ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಪಾಲಿಕೆ ಪೌರ ಕಾರ್ಮಿಕರಿಗೆ ₹20 ಲಕ್ಷದ ಅಪಘಾತ ವಿಮೆ

ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಕ್ರಮ; 2,297 ಮಂದಿಗೆ ಅನುಕೂಲ
Last Updated 26 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೌರ ಕಾರ್ಮಿಕರ ಅವಲಂಬಿತ ಕುಟುಂಬದವರ ಸುರಕ್ಷತೆಗೆ ಮುಂದಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು, ಪ್ರತಿಯೊಬ್ಬರಿಗೂ ತಲಾ ₹20 ಲಕ್ಷದ ಅಪಘಾತ ವಿಮೆ ಮಾಡಿಸುತ್ತಿದೆ.

ಭಾರತೀಯ ಸ್ಟೇಟ್ ಬ್ಯಾಂಕ್‌ನ ಗ್ರೂಪ್ ಪರ್ಸನಲ್ ಆ್ಯಕ್ಸಿಡೆಂಟಲ್ ವಿಮೆ ಇದಾಗಿದ್ದು, ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ದುಡಿಯುತ್ತಿರುವ 1,620 ಹೊರಗುತ್ತಿಗೆ ಪೌರ ಕಾರ್ಮಿಕರು, 119 ತುರ್ತು ಹಾಗೂ 560 ಕಾಯಂ ಸೇರಿ ಒಟ್ಟು 2,297 ಪೌರ ಕಾರ್ಮಿಕರು ವಿಮೆಗೆ ಒಳಪಡಲಿದ್ದಾರೆ.

‘ಕಾರ್ಮಿಕರು ವೈಯಕ್ತಿವಾಗಿ ವಿಮೆ ಮಾಡಿಸಿಕೊಳ್ಳುವಷ್ಟು ಶಕ್ತರಲ್ಲ. ಹಾಗಾಗಿ, ಪೌರಾಡಳಿತ ನಿರ್ದೇಶನಾಲಯದ ಸೂಚನೆ ಮೇರೆಗೆ ಪಾಲಿಕೆ ವತಿಯಿಂದಲೇ ಸಾಮೂಹಿಕವಾಗಿ ವಿಮೆ ಮಾಡಿಸಲಾಗುತ್ತಿದೆ’ ಎಂದು ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಪರಿಸರ ಎಂಜಿನಿಯರ್ ಟಿ.ಎನ್. ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವರ್ಷಕ್ಕೆ ಪ್ರತಿ ಕಾರ್ಮಿಕನಿಗೆ ₹1,109 ವಿಮೆ ಕಂತಿನಂತೆ, ಒಟ್ಟು 2,297 ಮಂದಿಗೆ ಪ್ರತಿ ವರ್ಷ ಒಟ್ಟು ₹25,47,373 ಪಾವತಿಸಬೇಕಾಗುತ್ತದೆ. ಪೌರ ಕಾರ್ಮಿಕರಲ್ಲಿ ಬಹುತೇಕ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರೇ ಇದ್ದಾರೆ. ಹಾಗಾಗಿ, ಅವರ ಅಭಿವೃದ್ಧಿಗಾಗಿ ಪಾಲಿಕೆಯಲ್ಲಿ ಮೀಸಲಾಗಿರುವ ಶೇ 24.1 ಅನುದಾನವನ್ನು ವಿಮೆ ಪಾವತಿಗೆ ಬಳಸಿಕೊಳ್ಳಲಾಗುವುದು’ ಎಂದರು.

‘ವಿಮೆಗೆ ಒಳಪಟ್ಟ ಕ್ಷಣದಿಂದ ಕಾರ್ಮಿಕರು ಕೆಲಸದ ಸಂದರ್ಭದಲ್ಲಿ ಸಂಭವಿಸುವ ಅವಘಡ, ವಾಹನ ಅಪಘಾತ ಸೇರಿದಂತೆ ಯಾವುದೇ ರೀತಿಯ ಅವಘಡಗಳಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ ₹20 ಲಕ್ಷ ಅಪಘಾತ ವಿಮೆ ಸಿಗಲಿದೆ’ ಎಂದು ಹೇಳಿದರು.

‘ವಿಮೆ ಮಾಡಿಸಿಕೊಂಡವರ ಕುಟುಂಬದವರು ವಿಮೆಯ ಬಾಂಡ್, ಪೊಲೀಸ್ ಎಫ್‌ಐಆರ್‌, ಮರಣ ಪ್ರಮಾಣ ಪತ್ರ ಹಾಗೂ ನಾಮಿನಿಯ ವಿವರಗಳನ್ನ ಒದಗಿಸಿದರೆ, ಅವರ ಬ್ಯಾಂಕ್ ಖಾತೆಗೆ ವಿಮಾ ಮೊತ್ತ ಜಮಾ ಆಗಲಿದೆ’ ಎಂದು ಮಾಹಿತಿ ನೀಡಿದರು.

ಇದೇ ಮೊದಲಲ್ಲ...

‘ಪೌರ ಕಾರ್ಮಿಕರ ಸಾಮಾಜಿಕ ಸುರಕ್ಷತೆಯ ದೃಷ್ಟಿಯಿಂದ ಪೌರಾಡಳಿತ ಇಲಾಖೆಯು 2017ರಲ್ಲಿ ಪ್ರಧಾನ ಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆಯಡಿ(ಪಿಎಂಜೆಜೆಬಿವೈ) ಪಾಲಿಕೆ ವತಿಯಿಂದ ₹2 ಲಕ್ಷದ ಜೀವ ವಿಮೆ ಮಾಡಿಸಲಾಗಿದೆ. ಇದಕ್ಕಾಗಿ, ಕಾರ್ಮಿಕರ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ₹330 ಕಡಿತಗೊಳ್ಳುತ್ತದೆ. ಜತೆಗೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ (ಪಿಎಂಎಸ್‌ಬಿವೈ) ₹2 ಲಕ್ಷದ ಅಪಘಾತ ವಿಮೆ ಮಾಡಿಸಲಾಗಿದ್ದು, ಇದಕ್ಕೂ ಕಾರ್ಮಿಕನ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ₹12 ಕಡಿತವಾಗುತ್ತದೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಟಿ.ಎನ್. ಶ್ರೀಧರ್ ತಿಳಿಸಿದರು.

ಅಂಕಿ ಅಂಶ...

ಪ್ರತಿ ಕಾರ್ಮಿಕನ ಪರವಾಗಿ ವರ್ಷಕ್ಕೆ ಪಾವತಿಸಬೇಕಾದ ಮೊತ್ತ- ₹1,109

ಎಲ್ಲಾ ಕಾರ್ಮಿಕರರ ಪರವಾಗಿ ವರ್ಷಕ್ಕೆ ಪಾವತಿಸಬೇಕಾದ ಮೊತ್ತ- ₹25,47 ಲಕ್ಷ

ಇಲಾಖೆ ಸೂಚನೆ ಮೇರೆಗೆ ಈ ಕ್ರಮ- ಎಂಜಿನಿಯರ್ ವಿಜಯಕುಮಾರ್

ಪೌರಾಡಳಿತ ನಿರ್ದೇಶನಾಲಯದ ಸೂಚನೆ ಮೇರೆಗೆ, ರಾಜ್ಯದಾದ್ಯಂತ ಇರುವ ಎಲ್ಲಾ ಪೌರ ಕಾರ್ಮಿಕರಿಗೂ ಸಾಮೂಹಿಕ ಅಪಘಾತ ವಿಮೆ ಮಾಡಿಸಲಾಗುತ್ತಿದೆ ಎಂದು ಘನ ತ್ಯಾಜ್ಯ ನಿರ್ವಹಣಾ ವಿಭಾಗ ಕಾರ್ಯನಿರ್ವಾಹಕಎಂಜಿನಿಯರ್ ಆರ್. ವಿಜಯಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT