ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಗಲಭೆ: ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ ಸರ್ಕಾರಕ್ಕೆ ಶೀಘ್ರ ವರದಿ

Last Updated 21 ಏಪ್ರಿಲ್ 2022, 10:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ, ವಿವಿಧ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಘಟನೆ ಮುಂದೆಂದೂ ನಡೆಯಬಾರದು. ಈ ನಿಟ್ಟಿನಲ್ಲಿ ಗಲಭೆ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಪ್ರಕರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಇವೆಲ್ಲವನ್ನು ಪರಿಶೀಲಿಸಿ ವರದಿ ನೀಡಲಾಗುವುದು. ಘಟನೆಗಳು ಮರುಕಳಿಸದಂತೆ ಶಾಂತಿ ಸಮಿತಿ ರಚಿಸಬೇಕು. ಅದರಲ್ಲಿ ಎಲ್ಲಾ ಸಮುದಾಯದವರು ಇರಬೇಕು ಎಂದು ಪೊಲೀಸ್ ಕಮಿಷನರ್ ಗೆ ಸೂಚನೆ ನೀಡಿದ್ದೇನೆ ಎಂದರು.

ಏಳು ರಸ್ತೆಗಳು ಸೇರುವ ಜಾಗದಲ್ಲಿ ಘಟನೆ ನಡೆದಿದೆ. ಉದ್ರಿಕ್ತ ಆರೋಪಿಗಳು ಆಕ್ಷೇಪಾರ್ಹ ಸ್ಟೇಟಸ್ ಹಾಕಿದ್ದ ಆರೋಪಿಯನ್ನು ತಮ್ಮ ವಶಕ್ಕೆ ಕೇಳಿದ್ದಾರೆ.‌ ಪೊಲೀಸರು ನಿರಾಕರಿಸಿದಾಗ ಉದ್ರಿಕ್ತರು ಗಲಭೆ ನಡೆಸಿದ್ದಾರೆ. ಆಗ ಕಮಿಷನರ್ ಲಾಭೂ ರಾಮ್ ಅವರ ಕಾಲಿಗೂ ಪೆಟ್ಟಾಗಿದೆ. ಉಳಿದ ಅಧಿಕಾರಿಗಳು ಗಾಯಗೊಂಡಿದ್ದಾರೆ. ಆದರೂ ಲಾಠಿ ಚಾರ್ಚ್ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸ್ ಠಾಣೆಗೆ ಕಲ್ಲು ತೂರುವುದು, ಸಂವಿಧಾನಕ್ಕೆ ಅಗೌರವ ತೋರುವುದು ಎರಡು ಒಂದೇ. ಭಾವನಾತ್ಮಕ ತೀರ್ಮಾನಗಳನ್ನು ಸಮುದಾಯ ಕೈಗೊಳ್ಳಬಾರದು. ಅದರಿಂದಲೇ ತಪ್ಪು ಆಗುತ್ತದೆ. ಹಾಗಾಗಿ, ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಬೇಕು. ಗಲಭೆ ನಡೆಯದಂತೆ ನೀವೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಮುದಾಯದ ಮುಖಂಡರಿಗೆ ಸಲಹೆ ನೀಡಿದ್ದೇನೆ ಎಂದರು.

ಹಿಂದೂ ಮತ್ತು ಮುಸಲ್ಮಾನರನ್ನು ಭಾಷೆ ಮೇಲೆ ಗುರುತು ಹಿಡಿಯಲಾಗದಂತೆ ಹುಬ್ಬಳ್ಳಿ ಮತ್ತು ಧಾರವಾಡದ ಜನ ಬದುಕುತ್ತಿದ್ದಾರೆ. ನಾವು ಭಾರತೀಯರು ಎಂಬ ಭಾವನೆ ಬೆಳೆಸಿಕೊಂಡು, ಕುವೆಂಪು ಹೇಳುವಂತೆ ಸರ್ವ ಜನಾಂಗದ ತೋಟದಂತೆ ಇರಬೇಕು. ನಾವೆಲ್ಲ ಮಾನವರು. ಮಾನವರಾಗಿಯೇ ಬದುಕಬೇಕು. ನಾನು ಪೊಲೀಸ್ ಇಲಾಖೆಯಲ್ಲಿ ಇದ್ದಾಗಲೂ ಇದನ್ನೇ ಪಾಲಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಹಿಂದೂ ಅಥವಾ ಮುಸ್ಲಿಂ ಸತ್ತಾಗ, ಎರಡೂ ಸಮುದಾಯದ ಜನರು ಬಂದು ಹೆಗಲು ಕೊಡಬೇಕು. ಕಿಡಿಗೇಡಿಗಳು ಶೇಕಡಾ ಒಂದೆರಡರಷ್ಟು ಮಂದಿ ಮಾತ್ರ ಇದ್ದಾರೆ. ಬಹುಸಂಖ್ಯಾತರ ಸೌಹಾರ್ದದಿಂದಾಗಿ ದೇಶ ಶಾಂತಿವಾಗಿದೆ. ಇಲ್ಲಿನ ಹಿಂದೂ ಮತ್ತು ಮುಸ್ಲಿಮರು ರಕ್ತಸಂಬಂಧಿಗಳಂತೆ ಇದ್ದಾರೆ. ಮಹಾನಗರದಲ್ಲಿ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗದಂತೆ ಬದುಕಬೇಕು.

ಆಯೋಗದ ಕಾರ್ಯದರ್ಶಿ ಮೊಹಮ್ಮದ್ ನಜೀರ್, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಆರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT