ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ನೀಡಿದರೆ ಪರಿಷತ್‌ನಿಂದಲೇ ಕನ್ನಡ ಭವನ: ಬಳಿಗಾರ

Last Updated 28 ಜುಲೈ 2019, 12:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕನ್ನಡದ ಕೆಲಸ ಮಾಡಲು ಪರಿಷತ್‌ ಸದಾ ಸಿದ್ಧವಿದ್ದು, ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಮೂರು ಅಥವಾ ಐದು ಗುಂಟೆ ಭೂಮಿ ನೀಡಿದರೆ ಪರಿಷತ್‌ ವತಿಯಿಂದಲೇ ₹ 25 ಲಕ್ಷ ಅನುದಾನದಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ‘ಕನ್ನಡದ ಕೆಲಸಕ್ಕೆ ಅನುದಾನದ ಕೊರತೆಯಿಲ್ಲ. ಪರಿಷತ್‌ಗೆ, ರಾಜ್ಯ ಸರ್ಕಾರ ₹ 5 ಕೋಟಿ ನೀಡಿದೆ. ಭೂಮಿ ಕೊಡುತ್ತೇವೆ ಎನ್ನುವ ಹೇಳಿಕೆ ಭರವಸೆಗಷ್ಟೇ ಸೀಮಿತವಾಗಬಾರದು’ ಎಂದರು.

ಕಲಘಟಗಿ ತಾಲ್ಲೂಕಿನ ಹುಲ್ಲಂಬಿಯ ಬಸವರಾಜ ಸಿದ್ದಾಶ್ರಮ ‘ನಮ್ಮೂರಿನವರೇ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಐದು ಗುಂಟೆ ಜಾಗ ಕೊಡುತ್ತೇನೆ. ಕನ್ನಡ ಭವನ ನಿರ್ಮಿಸಿಕೊಡಿ’ ಎಂದರು. ಇದಕ್ಕೆ ಬಳಿಗಾರ ಸಮ್ಮತಿ ಸೂಚಿಸಿದರು.

ಬಳಿಕ ಮಾತು ಮುಂದುವರಿಸಿದ ಬಳಿಗಾರ, ರಾಜ್ಯ ಸರ್ಕಾರ ಈಗ ಜಿಲ್ಲಾ ಸಮ್ಮೇಳನಗಳಿಗೆ ₹ 5 ಲಕ್ಷ ಮತ್ತು ತಾಲ್ಲೂಕು ಸಮ್ಮೇಳನಗಳಿಗೆ ₹ 1 ಲಕ್ಷ ಅನುದಾನ ನೀಡುತ್ತಿದೆ. ಇದನ್ನು ದುಪ್ಪಟ್ಟು ಮಾಡಬೇಕು ಎಂದು ಆಗ್ರಹಿಸಿದರು.

‘ಇಂಗ್ಲಿಷ್‌ ವ್ಯಾಮೋಹದಿಂದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಕಂಟಕ ಎದುರಾಗಿದೆ. ಶಾಸ್ತ್ರೀಯ ಸ್ಥಾನಮಾನ ಗಳಿಸಿದ ಜಗತ್ತಿನ ಕೆಲವೇ ಭಾಷೆಗಳಲ್ಲಿ ಒಂದಾದ ಕನ್ನಡದ ಉಳಿವಿಗೆ ಮನೆಯಿಂದಲೇ ಕೆಲಸ ಆರಂಭವಾಗಬೇಕು’ ಎಂದರು.

‘ಇಂಗ್ಲಿಷ್‌ ಬಳಕೆ ಬಿಟ್ಟು, ತಾಯಂದಿರು ಮನೆಯಿಂದಲೇ ತಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು; ದುರ್ದೈವವೆಂದರೆ ರಾಜ್ಯ ಸರ್ಕಾರವೇ ಪ್ರಾಥಮಿಕ ಹಂತದಿಂದ ಇಂಗ್ಲಿಷ್‌ ಕಲಿಸಲು ಮುಂದಾಗಿದೆ. ಇದನ್ನು ಎದುರಿಸುವುದು ಹೇಗೆ ಎನ್ನುವುದರ ಬಗ್ಗೆ ಚಿಂತನೆ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ನಿಕಟಪೂರ್ವ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ‘ತಾಲ್ಲೂಕು ಮಟ್ಟದ ಸಮ್ಮೇಳನಗಳಿಗೆ ಸಾಹಿತಿಗಳೇ ಅಧ್ಯಕ್ಷರಾಗಬೇಕು ಎನ್ನುವ ಪರಿಪಾಠ ಸರಿಯಲ್ಲ. ಶಿಕ್ಷಕ, ಕೃಷಿಕ, ಜ್ಞಾನವಂತ ಕೂಡ ಅಧ್ಯಕ್ಷರಾಗಬೇಕು’ ಎಂದರು.

ಧ್ವಜಾರೋಹಣ: ಮೊದಲು ಮಾಜಿ ಸಂಸದ ಐ.ಜಿ. ಸನದಿ ರಾಷ್ಟ್ರಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪರಿಷತ್‌ ಧ್ವಜಾರೋಹಣ ಮತ್ತು ಅವ್ವಾ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಶಶಿ ಸಾಲಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಪ್ರೊ. ಕೆ.ಎಸ್‌. ಕೌಜಲಗಿ, ಮುಖ್ಯಶಿಕ್ಷಕ ರಾಮು ಮೂಲಗಿ, ಕ.ರ.ವೇ. ಅಧ್ಯಕ್ಷ ಅಮೃತ ಇಜಾರಿ, ಸಾಹಿತಿ ಡಾ. ಗುರುಲಿಂಗ ಕಾಪಸೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT