ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಂಕಷ್ಟದಲ್ಲಿ ಸಂಚಾರ ಪೊಲೀಸರು, ದೂಳು, ಹೊಗೆಯಿಂದ ಆರೋಗ್ಯ ಸಮಸ್ಯೆ

ಅಗತ್ಯವಿದ್ದಾಗ ಸಿಗದ ರಜೆ
Last Updated 1 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಸಂಚಾರ ಪೊಲೀಸ್‍ ವಿಭಾಗದ ಸಿಬ್ಬಂದಿಯು ಕಾರ್ಯದೊತ್ತಡ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಹುಬ್ಬಳ್ಳಿಯ ಉತ್ತರ, ದಕ್ಷಿಣ, ಪೂರ್ವ ಹಾಗೂ ಧಾರವಾಡ ವಲಯಗಳಲ್ಲಿ 199 ಕಾನ್‍ಸ್ಟೆಬಲ್‍ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದ್ದು, ಸದ್ಯ 171 ಮಂದಿ ಕಾನ್‍ಸ್ಟೆಬಲ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. 28 ಹುದ್ದೆಗಳು ಖಾಲಿ ಇವೆ.

ಸಂಚಾರ ಪೊಲೀಸರ ಲಭ್ಯತೆಗನುಗುಣವಾಗಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ತುರ್ತು ಸಂದರ್ಭಗಳು ಎದುರಾದಾಗ ಹಾಗೂ ತಮಗೆ ಅಗತ್ಯವಿದ್ದಾಗ ಸಿಬ್ಬಂದಿಗೆ ರಜೆ ಸಿಗುವುದು ಕಷ್ಟ. ಒಂದು ವೇಳೆ ಸಿಕ್ಕರೂ ಕೇಳಿದಷ್ಟು ರಜೆ ಸಿಗುವುದು ತೀರಾ ವಿರಳ. ಇದು ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಸಿಬ್ಬಂದಿಯ ಅಳಲು.

ಆರೋಗ್ಯ ಸಮಸ್ಯೆ: ‘ನಿರಂತರವಾಗಿ ಕೆಲಸ ಮಾಡುವುದರಿಂದ ಸಂಚಾರ ವಿಭಾಗದ ಸಿಬ್ಬಂದಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಸ್ತೆಯಲ್ಲಿ ನಿಲ್ಲಬೇಕಿರುವುದರಿಂದ ವಾಹನಗಳ ಹೊಗೆ, ವಾತಾವರಣದ ದೂಳಿನಿಂದ ಅನಾರೋಗ್ಯಕ್ಕೀಡಾಗುವುದು ಕಟ್ಟಿಟ್ಟಬುತ್ತಿಯಂತಾಗಿದೆ. ತುರ್ತು ಸಂದರ್ಭದಲ್ಲಿ ಬಿಡುವಿಲ್ಲದೆ ಕೆಲಸ ಮಾಡಬೇಕಿರುತ್ತದೆ’ ಎಂದು ಸಂಚಾರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಸಂಚಾರ ನಿಯಮಗಳನ್ನು ಪಾಲಿಸದ ಕೆಲ ಮಂದಿ ಪ್ರಭಾವಿ ವ್ಯಕ್ತಿಗಳಿಂದ ಕರೆ ಮಾಡಿಸಿ, ದಂಡದಿಂದ ತಪ್ಪಿಸಿಕೊಳ್ಳುತ್ತಾರೆ. ಇತ್ತ ಇಲಾಖೆಯ ಮೇಲಧಿಕಾರಿಗಳು, ಒಬ್ಬ ಸಿಬ್ಬಂದಿ ದಿನಕ್ಕೆ ಕನಿಷ್ಠ 20 ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇವೆಲ್ಲವೂ ಸಿಬ್ಬಂದಿಯನ್ನು ಸಂಕಷ್ಟಕ್ಕೆ ನೂಕುತ್ತಿದೆ’ ಎಂದು ಸಮಸ್ಯೆ ಬಿಚ್ಚಿಟ್ಟರು.

‘ಇಲಾಖೆಯ ನಿಯಮ ಪಾಲಿಸದಿದ್ದರೆ ಶಿಸ್ತುಕ್ರಮಕ್ಕೆ ಒಳಗಾಗಬೇಕು. ಸಂಚಾರ ನಿಯಮ ಉಲ್ಲಂಘಿಸುವ ಕೆಲವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಸಂಗಗಳೂ ನಡೆದಿವೆ. ಇಷ್ಟೆಲ್ಲದರ ಮಧ್ಯೆ, ಸಂಚಾರ ಪೊಲೀಸರು ಅಕ್ರಮವಾಗಿ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪವೂ ಇದೆ. ದಂಡದ ಮೊತ್ತ ಹೆಚ್ಚಿರುವ ಕಾರಣ ಜನರೇ ಒಂದಿಷ್ಟು ಹಣ ನೀಡಿ ತಪ್ಪಿಸಿಕೊಳ್ಳುತ್ತಾರೆ. ಕೆಲವರು ಮಾಡುವ ತಪ್ಪಿಗೆ ಎಲ್ಲ ಸಿಬ್ಬಂದಿಗೂ ಕೆಟ್ಟ ಹೆಸರು ಬರುತ್ತಿದೆ. ಇದೆಲ್ಲ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT