ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ವೃತ್ತ ಸಮೀಪದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ಆರಂಭವಾಗಿದೆ.
ಬೆಳಿಗ್ಗೆ 10 ಗಂಟೆಯಿಂದಲೇ ಬಿಜೆಪಿ ಶಾಸಕರು, ಕಾರ್ಯಕರ್ತರು, ಹಿಂದೂ ಸಂಘಟನೆಗಳ ಪ್ರಮುಖರು, ಗಜಾನನ ಮಂಡಳಿ ಪದಾಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರಮುಖರು ಮೈದಾನದಲ್ಲಿ ಜಮಾಯಿಸಿದ್ದರು. 11.30ರವರೆಗೆ ವಿವಿಧ ಪೂಜೆ ಮತ್ತು ಇನ್ನಿತರ ಕಾರ್ಯಕ್ರಮ ನಡೆಯಿತು.
ಪಾಲಿಕೆ ವಿಧಿಸಿದ್ದ ಷರತ್ತಿನಂತೆ 11.45ರ ಸುಮಾರಿಗೆ ಗಣೇಶಮೂರ್ತಿಯನ್ನು ಮೈದಾನದಿಂದ ಹೊರಗೆ ತರಲಾಯಿತು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡು ಮುಖಂಡರು ಭಾಷಣ ಮಾಡಿದರು. ಅಬ್ಬರದ ಡಿಜೆ ಗಾಯನದೊಂದಿಗೆ ಮೆರವಣಿಗೆ ಆರಂಭವಾಗಿದೆ.
ರಾಣಿ ಚನ್ನಮ್ಮ ವೃತ್ತದ ಸುತ್ತಲೂ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಹಿಡಿದು ಸಂಭ್ರಮಿಸುತ್ತಿದ್ದಾರೆ. ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಮುಖಂಡ ಸಿ.ಟಿ.ರವಿ ಹಾಗೂ ವಿ.ಎಸ್‌ವಿ. ಪ್ರಸಾದ್, ಸಂಜೀವ ಬಡಸ್ಕರ, ಸಂತೋಷ ಚವ್ಹಾಣ, ಮಹೇಂದ್ರ ಕೌತಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.
ಮೆರವಣಿಗೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಆಗದಿರಲಿಯೆಂದು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.