ಶನಿವಾರ, ಸೆಪ್ಟೆಂಬರ್ 25, 2021
24 °C

ಹುಬ್ಬಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ ಹಿರಿಯ ಪೊಲೀಸರೊಂದಿಗೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅವಳಿನಗರದಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಹಾಗೂ ಮತ್ತಷ್ಟು ಪೊಲೀಸ್ ಠಾಣೆಗಳ ಅಗತ್ಯವಿದ್ದರೆ, ಇಲ್ಲಿನ ಪೊಲೀಸ್ ಕಮಿಷನರ್ ಪ್ರಸ್ತಾವ ಕಳಿಸಲಿ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನವನಗರದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬುಧವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಚಿವನಾದ ಬಳಿಕ ಎಲ್ಲಾ ಕಮಿಷನರೇಟ್‌ಗಳಿಗೂ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೇನೆ. ಅದರ ಭಾಗವಾಗಿ ಹುಬ್ಬಳ್ಳಿ–ಧಾರವಾಡ ಪೊಲೀಸರೊಂದಿಗೆ ಸಭೆ ಜರುಗಿದೆ. ಕಾನೂನು ಸುವ್ಯವಸ್ಥೆಯ ಮಾಹಿತಿ ಪಡೆದಿದ್ದೇನೆ. ಸಿಬ್ಬಂದಿಯ ಕುಂದಕೊರತೆ ಆಲಿಸಿ, ಕೆಲ ಸಲಹೆಗಳನ್ನು ಸಹ ನೀಡಿದ್ದೇನೆ’ ಎಂದರು.

‘ಯಾವ ಅಧಿಕಾರಿಯೇ ಆದರೂ ಕನಿಷ್ಠ ಒಂದು ವರ್ಷ ಒಂದು ಕಡೆ ಇರಬೇಕು. ಆತನ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಇತರ ಆರೋಪಗಳು ಹೆಚ್ಚಾಗಿ ಕೇಳಿ ಬಂದರೆ ವರ್ಗಾವಣೆ ಅನಿವಾರ್ಯ. ಉತ್ತಮವಾಗಿ ಕೆಲಸ ಮಾಡುವವರನ್ನು ಮೂರಕ್ಕಿಂತಲೂ ಹೆಚ್ಚು ವರ್ಷ ಒಂದು ಕಡೆ ಇರಬಹುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಇಲಾಖೆಯಲ್ಲಿ ಮೂರು ವರ್ಷದ ಹಿಂದೆ ವಿವಿಧ ಹಂತದಲ್ಲಿ 33 ಸಾವಿರ ಹುದ್ದೆಗಳು ಖಾಲಿ ಇದ್ದವು. ನಮ್ಮ ಸರ್ಕಾರ ನೇಮಕಾತಿಗೆ ಒತ್ತು ನೀಡಿದ್ದರಿಂದ 16 ಸಾವಿರ ಹುದ್ದೆಗಳು ಖಾಲಿ ಇದ್ದವು. ಈಗ 4 ಸಾವಿರ ನೇಮಕಾತಿಗೆ ಮುಂದಾಗಿದ್ದು, ಉಳಿದ 12 ಸಾವಿರ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದು ಹೇಳಿದರು.

ಅವರ ಬುದ್ಧಿಗೆ ಏನೆನ್ನಬೇಕೊ:

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಿವರಾಜ ತಂಗಡಗಿ ಅವರ, ‘ನಿರೂಪಕಿ ಅನುಶ್ರೀ ಬದಲು ಗೃಹ ಸಚಿವರು ಮತ್ತು ಸಿ.ಟಿ. ರವಿ ಅವರಿಗೆ ಡ್ರಗ್ಸ್ ಪರೀಕ್ಷೆ ಮಾಡಬೇಕು’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಅವರ ಬುದ್ಧಿಗೆ ಏನು ಹೇಳಬೇಕೊ ಗೊತ್ತಿಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಲಘುವಾಗಿ ಮಾತನಾಡಿದರೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಸಭೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಮಿಷನರ್ ಲಾಬುರಾಮ್, ‘ಕಮಿಷನರೇಟ್‌ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ, ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದ ಸಚಿವರು, ಅಪರಾಧ ತಡೆಗೆ ಕೆಲ ಸಲಹೆಗಳನ್ನು ನೀಡಿದರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು