ಶನಿವಾರ, ಡಿಸೆಂಬರ್ 7, 2019
25 °C
ಮೂರು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಚಿವರಾದ ಶೆಟ್ಟರ್, ಜೋಶಿ ಭೂಮಿ ಪೂಜೆ

ಹುಬ್ಬಳ್ಳಿ ಶೀಘ್ರ ದೂಳುಮುಕ್ತವಾಗಲಿದೆ: ಜಗದೀಶ್ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ವಾಣಿಜ್ಯ ನಗರಿ ಹುಬ್ಬಳ್ಳಿಯ ಬಹುತೇಕ ಕಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣಗೊಳ್ಳಲಿದ್ದು, ಆದಷ್ಟು ಬೇಗ ದೂಳಿನಿಂದ ಮುಕ್ತವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ನೀಲಿಜಿನ್ ರಸ್ತೆ ಹಾಗೂ ಕಾಟನ್ ಮಾರ್ಕೆಟ್‌ನಲ್ಲಿ ಕೇಂದ್ರ ರಸ್ತೆ ನಿಧಿಯಡಿ, ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿದ ಅವರು, ‘ಚನ್ನಮ್ಮ ವೃತ್ತದಿಂದ ನೀಲಿಜಿನ್‌ ರಸ್ತೆ, ಕಾಟನ್ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ, ರೋಟರಿ ಶಾಲೆ ಹಾಗೂ ಒಳಭಾಗದ ಮೂರು ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಲಿವೆ’ ಎಂದರು.

‘ಅವಳಿ ನಗರದ ಇನ್ನೂ ಕೆಲ ರಸ್ತೆಗಳಿಗೆ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲೇ ವರ್ಕ್ ಆರ್ಡರ್ ನೀಡಲಾಗುವುದು. ಇದರ ಜತೆಗೆ, ₹140 ಕೋಟಿ ವೆಚ್ಚದಲ್ಲಿ ನಗರೋತ್ಥಾನ ಹಾಗೂ 14ನೇ ಹಣಕಾಸು ಯೋಜನೆಯಡಿ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಜತೆಗೆ, ಲೋಕೋಪಯೋಗಿ ಇಲಾಖೆಯು ₹80 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಿದೆ’ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ನೀಲಿಜಿನ್ ಹಾಗೂ ಕಾಟನ್ ಮಾರ್ಕೆಟ್ ರಸ್ತೆಗಳು ಶಾಪಗ್ರಸ್ತವಾಗಿದ್ದವು. ಇದರಿಂದ ನಾವು ಕೂಡ ಭಾರೀ ಟೀಕೆ ಎದುರಿಸಿದೆವು. ಹಿಂದಿನ ಸರ್ಕಾರ ಈ ರಸ್ತೆಗಳಿಗೆ ₹2 ಕೋಟಿ ವೆಚ್ಚದಲ್ಲಿ ಡಾಂಬರು ಹಾಕಿ, ತೇಪೆ ಹಾಕಲು ನಿರ್ಧರಿಸಿತ್ತು. ಆದರೆ, ನಾನು ಮತ್ತು ಶೆಟ್ಟರ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, 2016ರಲ್ಲಿ ಸಿಆರ್‌ಎಫ್‌ನಡಿ ಕಾಂಕ್ರೀಟ್ ರಸ್ತೆ ಮಂಜೂರು ಮಾಡಿಸಿದೆವು’ ಎಂದರು.

‘2017ರಲ್ಲಿ ಟೆಂಡರ್ ಹಂತಕ್ಕೆ ಬಂದಿತ್ತು. ಆದರೆ, ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್‌.ಡಿ. ರೇವಣ್ಣ ಅವರಿಂದಾಗಿ ಕಾಮಗಾರಿ ಆರಂಭವಾಗಲಿಲ್ಲ. ಪ್ರತಿ ಹಂತದಲ್ಲೂ ಕೆಲಸಕ್ಕೆ ತಡೆಯೊಡ್ಡಿದರು. ಅಂತಿಮವಾಗಿ ರಾಜ್ಯದಲ್ಲೂ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಭಾಗ್ಯ ಸಿಕ್ಕಿತು’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಮೂಲಸೌಕರ್ಯಕ್ಕಾಗಿ ₹1 ಲಕ್ಷ ಕೋಟಿ ಹಾಗೂ ರೈಲ್ವೆಗಾಗಿ ₹10 ಲಕ್ಷ ಕೋಟಿ ಖರ್ಚು ಮಾಡಲಿದೆ. ಆ, ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದೆ’ ಎಂದರು.

ರಸ್ತೆಯ ಗುತ್ತಿಗೆದಾರ ಎನ್‌.ಬಿ. ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಎಸ್‌.ವಿ. ಸಂಕನೂರ, ಪ್ರದೀಪ ಶೆಟ್ಟರ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಸುಧೀರ ಸರಾಫ,, ಶಿವು ಮೆಣಸಿನಕಾಯಿ, ಶಂಕರಣ್ಣ ಮುನವಳ್ಳಿ ಹಾಗೂ ವಿಜಯಾನಂದ ಹೊಸಕೋಟೆ ಇದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು