ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷರಿಗೆ ಸಾವರ್ಕರ್‌ ಶರಣಾಗಿದ್ದರೆ ಮೊದಲ ಪ್ರಧಾನಿಯಾಗುತ್ತಿದ್ದರು: ಸಿಟಿ ರವಿ

ಜಯೋಸ್ತುತೇ: ಅಮರ ಸಾವರ್ಕರ್‌-ಅಜೇಯ ಭಾರತ ಕಾರ್ಯಕ್ರಮ
Last Updated 4 ಸೆಪ್ಟೆಂಬರ್ 2022, 4:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಿ.ಡಿ. ಸಾವರ್ಕರ್‌ ಹೇಡಿಯಾಗಿದ್ದರೆ ಅಂಡಮಾನ್ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರಲಿಲ್ಲ. ಬ್ರಿಟಿಷರಿಗೆ ಶರಣಾಗಿದ್ದರೆ ಆಗಿನ ನಾಯಕರಂತೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಅಷ್ಟೇ ಏಕೆ, ದೇಶದ ಮೊದಲ ಪ್ರಧಾನ ಮಂತ್ರಿ ಆಗಿರುತ್ತಿದ್ದರು’ ಎಂದುಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಭಿಪ್ರಾಯಪಟ್ಟರು.

ಅರಿವು ಮತ್ತು ನಿರಾಮಯ ಫೌಂಡೇಷನ್, ಹುಬ್ಬಳ್ಳಿ ಧಾರವಾಡದ ವಿವಿಧ ಗಣೇಶೋತ್ಸವ ಮಂಡಳಿಗಳು ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ಶನಿವಾರ ನಗರದ ಬಿವಿಬಿ ಕಾಲೇಜಿನಲ್ಲಿ ನಡೆದ ‘ಜಯೋಸ್ತುತೇ, ಅಮರ ಸಾವರ್ಕರ್‌-ಅಜೇಯ ಭಾರತ’ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

‘ವಿ.ಡಿ. ಸಾವರ್ಕರ್‌ ಅಪ್ಪಟ ದೇಶಾಭಿಮಾನಿ. ಅವರ ಬಗ್ಗೆ ಕೆಲವರು ಕೀಳಾಗಿ ಮಾತನಾಡುತ್ತ ಹೇಡಿ ಎನ್ನುತ್ತಾರೆ. ಅಂಥವರು ಒಮ್ಮೆಅವರಬಗ್ಗೆಅಧ್ಯಯನಮಾಡಲಿ. ಅಯೋಧ್ಯಾದ ರಾಮ ಜನ್ಮಭೂಮಿ ಕುರಿತು 1990ರಲ್ಲಿ ಬಿಜೆಪಿ ಜನಜಾಗೃತಿ ಆರಂಭಿಸಿದಾಗ ಜಾತಿ ರಾಜಕಾರಣ ಮುನ್ನೆಲೆಗೆ ಬಂದಿತು. ಆಗ ಹಿಂದುತ್ವದ ರಾಜಕಾರಣ ಜನ್ಮತಳೆದ ಕಾರಣ ವಿ.ಡಿ. ಸಾವರ್ಕರ್‌ ಹೆಸರಿಗೆ ಮಸಿ ಬಳಿಯುವ ಕೆಲಸ ಹೆಚ್ಚಾಯಿತು’ ಎಂದರು.

‘ಕ್ರಾಂತಿಕಾರಿಗಳ ಕೈ ಮೇಲಾದರೆ ಕಷ್ಟ ಎಂದು, ತಮ್ಮ ಬೇಡಿಕೆಗಳನ್ನು ಬ್ರಿಟೀಷ್‌ ಸರ್ಕಾರದ ಮೂಲಕ ಇಡೇರಿಸಿಕೊಳ್ಳಲು 1885ರಲ್ಲಿ ಕಾಂಗ್ರೆಸ್‌ ಹುಟ್ಟಿಕೊಂಡಿತು. 1905ರ ಹೋಳಿ ಹಬ್ಬದ ಸಂದರ್ಭದಲ್ಲಿ ಸಾವರ್ಕರ್‌ ಅವರು ವಿದೇಶಿ ಬಟ್ಟೆ ಸುಟ್ಟು, ಜನರಲ್ಲಿ ದೇಶಿಯ ಕಿಚ್ಚು ಹಚ್ಚಿಸಿದ್ದರು. ಆಗಲೂ ಕಾಂಗ್ರೆಸ್ ಬ್ರಿಟಿಷರ ಅಧೀನದಲ್ಲಿದ್ದು, ಅರ್ಜಿ ನೀಡುವ ಸಂಘಟನೆಯಷ್ಟೇ ಆಗಿತ್ತು. ದೇಶಕ್ಕಾಗಿ ಹೋರಾಡಿದ್ದರೆ, ಅವರಲ್ಲಿ ಯಾರೊಬ್ಬರು ಸಹ ಯಾಕಾಗಿ ಕರಿನೀರಿನ ಶಿಕ್ಷೆ, ಅಂಡಮಾನ್‌ ಸೆರೆಮನೆ ವಾಸ ಮಾಡಲಿಲ್ಲ? 1909 ರಲ್ಲಿಯೇ ಸಾವರ್ಕರ್‌ ಸ್ವರಾಜದ ಬೇಡಿಕೆ ಮುಂದಿಟ್ಟಿದ್ದರು, ಕಾಂಗ್ರೆಸ್ 1929ರಲ್ಲಿ ಬೇಡಿಕೆ ಇಟ್ಟಿತ್ತು’ ಎಂದು ಹೇಳಿದರು.

‘ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದು ಸಂಘ ಪರಿವಾರದವರು ಎಂದು ಆರೋಪಿಸುತ್ತಾರೆ. ಆದರೆ, ದೋಷಾರೋಪ ಪಟ್ಟಿ ಮತ್ತು ಕೋರ್ಟ್ ತೀರ್ಪಿನಲ್ಲಿ ಅದರ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಆ ಕುರಿತು ಕಪೂರ್ ಕಮಿಷನ್ ನೇಮಕ ಮಾಡಿದ್ದು ಸಹ ಅಂದಿನ ನೆಹರೂ ಸರ್ಕಾರವೆ. ಸಾಕ್ಷಿ ಇದ್ದರೆ ಮೇಲ್ಮನವಿ ಸಲ್ಲಿಸಬೇಕಿತ್ತು. ಅದನ್ನು ಮಾಡದೆ, ಅಂದಿನಿಂದ ಇಂದಿನವರೆಗೂ ಸಂಘ–ಪರಿವಾರದ ಬಗ್ಗೆ ಆರೋಪ ಮಾಡುತ್ತಲೇ ಬಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಯೂರ ನೃತ್ಯ ಅಕಾಡೆಮಿ ಕಲಾವಿದರು ನೃತ್ಯ ನಮನ ಸಲ್ಲಿಸಿದರು. ಜಾನಪದ ಕಲಾವಿದ ರಮೇಶ ಮಲ್ಲೇದಿ ಗಾಯನ ಪ್ರಸ್ತುತಪಡಿಸಿದರು. ಉದ್ಯಮಿ ವಿ.ಎಸ್.ವಿ. ಪ್ರಸಾದ, ದಕ್ಷಿಣ ಮಧ್ಯಕ್ಷೇತ್ರದ ಪ್ರಜ್ಞಾ ಪ್ರವಾಹ ಸಂಯೋಜಕ ರಘುನಂದನ, ಸು. ರಾಮಣ್ಣ, ಮಹೇಶ ಟೆಂಗಿನಕಾಯಿ, ಮಲ್ಲಿಕಾರ್ಜುನ ಬಾಳಿಕಾಯಿ, ಸಂಜಯ ಬಡಸ್ಕರ, ವಿನೋದ ಮೊಕಾಶಿ, ಕೃಷ್ಣರಾಜ ಸಾಗೋಟಿ ಇದ್ದರು.

‘ಡಿಸೆಂಬರ್‌ನಲ್ಲಿ ರಾಜಕೀಯ ಧ್ರುವೀಕರಣ’: ಹುಬ್ಬಳ್ಳಿ: ‘ಡಿಸೆಂಬರ್ ಅಂತ್ಯದಲ್ಲಿ ರಾಜ್ಯ ಮತ್ತು ದೇಶದಲ್ಲಿ ರಾಜಕೀಯ ಧ್ರುವೀಕರಣ ಆಗಲಿದ್ದು, ಕಾಂಗ್ರೆಸ್‌ನ ಅನೇಕ ನಾಯಕರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀತಿ, ನಿಯತ್ತು ಮತ್ತು ನೇತೃತ್ವ ಇಲ್ಲದ ಯಾವುದೇ ಪಕ್ಷ ಜಗತ್ತಿನ ಭೂಪಟದಲ್ಲಿ ಇರಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಈಗಿನ ಕಾಂಗ್ರೆಸ್‌ಗೆ ಬಂದಿದೆ. ನಿರ್ದಿಷ್ಟ ಯೋಜನೆ ಹಾಗೂ ಕಾರ್ಯತಂತ್ರವಿಲ್ಲದ ಕಾಂಗ್ರೆಸ್ ಜನಮಾನಸದಿಂದ ದೂರ ಆಗುತ್ತಿದೆ. ಪಕ್ಷದ ಹಿರಿ-ಕಿರಿಯ ಮುಖಂಡರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಎನ್ನುತ್ತೀರೋ ಅಥವಾ ರಾಜಕೀಯ ಧ್ರುವೀಕರಣ ಎನ್ನುತ್ತೀರೋ ಜನತೆಗೆ ಬಿಟ್ಟಿದ್ದು’ ಎಂದು ಮಾರ್ಮಿಕವಾಗಿ ಹೇಳಿದರು.

ಅಂತಿಮವಾಗಿ ಗೆಲ್ಲುವುದು ಸತ್ಯ: ‘ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮುರುಘಾ ಶರಣರು ಬಂಧನವಾಗಿ ತನಿಖೆ ಎದುರಿಸುತ್ತಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ಅದರ ನಂತರ ಸತ್ಯ ಏನೆಂಬುದು ಜನರಿಗೆ ತಿಳಿಯಲಿದೆ. ಸತ್ಯ ಹೊಸಲು ದಾಟುವ ಮೊದಲು, ಸುಳ್ಳು ಊರೆಲ್ಲ ಸುತ್ತಾಡಿ ಬಂದಿರುತ್ತದೆ. ಅಂತಿಮವಾಗಿ ಗೆಲ್ಲುವುದು ಸತ್ಯವೇ’ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT