸಂಕಷ್ಟ ಎದುರಿಸುತ್ತಿದೆ. ಕಾವೇರಿ ನದಿಯಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ನಮ್ಮ ರಾಜ್ಯದ ಜನರಿಗೇ ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಆತಂಕದ ವಿಷಯ‌. ಸುಪ್ರೀಂಕೋರ್ಟ್ ಮತ್ತು ನ್ಯಾಯಾಧೀಕರಣದಲ್ಲಿ ರಾಜ್ಯ ಸರ್ಕಾರ ಸಮರ್ಪಕವಾಗಿ ವಾದ ಮಂಡಿಸದಿರುವುದೇ ಇದಕ್ಕೆಲ್ಲ ಕಾರಣ' ಎಂದು ಆರೋಪಿಸಿದರು.

ರೈತ ಭಾರತ ರೈತ ಸಮಾಜದ ಮುಖಂಡ ಹೇಮನಗೌಡ್ರ, 'ಜನಪ್ರತಿನಿಧಿಗಳು ರಾಜ್ಯದ ಹಿತ ಕಾಪಾಡುವ ಬದಲು, ಜನರನ್ನು ಸಮಸ್ಯೆಗೆ ನೂಕುತ್ತಿದ್ದಾರೆ. ದ್ವೇಷ ಮತ್ತು ಸ್ವಾರ್ಥದ ರಾಜಕಾರಣ ಮಾಡುತ್ತ ವಂಚಿಸುತ್ತಿದ್ದಾರೆ. ಕುಡಿಯುವ ನೀರಿಗೆ ರಾಜಕಾರಣ ಮಾಡಿದರೆ, ರೈತರು ತಾಳ್ಮೆ ಕಳೆದುಕೊಳ್ಳಬೇಕಾಗುತ್ತದೆ' ಎಂದರು.

ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ), ರತ್ನ ಭಾರತ ರೈತ ಸಮಾಜ, ಕನ್ನಡ ಕ್ರಾಂತಿ ದೀಪ, ಕರ್ನಾಟಕ ನವನಿರ್ಮಾಣ ವೇದಿಕೆ, ಕರುನಾಡ ಸೇನೆ, ಕರ್ನಾಟಕ ಜನಶಕ್ತಿ ಸೇನೆ, ಕರ್ನಾಟಕ‌ ಸಂಗ್ರಾಮ ಸೇನೆ, ರೈತ ಸಂಘ, ಜಯ ಕರ್ನಾಟಕ ಸಂಘಟನೆ, ಉತ್ತರ ಕರ್ನಾಟಕ ಆಟೊ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಗರದಲ್ಲಿ ದೈನಂದಿನ ಕಾರ್ಯ ಚಟುವಟಿಕೆಗಳು ಎಂದಿನಂತೆಯೇ ಇದ್ದವು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಅಂಗಡಿ, ಮುಗ್ಗಟ್ಟುಗಳು ತೆರೆದಿದ್ದವು. ವಾಹನ ಸಂಚಾರಗಳು ಸಹ ಎಂದಿನಂತೆಯೇ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT