ಸೋಮವಾರ, ಮೇ 23, 2022
28 °C

ಸಿದ್ದರಾಮಯ್ಯ ಹಣ ಕೊಡದಿದ್ದರೆ ಮಂದಿರ ನಿರ್ಮಾಣವಾಗುವುದಿಲ್ಲವೇ: ಶೆಟ್ಟರ್‌ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಜನ ಸ್ವಯಂ ಪ್ರೇರಣೆಯಿಂದ ಹಣ ನೀಡುತ್ತಿದ್ದಾರೆ. ಈಗಾಗಲೇ ಸಾವಿರಾರು ಕೋಟಿ ಸಂಗ್ರಹವಾಗಿದೆ. ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ಹಣ ನೀಡದಿದ್ದರೆ ಮಂದಿರ ನಿರ್ಮಾಣವಾಗುವುದಿಲ್ಲವೇ? ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದರೂ ಅದು ವಿವಾದಾಸ್ಪದ ಜಾಗವೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ವಕೀಲಿಕಿ ಮಾಡಿದ್ದಾರೊ; ಇಲ್ಲವೊ ಎನ್ನುವ ಅನುಮಾನ ಮೂಡುತ್ತಿದೆ. ಅವರು ಹಣ ಕೊಡದಿದ್ದರೆ ಏನೂ ಆಗುವುದಿಲ್ಲ’ ಎಂದರು.

‘ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ರಾಮಮಂದಿರ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಅವರು ನಂಬಿಕೊಂಡಿರುವ ವೋಟ್‌ಬ್ಯಾಂಕ್‌ನ ಜನರೇ ರಾಮಮಂದಿರಕ್ಕೆ ಹಣ ನೀಡುತ್ತಿದ್ದಾರೆ. ಒಂದು ಸಮಾಜವನ್ನು ಓಲೈಸಲು ಸಿದ್ದರಾಮಯ್ಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ’ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳ ಕುರಿತು ಕೇಳಲಾದ ಪ್ರಶ್ನೆಗೆ ‘ವಿವಿಧ ಸಮುದಾಯಗಳ ಬೇಡಿಕೆಯಾದ ಮೀಸಲಾತಿಗಳ ಬಗ್ಗೆ ಅಧ್ಯಯನ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈಗಾಗಲೇ ಸೂಚಿಸಿದ್ದಾರೆ. ಅಧ್ಯಯನ ನಡೆಯುತ್ತಿದ್ದು, ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು