ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ 3ನೇ ಪ್ರವೇಶ ದ್ವಾರ ಸಿದ್ಧ

ಮಂಟೂರು ರಸ್ತೆ ಕಡೆಯಿಂದ ಪ್ರವೇಶ: ₹42.5 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 18 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಶ್ವದ ಅತ್ಯಂತ ಉದ್ದನೆಯ ಪ್ಲಾಟ್‌ಫಾರಂ ಹೊಂದಿರುವ ಖ್ಯಾತಿಯ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣಕ್ಕೆ ಮೂರನೇ ಪ್ರವೇಶ ದ್ವಾರ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಮಂಟೂರು ರಸ್ತೆ ದಿಕ್ಕಿಗೆ ನಿರ್ಮಾಣವಾಗಿರುವ ಈ ದ್ವಾರದೊಂದಿಗೆ, ನಿಲ್ದಾಣಕ್ಕೆ ಇದೀಗ ಮೂರು ದಿಕ್ಕಿನಿಂದಲೂ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಸಿಕ್ಕಂತಾಗಿದೆ.

ನಿಲ್ದಾಣಕ್ಕೆ ಈಗಾಗಲೇ ಸ್ಟೇಷನ್‌ ರಸ್ತೆ ಕಡೆಯಿಂದ ಮುಖ್ಯ ದ್ವಾರ ಮತ್ತು ಗದಗ ರಸ್ತೆ ಕಡೆಯಿಂದ ಮತ್ತೊಂದು ದ್ವಾರವಿದೆ. ಎರಡೂ ಕಡೆ ಕಾಯ್ದಿರಿಸದ ಟಿಕೆಟ್ ಕೌಂಟರ್ ವ್ಯವಸ್ಥೆ ಇದೆ. ನೂತನ ದ್ವಾರದಲ್ಲಿಯೂ ಮೂರು ಕೌಂಟರ್‌ಗಳನ್ನು ತೆರೆಯಲಾಗಿದೆ.

ಮೂರು ಪ್ಲಾಟ್‌ಫಾರಂಗೆ ಸಂಪರ್ಕ: ನೂತನ ಪ್ರವೇಶ ದ್ವಾರವು ನಿಲ್ದಾಣದ 6, 7 ಹಾಗೂ 8ನೇ ಪ್ಲಾಟ್‌ಫಾರಂಗೆ ಸಂಪರ್ಕ ಕಲ್ಪಿಸಲಿದೆ. ಇದರ ಜೊತೆಗೆ, ಪ್ರಯಾಣಿಕರಿಗೆ ಅಗತ್ಯವಿರುವ ಕುಡಿಯುವ ನೀರು, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒಳಗೊಂಡಿದೆ.

‘ದ್ವಾರದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಅಂತಿಮ ಹಂತದ ಕೆಲ ಕೆಲಸಗಳು ಪ್ರಗತಿಯಲ್ಲಿವೆ. ಎಲ್ಲಾ ಪೂರ್ಣಗೊಂಡ ಬಳಿಕ, ರೈಲ್ವೆ ಸಚಿವಾಲಯದ ಮಾರ್ಗಸೂಚಿಯಂತೆ ದ್ವಾರವನ್ನು ಉದ್ಘಾಟಿಸಿ ಸೇವೆಗೆ ಮುಕ್ತಗೊಳಿಸಲಾಗುವುದು’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಲ್ದಾಣವು 1504 ಮೀಟರ್ ಉದ್ದದ ಪ್ಲಾಟ್‌ಫಾರಂ ಹೊಂದಿರುವುದರಿಂದ, ಅದಕ್ಕೆ ಪೂರಕವಾಗಿ ಮೂರನೇ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಇದರಿಂದಾಗಿ ಗಾಂಧಿವಾಡ, ಅರಳಿಕಟ್ಟಿ, ಮಂಟೂರು ಸೇರಿದಂತೆ ಈ ಭಾಗಗಳ ಪ್ರಯಾಣಿಕರಿಗೆ ಟಿಕೆಟ್ ಸಹಿತ ನಿಲ್ದಾಣ ಪ್ರವೇಶ ಇನ್ನಷ್ಟು ಹತ್ತಿರವಾಗಲಿದೆ’ ಎಂದು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಹೇಳಿದರು.

ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ: ದ್ವಾರದ ಎದುರಿಗೆ ಇರುವ ವಿಶಾಲವಾದ ಜಾಗದಲ್ಲಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನ
ಗಳಿಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ದ್ವಾರದ ಎದುರಿಗೆ ವಾಹನಗಳಲ್ಲಿ ಬಂದು ಇಳಿಯುವುದಕ್ಕೆ ಹಾಗೂ ಆಟೊ ನಿಲುಗಡೆಗೂ ವ್ಯವಸ್ಥೆ ಇದೆ. ಪ್ರವೇಶ ದ್ವಾರ, ಸುರಂಗ ಮಾರ್ಗದ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸುವ ಮೂಲಕ ಇಡೀ ಆವರಣದ ಅಂದವನ್ನು ಹೆಚ್ಚಿಸಲಾಗಿದೆ.

‘ಮೂರನೇ ಪ್ರವೇಶ ದ್ವಾರದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಅಂತಿಮ ಹಂತದ ಕೆಲ ಕೆಲಸಗಳು ಪ್ರಗತಿಯಲ್ಲಿವೆ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT