ಗುರುವಾರ , ಸೆಪ್ಟೆಂಬರ್ 19, 2019
21 °C
‘ಟೈಮ್‌ ಬಾಂಬ್‌ ಎಕ್ಸ್‌ಪರ್ಟ್‌ ಜಗದೀಶ ಶೆಟ್ಟರ್‌’: ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಟೀಕೆ

ನನ್ನ ಬಗ್ಗೆ ಅನುಕಂಪ ಬೇಕಿಲ್ಲ: ಸಿದ್ದರಾಮಯ್ಯಗೆ ಶೆಟ್ಟರ್‌ ತಿರುಗೇಟು

Published:
Updated:

ಹುಬ್ಬಳ್ಳಿ: ಪಕ್ಷದಲ್ಲಿ ನನ್ನ ಜವಾಬ್ದಾರಿಗಳೇನು ಎನ್ನುವುದು ಚೆನ್ನಾಗಿ ಗೊತ್ತಿದೆ. ಅವುಗಳನ್ನು ಸರಿಯಾಗಿ ನಿಭಾಯಿಸುತ್ತಿದ್ದೇನೆ. ಆದ್ದರಿಂದ ನನ್ನ ಬಗ್ಗೆ ಅನುಕಂಪ ತೋರಿಸುವುದು ಬೇಕಿಲ್ಲ ಎಂದು ಬಿಜೆಪಿ ಶಾಸಕ ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ದರಿಂದ ಅವರು ಟೈಂ ಬಾಂಬ್‌ ಎಂದು ಶೆಟ್ಟರ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ‘ಪಕ್ಷದೊಳಗಿನ ತನ್ನ ರಾಜಕೀಯ ವಿರೋಧಿ ಬಿ.ಎಸ್.ಯಡಿಯೂರಪ್ಪನವರಿಗೆ ಅವರು ಇಡ್ತಾ ಇರುವ ಟೈಬಾಂಬ್‌ಗಳೆಲ್ಲ ಠುಸ್ ಆಗುತ್ತಿರುವುದಕ್ಕೆ ಅವರು ಹತಾಶರಾಗಿದ್ದಾರೆ. ಜಗದೀಶ ಶೆಟ್ಟರ್‌ಗೆ ಸರಿಯಾಗಿ ಒಂದು ವರ್ಷ ಮುಖ್ಯಮಂತ್ರಿಯಾಗಿರಲು ಯಡಿಯೂರಪ್ಪ ಬಿಟ್ಟಿಲ್ಲ. ಪಾಪ ಅವರ ಬಗ್ಗೆ ನನಗೆ ಅನುಕಂಪ ಇದೆ’ ಎಂದಿದ್ದಾರೆ. ‘ಟೈಮ್‌ ಬಾಂಬ್‌ ಎಕ್ಸ್‌ಪರ್ಟ್‌ ಜಗದೀಶ ಶೆಟ್ಟರ್‌’ ಎಂದೂ ಟೀಕಿಸಿದ್ದಾರೆ.

ಆದ್ದರಿಂದ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಶೆಟ್ಟರ್‌ ‘ಸಿದ್ದರಾಮಯ್ಯ ಟ್ವಿಟರ್‌ ಮೂಲಕ ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಅದು ನನಗೆ ಅಗತ್ಯವಿಲ್ಲ. ಮೇ 23ರ ಬಳಿಕ ಸಿದ್ದರಾಮಯ್ಯ ಅವರ ಟೈಂ ಬಾಂಬ್‌ ಸ್ಪೋಟಗೊಳ್ಳುತ್ತದೆ. ಸರ್ಕಾರ ಬೀಳಿಸಲು ಅವರು ಮಾಡುತ್ತಿರುವ ಕುತಂತ್ರ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

‘ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ 71 ಪ್ರಕರಣಗಳಿವೆ. ಅರ್ಕಾವತಿ ಬಡಾವಣೆಯಲ್ಲಿ 900 ಎಕರೆ ಭೂ ಸ್ವಾಧೀನ ಮಾಡಿದ ಕುರಿತು ಕೆಂಪಣ್ಣನವರ ಆಯೋಗ ವರದಿಯಲ್ಲಿ ಏನಿದೆ ಎಂಬುದು ಕೂಡ ಬಹಿರಂಗವಾಗಿಲ್ಲ. ಈ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆದರೆ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗುತ್ತಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಯಮ್ಮ ಘನತೆಯಿಂದ ಮಾತನಾಡಲಿ’ ಎಂದು ಎಚ್ಚರಿಕೆ ನೀಡಿದರು.

ಸಂಸದ ಪ್ರಹ್ಲಾದ ಜೋಶಿ ‘ಪ್ರಚಾರ ಭಾಷಣದಲ್ಲಿ ಜೋಶಿ ಎಲ್ಲಿದ್ದೀಯಪ್ಪಾ ಎಂದು ಜನ ಪ್ರಶ್ನಿಸುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈಗ ಚಾಮುಂಡೇಶ್ವರಿಯ ಜನ ಕೂಡ ಸಿದ್ದರಾಮಯ್ಯ ಅವರನ್ನು ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಬೌದ್ಧಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್‌ಗೆ ಕುಂದಗೋಳ ಕ್ಷೇತ್ರದಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

Post Comments (+)