ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜ ಟ್ರೋಫಿ ಟ್ವೆಂಟಿ –20 ಕ್ರಿಕೆಟ್‌ ಆಗಸ್ಟ್‌ 7ರಿಂದ

‘ಹುಬ್ಬಳ್ಳಿ ಟೈಗರ್ಸ್‌’ ತಂಡಕ್ಕೆ ಅಭಿಮನ್ಯು ಮಿಥುನ್‌ ನಾಯಕ
Last Updated 4 ಆಗಸ್ಟ್ 2022, 9:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಗಸ್ಟ್‌ 7ರಿಂದ 26ರವರೆಗೆ ‘ಮಹಾರಾಜ ಟ್ರೋಫಿ ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸಂತೋಷ್‌ ಮೆನನ್‌ ಹೇಳಿದರು.

ನಗರದಲ್ಲಿ ಗುರುವಾರ ‘ಮಹಾರಾಜ ಟ್ರೋಫಿ’ ಅನಾವರಣಗೊಳಿಸಿ ಮಾತನಾಡಿ ಅವರು, ಕೋವಿಡ್‌ ಕಾರಣ ಎರಡು ವರ್ಷ ಟೂರ್ನಿ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಕೋವಿಡ್‌ ನಂತರ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಲೀಗ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ ಎಂದರು.

21 ದಿನ ಟೂರ್ನಿ ನಡೆಯಲಿದೆ. ಮೈಸೂರಿನಲ್ಲಿ 18 ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 16 ಸೇರಿದಂತೆ ಒಟ್ಟು 34 ಪಂದ್ಯಗಳು ನಡೆಯಲಿವೆ. ಸ್ಟಾರ್‌ ಸ್ಪೋರ್ಟ್ಸ್ ಎಚ್‌ಡಿ 2, ಸ್ಟಾರ್‌ ಸ್ಪೋರ್ಟ್ಸ್‌ –2 ಮತ್ತು ಸ್ಟಾರ್‌ ಸ್ಪೋರ್ಟ್ಸ್ ಕನ್ನಡ ಚಾನೆಲ್‌ಗಳಲ್ಲಿ ಟೂರ್ನಿಯ ಪಂದ್ಯಗಳು ಪ್ರಸಾರ ಆಗಲಿವೆ ಎಂದು ಹೇಳಿದರು.

ಈ ಮೊದಲು ಪ್ರಾಂಚೈಸಿ ಮಾದರಿಯಲ್ಲಿ ಟೂರ್ನಿ ನಡೆಯುತ್ತಿತ್ತು. ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಈ ಬಾರಿ ಪ್ಲೇಯರ್‌ ಡ್ರಾಫ್ಟ್‌ ಪ್ರಕ್ರಿಯೆ ಮೂಲಕ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಕೆಎಸ್‌ಸಿಎ ವತಿಯಿಂದಲೇ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಹುಬ್ಬಳ್ಳಿ ಟೈಗರ್ಸ್‌ ತಂಡದ ಪ್ರಾಯೋಜಕತ್ವವನ್ನು ಜಿಂದಾಲ್ ಸ್ಟೀಲ್ಸ್‌ ವಹಿಸಿಕೊಂಡಿದೆ ಎಂದರು.

ಕೆಸ್‌ಸಿಎ ವಿವಿಧ ವಲಯಗಳಿಂದ ಆರು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಆರು ವಲಯಗಳಿಂದ ಕೋಚ್‌ಗಳು, ಸಹಾಯಕ ಕೋಚ್‌ಗಳು, ಆಯ್ಕೆಗಾರರನ್ನು ಒಳಗೊಂಡ ಸಮಿತಿಯು ಆಟಗಾರರನ್ನು ಆಯ್ಕೆ ಮಾಡಿದೆ. ಆರೂ ತಂಡಗಳು ಬಲಿಷ್ಠ ಆಟಗಾರರನ್ನು ಒಳಗೊಂಡಿವೆ. ಅಭಿಮನ್ಯು ಮಿಥುನ್‌ ‘ಹುಬ್ಬಳ್ಳಿ ಟೈಗರ್ಸ್‌’ ತಂಡದ ನಾಯಕರಾಗಿದ್ದಾರೆ. ದೀಪಕ್ ಚೌಗಲೆ ಕೋಚ್‌, ರಾಜು ಭಟ್ಕಳ್ ಸಹಾಯಕ ಕೋಚ್‌, ಆನಂದ್‌ ಕಟ್ಟಿ ಆಯ್ಕೆಗಾರ ಮತ್ತು ಶಶಿಕುಮಾರ್ ವಿಡಿಯೊ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಕೆಎಸ್‌ಸಿಎ ಧಾರವಾಡ ವಲಯದ 15ಕ್ಕೂ ಆಟಗಾರರು ಮಹಾರಾಜ ಟ್ರೋಫಿ ಟೂರ್ನಿ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ರಾಜ್ಯದ ಯುವ ಕ್ರಿಕೆಟಿಗರಿಗೆ ಈ ಟೂರ್ನಿ ಉತ್ತಮ ವೇದಿಕೆಯಾಗಿದೆ. ಧಾರವಾಡ ವಲಯದಲ್ಲಿ ಎರಡು ಕಡೆ ಸುಸಜ್ಜಿತ ಕ್ರೀಡಾಂಗಳು ಇವೆ. ಇಲ್ಲಿ ಈ ವರ್ಷ ರಣಜಿ ಪಂದ್ಯಗಳು ಮತ್ತು ಬಿಸಿಸಿಐ ಪಂದ್ಯಗಳನ್ನು ಆಯೋಜಿಸುವ ಗುರಿ ಇದೆ ಎಂದರು.

ಕೆಎಸ್‌ಸಿಎ ಧಾರವಾಡ ವಲಯದ ಸಂಚಾಲಕ ಅವಿನಾಶ್ ಪೋತದಾರ್, ಗದಗದಲ್ಲಿಯೂ ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಿಸಲಾಗುವುದು. ಇದಕ್ಕೆ ₹2.50 ಕೋಟಿ ಬಿಡುಗಡೆ ಆಗಿದ್ದು, ಆರು ತಿಂಗಳಲ್ಲಿ ಕ್ರೀಡಾಂಗಣ ಸಿದ್ಧಗೊಳ್ಳಲಿದೆ ಎಂದು ಹೇಳಿದರು.

ಈ ವರ್ಷ ಬೆಂಗಳೂರು, ಮೈಸೂರಿನಲ್ಲಿ ಮಾತ್ರ ಪಂದ್ಯಗಳು ನಡೆಯುತ್ತಿವೆ. ಮಳೆ ಕಾರಣ ಹುಬ್ಬಳ್ಳಿಯಲ್ಲಿ ಪಂದ್ಯಗಳನ್ನು ಆಯೋಜಿಸಿಲ್ಲ. ಮುಂದಿನ ವರ್ಷ ಇಲ್ಲಿಯೂ ಪಂದ್ಯಗಳು ನಡೆಯಲಿವೆ ಎಂದು ಹೇಳಿದರು.

ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್ ವೀರಣ್ಣ ಸವಡಿ, ಕೆಎಸ್‌ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯ ವಾಸುದೇವ ಜೈಸಿಂಗ್‌, ಧಾರವಾಡ ವಲಯದ ಉಸ್ತುವಾರಿ ಕೆ.ಮುರಳೀಧರ್‌, ತುಮಕೂರು ವಲಯದ ಸಂಚಾಲಕ ಶಶಿಧರ್‌, ಧಾರವಾಡ ವಲಯದ ವ್ಯವಸ್ಥಾಪಕ ಟೋನಿ ಝಳಕಿ ಅವರು ಇದ್ದರು.

ಪಾರದರ್ಶಕವಾಗಿ ಟೂರ್ನಿ ಆಯೋಜನೆ: ಎಲ್ಲ ತಂಡಗಳಿಗೂ ಭ್ರಷ್ಟಾಚಾರ ಮತ್ತು ಉದ್ದೀಪನ ಮದ್ದು ಸೇವನೆ ಕುರಿತು ಅರಿವು ಮೂಡಿಸಲಾಗಿದೆ. ಅಲ್ಲದೆ, ಆರು ಜನ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಆರೂ ತಂಡಗಳಿಗೆ ನೇಮಿಸಲಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಈ ಟೂರ್ನಿಯಲ್ಲಿ ಅಳವಡಿಸಿಕೊಳ್ಳಲಾಗುವುದು. ಪಾದರ್ಶಕವಾಗಿ ಟೂರ್ನಿ ನಡೆಯಲಿದೆ ಎಂದು ಸಂತೋಷ್ ಮೆನನ್‌ ಹೇಳಿದರು.

ಮ್ಯಾಚ್‌ ಪಿಕ್ಸಿಂಗ್ ಕಾರಣಕ್ಕೆ ಕೆಪಿಎಲ್‌ ಟೂರ್ನಿ ನಿಂತಿಲ್ಲ. ಕೋವಿಡ್‌ ನಿಂದಾಗಿ ದೇಶದಾದ್ಯಂತ ಎಲ್ಲಿಯೂ ಪಂದ್ಯಗಳು ನಡೆದಿಲ್ಲ ಎಂದರು.

ಹುಬ್ಬಳ್ಳಿ ಟೈಗರ್ಸ್‌ ತಂಡದ ಆಟಗಾರರು: ಅಭಿಮನ್ಯು ಮಿಥುನ್‌, ಲವನಿತ್ ಸಿಸೋಡಿಯಾ, ಕೌಶಿಕ್ ವಿ, ಲಿಯಾನ್ ಖಾನ್‌, ನವೀನ್‌ ಎಂ.ಜಿ, ಆನಂದ ದೊಡ್ಡಮನಿ, ಶಿವಕುಮಾರ ಬಿ.ಯು, ತುಷಾರ್‌ ಸಿಂಗ್‌, ಅಕ್ಷನ್ ರಾವ್, ಜಹೂರ್ ಫರೂಕಿ, ರೋಹನ್‌ ನವೀನ್‌, ಸೌರವ್‌ ಶ್ರೀವಾಸ್ತವ್‌, ಸಾಗರ್‌ ಸೋಲಂಕಿ, ಗೌತಮ್ ಸಾಗರ್‌, ರೋಶನ್ ಎ, ರಾಹುಲ್ ಸಿಂಗ್ ರಾವತ್‌, ಶಿಶಿರ್‌ ಭವಾನೆ, ಶರಣ್‌ಗೌಡ, ನಿರ್ಮಿತ್ ಶಶಿಧರ್‌, ಸ್ವಪ್ನಿಲ್‌ ಎಲಾವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT