ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

ಗಣೇಶ ಚತುರ್ಥಿ ಹಬ್ಬದ ಸಂಭ್ರಮ: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
Last Updated 9 ಸೆಪ್ಟೆಂಬರ್ 2021, 16:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣೇಶ ಚತುರ್ಥಿ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಸೇರಿ ವಿವಿಧ ವಸ್ತುಗಳ ಖರೀದಿ ಭರಾಟೆ ಗುರುವಾರ ಜೋರಾಗಿತ್ತು. ಪೂಜಾ ಸಾಮಗ್ರಿಗಳು, ದಿನಸಿ ವಸ್ತುಗಳು, ಹಣ್ಣುಗಳು, ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಗ್ರಾಹಕರು ಬೆಳಿಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು.

ದುರ್ಗದ ಬೈಲ್ ಮಾರುಕಟ್ಟೆ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಜನತಾ ಬಜಾರ್, ದಾಜಿಬಾನ ಪೇಟೆ, ಕೊಪ್ಪಿಕರ ರಸ್ತೆ, ಮರಾಠ ಗಲ್ಲಿ, ದಾಜಿಬಾನಪೇಟೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಕೇಶ್ವಾಪುರ, ಬಂಕಾಪುರ ಚೌಕ ಸೇರಿದಂತೆ ವಿವಿಧೆಡೆ ಹಬ್ಬದ ಖರೀದಿಯ ಸಂಭ್ರಮ ಮನೆ ಮಾಡಿತ್ತು. ಕೆಲವೆಡೆ ರಸ್ತೆ ಬದಿ ಹಾಗೂಖಾಲಿ ಜಾಗಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡು ವಿವಿಧ ಬಗೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.

ಹಬ್ಬದ ಪೂಜಾ ಸಾಮಗ್ರಿಗಳಾದ ತೆಂಗಿನಕಾಯಿ, ಬಾಳೆ ಹಣ್ಣು, ಬಗೆಬಗೆಯ ಹೂವು, ಗರಿಕೆ ಹುಲ್ಲು, ಮಾವಿನ ಸೊಪ್ಪು, ಬಾಳೆ ದಿಂಡು, ನಿಂಬೆ, ತರಹೇವಾರಿ ಹಣ್ಣುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಗ್ರಾಹಕರು ಖರೀದಿಸಿದರು.ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪೆಂಡಾಲ್ ಅಲಂಕರಿಸಲು ಬಣ್ಣಬಣ್ಣದ ತೋರಣ, ವಿದ್ಯುದ್ದೀಪ ಅಲಂಕಾರಿಕ ಪ್ಲಾಸ್ಟಿಕ್ ಬುಟ್ಟಿಗಳು, ಕಲರ್ ಪೇಪರ್‌ಗಳು ಹಾಗೂ ಬಲೂನ್‌ಗಳನ್ನು ಖರೀದಿಸಿ ಸಂಭ್ರಮಿಸಿದರು.

ಬಟ್ಟೆ ಅಂಗಡಿಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸಲು ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳಿಂದಿಡಿದು ಶೋರೂಂಗಳಲ್ಲೂ ವ್ಯಾಪಾರ ಜೋರಾಗಿತ್ತು. ಜನ ಮನೆ–ಮಂದಿಗೆಲ್ಲಾ ಹೊಸ ಬಟ್ಟೆ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಬೆಲೆ ಏರಿಕೆ ಬಿಸಿ

ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ದಿನಸಿ ಸಾಮಗ್ರಿಗಳಷ್ಟೇ ಅಲ್ಲದೆ, ಪೂಜಾ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಕಳೆದ ಸಲ ಒಂದು ಮಾರಿಗೆ ₹20ರಿಂದ ₹25 ಇದ್ದ ಸೇವಂತಿ, ಚೆಂಡು ಹೂ ಈ ಬಾರಿ ₹30ರಿಂದ ₹35 ಇತ್ತು. ಸೇಬಿನ ಬೆಲೆ ಒಂದು ಕೆ.ಜಿ.ಗೆ ₹180ಕ್ಕೆ ಏರಿತ್ತು. ಹಬ್ಬದ ವಿಶೇಷವಾದ ಡೇರಿ ಹೂ 3ಕ್ಕೆ ₹50ಕ್ಕೆ ಮಾರಾಟವಾಗುತ್ತಿತ್ತು. ಕೆ.ಜಿ.ಗೆ ₹20 ಇದ್ದ ಏಲಕ್ಕಿ ಬಾಳೆಹಣ್ಣು ಈ ಬಾರಿ ₹30 ಆಗಿದೆ.

‘ವರ್ಷದಿಂದ ವರ್ಷಕ್ಕೆ ಹಬ್ಬದ ಖರ್ಚು ಹೆಚ್ಚಾಗುತ್ತಲೇ ಇದೆ. ದಿನಸಿ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಹಿಂದೆಲ್ಲಾ ಹಬ್ಬಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದ್ದೆವು. ಬಟ್ಟೆ, ಅಲಂಕಾರಿಕ ವಸ್ತುಗಳು ಸೇರಿದಂತೆ ಮಾರುಕಟ್ಟೆಯಲ್ಲಿ ಕಾಣುತ್ತಿದ್ದ ಹೊಸ ವಸ್ತುಗಳನ್ನು ಖರೀದಿಸುತ್ತಿದ್ದೆವು. ಈಗ, ಹೆಸರಿಗಷ್ಟೇ ಖರೀದಿ ಮಾಡಿ ಹಬ್ಬ ಆಚರಿಸುವ ಸ್ಥಿತಿ ಬಂದಿದೆ’ ಎಂದು ಗ್ರಾಹಕ ಶಿವಲಿಂಗ ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹೂವಿನ ಬೆಳೆ ಈ ಬಾರಿ ಅಂದುಕೊಂಡಂತೆ ಬಂದಿಲ್ಲ. ಮಾರುಕಟ್ಟೆಯಲ್ಲಿ ಸರಿಯಾಗಿ ಹೂವಿನ ಪೂರೈಕೆ ಆಗುತ್ತಿಲ್ಲ. ಬೆಂಗಳೂರು ಸೇರಿದಂತೆ ಬೇರೆ ಕಡೆಯಿಂದಲೂ ಹೂವು ಬಂದಿದೆ. ಹಾಗಾಗಿ, ಬೆಲೆ ಸ್ವಲ್ಪ ಏರಿಕೆಯಾಗಿದೆ. ಬೆಳೆ ಚನ್ನಾಗಿದ್ದಾಗ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ’ ಎಂದು ಹೂವಿನ ವ್ಯಾಪಾರಿ ಅನ್ನಪೂರ್ಣಮ್ಮ ಹೇಳಿದರು.‌

ಕೋವಿಡ್ ನಿಯಮ ಲೆಕ್ಕಕ್ಕಿಲ್ಲ

ಮಾರುಕಟ್ಟೆ ಸೇರಿದಂತೆ ಬಹುತೇಕ ಕಡೆ ಗ್ರಾಹಕರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಖರೀದಿಯಲ್ಲಿ ತೊಡಗಿದ್ದರು. ಕೆಲವರಷ್ಟೇ ಮಾಸ್ಕ್ ಧರಿಸಿದ್ದರು. ಇನ್ನು ಕೊರೊನಾ ಸೋಂಕು ಹರಡದಂತೆ ಸೂಕ್ತ ಅಂತರ ಕಾಯ್ದುಕೊಳ್ಳುವಿಕೆಯ ನಿಯಮವನ್ನು ಲೆಕ್ಕಿಸದೆ ಗುಂಪುಗೂಡಿ ಖರೀದಿಸುತ್ತಿದ್ದ ದೃಶ್ಯ ಬಹುತೇಕ ಕಡೆ ಕಂಡುಬಂತು. ನಿಯಮ ಪಾಲನೆ ಕುರಿತು ನಿಗಾ ವಹಿಸಲು ಪಾಲಿಕೆ ಅಧಿಕಾರಿಗಳಾಗಲೀ, ಪೊಲೀಸರಾಗಲೀ ಯಾರೂ ಸ್ಥಳದಲ್ಲಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT